ಪದ್ಮರಾಜ್, ಮಿಥುನ್ ರೈ ಗೆ ಟಿಕೆಟ್ ಫಿಕ್ಸ್

ಕರಾವಳಿ

ಕಾಂಗ್ರೆಸ್ ಪಾಳೆಯದಲ್ಲಿ ಅಚ್ಚರಿಯ ಬೆಳವಣಿಗೆ

ಕರಾವಳಿ ಭಾಗದಲ್ಲಿ ಬಿಜೆಪಿಯನ್ನು ಈ ಬಾರಿ ಹೇಗಾದರೂ ಮಾಡಿ ಮಟ್ಟ ಹಾಕಲು ಕಾಂಗ್ರೆಸ್ ಹೈಕಮಾಂಡ್ ತೆರೆಮರೆಯ ಕಸರತ್ತು ನಡೆಸುತ್ತಿದ್ದು, ಬಿಜೆಪಿಗೆ ಕರಾವಳಿ ಭಾಗದಲ್ಲಿ ಮೂಗುದಾರ ಹಾಕಲು ಬಿಜೆಪಿ ರೀತಿಯಲ್ಲೇ ಹೊಸ ಮುಖಗಳಿಗೆ ಮಣೆ ಹಾಕಲು ಮುಂದಾಗಿದೆ. ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ ಪ್ಲ್ಯಾನ್ ಸಜ್ಜುಗೊಳಿಸಿದೆ. ಇದೀಗ ಮೂಡಬಿದ್ರೆ ಹಾಗೂ ಬಂಟ್ವಾಳ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಈ ಕುರಿತು ಹೈಕಮಾಂಡ್ ಮೂಲಗಳಿಂದ ಮಹತ್ವದ ಸುದ್ದಿ ಹೊರಬಿದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ರೋಚಕ ಘಟ್ಟ ತಲುಪಿದೆ. ಈ ಬಾರಿ ಉಳ್ಳಾಲ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ಹೊಸ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಇದೀಗ ಭಾರೀ ಪೈಪೋಟಿ ಏರ್ಪಟ್ಟಿದ್ದ ಮೂಡಬಿದ್ರೆ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದಿಂದ ಬಂಟ ಸಮುದಾಯದ ಯುವ ಮುಖಂಡ ಮಿಥುನ್ ರೈ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಬಹುತೇಕ ಫಿಕ್ಸ್ ಮಾಡಿದೆ.

ಇನ್ನೊಂದು ಅಚ್ಚರಿಯ ಬೆಳವಣಿಗೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಸಜ್ಜಾಗಿದೆ. ಬಂಟ್ವಾಳ ಕ್ಷೇತ್ರದಲ್ಲಿ ಪದ್ಮರಾಜ್ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಮೂಲಗಳಿಂದ ತಿಳಿದು ಬಂದಿದೆ. ಕಾಂಗ್ರೆಸ್ ಹೊಸ ಸೂತ್ರದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಬಂಟ, 2 ಬಿಲ್ಲವ, 2 ಮುಸ್ಲಿಂ, 1 ಕ್ರಿಶ್ಚಿಯನ್ ಹಾಗೂ ಒಂದು ಕ್ಷೇತ್ರವನ್ನು ಮೀಸಲು ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.