ನಕಲಿ ಮಾರ್ಕ್ಸ್ ಕಾರ್ಡ್ ತಯಾರು ಮಾಡುತ್ತಿದ್ದ ಬೃಹತ್ ಜಾಲ ಪತ್ತೆ

ರಾಜ್ಯ

6800 ನಕಲಿ ಮಾರ್ಕ್ಸ್ ಕಾರ್ಡ್ ಗಳನ್ನು ಪತ್ತೆ ಮಾಡಿದ ಸಿಸಿಬಿ ಪೊಲೀಸರು

ಇದೀಗ ದೊಡ್ಡ ಪ್ರಮಾಣದಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ತಯಾರು ಮಾಡುತ್ತಿದ್ದ ಬೃಹತ್ ಜಾಲ ಬೆಳಕಿಗೆ ಬಂದಿದ್ದು ಒಮ್ಮೆಗೆ ಎಲ್ಲಾ ವಿಶ್ವವಿದ್ಯಾಲಯಗಳು ಬೆಚ್ಚಿ ಬೀಳುವಂತೆ ಮಾಡಿದೆ.

ಈ ಪ್ರಕರಣ ಕುರಿತಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ದಿ ಹೇಳಿಕೆ ನೀಡಿದ್ದು ಒಂದೂವರೆ ತಿಂಗಳ ಹಿಂದೆ ನಕಲಿ ಮಾರ್ಕ್ಸ್ ಕಾರ್ಡ್ ದಂಧೆಯನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದರು. ಇದರ ಮುಂದುವರಿದ ಭಾಗವಾಗಿ ಸಿಸಿಬಿ ಕಾರ್ಯಾಚರಣೆ ನಡೆಸಿತ್ತು. ಇದೇ ರೀತಿ ನಕಲಿ ಮಾರ್ಕ್ಸ್ ಮಾಡುತ್ತಿದ್ದ ಐದು ಸಂಸ್ಥೆಗಳ ವಿರುದ್ಧ ಸಿಸಿಬಿ ದಾಳಿ ಮಾಡಿತ್ತು. ಈ ವೇಳೆ 6800 ನಕಲಿ ಮಾರ್ಕ್ಸ್ ಕಾರ್ಡ್ ಪತ್ತೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇವು 15 ವಿಶ್ವ ವಿದ್ಯಾಲಯ ಹಾಗೂ ಸಂಸ್ಥೆಗಳಿಗೆ ಸಂಬಂಧಿಸಿದ ಮಾರ್ಕ್ಸ್ ಕಾರ್ಡ್ ಗಳಾಗಿದ್ದು ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಯಾರಾದರೂ ಈ ರೀತಿಯ ನಕಲಿ ಮಾರ್ಕ್ಸ್ ಕಾರ್ಡ್ ಬಳಸುತ್ತಾ ಇದ್ದಾರೆ. ಅವರಿಗೆ ಸಂಕಷ್ಟ ಎದುರಾಗಲಿದೆ. ಇಂತಹ ಸಂಸ್ಥೆಗಳಿಂದ ದೂರ ಇರಬೇಕು ಎಂದು ಸಾರ್ವಜನಿಕರಲ್ಲಿ ಕಮೀಷನರ್ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಕರೆಸ್ಪಾಂಡೆನ್ಸ್ ಕಾಲೇಜುಗಳ ಮೇಲೆ ದಾಳಿ ನಡೆಸಿದ ಸಂದರ್ಭ ಸಿಸಿಬಿ ಪೊಲೀಸರು ನಕಲಿ ಮಾರ್ಕ್ಸ್ ಕಾರ್ಡ್ ತಯಾರಿಸುತ್ತಿದ್ದ ಬೃಹತ್ ಜಾಲವನ್ನು ಪತ್ತೆ ಮಾಡಿದರು. ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಬರೋಬ್ಬರಿ 6800 ನಕಲಿ ಮಾರ್ಕ್ಸ್ ಕಾರ್ಡ್ ಗಳು ಪತ್ತೆಯಾಗಿದ್ದು ಈ ವೇಳೆ ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗೂ 13 ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.