ಶಿಬಾಜೆಯ ಶ್ರೀಧರ್ ಕೊಲೆ ಪ್ರಕರಣದ ಸಮಗ್ರವಾದ ತನಿಖೆಗೆ ಒತ್ತಾಯಿಸಿ,ಧರ್ಮಸ್ಥಳ ಪೊಲೀಸ್ ಠಾಣೆ ಚಲೋ

ಕರಾವಳಿ

ಬೆಳ್ತಂಗಡಿ: ಶಿಬಾಜೆಯ ಯುವಕ ಶ್ರೀಧರನ ಕೊಲೆ ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು, ಕೊಲೆಗಾರರನ್ನು ರಕ್ಷಿಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ವಿವಿಧ ದಲಿತ ಸಂಘಟನೆಗಳ ಸಹಕಾರದೊಂದಿಗೆ ಧರ್ಮಸ್ಥಳ ಪೊಲೀಸ್ ಠಾಣೆ ಚಲೋ ಕಾರ್ಯಕ್ರಮ ನಡೆಯಿತು.
ನೇತ್ರಾವತಿಯಿಂದ ಆರಂಭಗೊಂಡ ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ಸಂಖ್ಯೆಯಲ್ಲಿ ದಲಿತ ಸಂಘಡನೆಗಳ ಕಾರ್ಯಕರ್ತರು ಉತ್ಸಾಹದಿಂದ ಭಾಗಿಗಳಾದರು. ನೀಲಿ ಬಾವುಟಗಳು ಬಾನೆತ್ತರಕಗಕೆ ಹಾರಾಡಿದವು. ಆರೋಪಿಗಳನ್ನು ರಕ್ಷಿಸುತ್ತಿರುವ ಗ್ರಾ.ಪಂ ಅಧ್ಯಕ್ಷನ ವಿರುದ್ದ ಪೊಲೀಸ್ ಅಧಿಕಾರಿಗಳ ವಿರುದ್ದ ಘೋಷಣೆಗಳು ಮೊಳಗಿದವು.

ಬೆಳ್ತಂಗಡಿ ಪೊಲೀಸ್ ಠಾಣೆಯ ಮುಂದೆ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ ಶಿಬಾಜೆಯಲ್ಲಿ ದಲಿತ ಯುವಕನ ಕೊಲೆಯಾದರೂ ಇಡೀ ಆಡಳಿತ ಯಂತ್ರ ಆರೋಪಿಗಳ ಬೆಂಬಲಕ್ಕೆ ನಿಂತಿದೆ. ಕೊಲೆಗಾರರು ಬಿಜೆಪಿಯವರಾಗಿರುವುದರಿಂದ ಕೊಲೆಯಾದವನಿಗೆ ನ್ಯಾಯವೇ ಸಿಗದ ಸ್ಥಿತಿ ಎದುರಾಗಿದೆ. ಕೊಲೆಯಾದ ಶ್ರೀಧರನ ಕುಟುಂಬಕ್ಕೆ ಸರಕಾರ ಕೂಡಲೇ ಪರಿಹಾರ ಒದಗಿಸಬೇಕು, ಕೊಲೆಗಾರರನ್ನು ರಕ್ಷಿಸಿದ ಗ್ರಾ.ಪಂ ಅಧ್ಯಕ್ಷನ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ಡಿವೈ ಎಸ್.ಪಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ರಾಜ್ಯ ಸಂಘಟನಾ ಸಂಚಾಲಕ ಮಲ್ಲೇಶ್ ಅಂಬುಗ ಮಾತನಾಡಿ ರಾಜ್ಯದಾದ್ಯಂತ ದಲಿತರ ಮೇಲೆ ದೌರ್ಜನ್ಯ ಗಳು ನಿರಂತರ ನಡೆಯುತ್ತಿದೆ ಸರಕಾರ ಪೊಲೀಸರು ಶೋಷಕರ ಬೆಂಬಲಕ್ಕೆ ನಿಂತಿದ್ದಾರೆ ದಲಿತರು ಇದರ ವಿರುದ್ದ ಧ್ವನಿಯೆತ್ತಬೇಕಾಗಿದೆ ಎಂದರು.
ಪ್ರತಿಭಟನೆಯ ನೇತೃತ್ವವನ್ನು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸಂಚಾಲಕ ಅಶೋಕ ಕೊಂಚಾಡಿ, ಸುಂದರ ಮೇರ, ನೇಮಿರಾಜ ಕಿಲ್ಲೂರು, ಶೇಖರ ಕುಕ್ಕೇಡಿ, ಕೊರಗಪ್ಪ ಅಳದಂಗಡಿ, ಜಯಪ್ರಕಾಶ್ ಕನ್ಯಾಡಿ, ರಮೇಶ್ ಕೆಳಗೂರು, ಸೇಸಪ್ಪ ಬೆದ್ರಕಾಡು,ಆನಂದ ಮಂಗಳೂರು, ವಸಂತ ಕುಂಬಲಾಡಿ, ಗಿರೀಶ್ ಉಳ್ಳಾಲ, ಮೋನಪ್ಪ ಮೂಡಿಗೆರೆ, ರವಿ ಮೂಡಿಗೆರೆ, ವೆಂಕಣ್ಣ ಕೊಯ್ಯೂರು,ನಾಗರಾಜ ಲಾಯಿಲ, ಜಯಾನಂದ ಕೊಯ್ಯೂರು, ಜಯಾನಂದ ಪಿಲಿಕಳ, ಶೇಖರ ಲಾಯಿಲ, ಬೇಬಿ ಸುವರ್ಣ, ಶ್ರೀಧರ ಕಳೆಂಜ, ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಮುಖಂಡರುಗಳು ವಹಿಸಿದ್ದರು.ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಪ್ರತಿಭಟನಾ ರ್ರ್ಯಾಲಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.