ಇಂದು ಕಾಂಗ್ರೆಸ್‌ ಸಂಭವನೀಯ ಅಭ್ಯರ್ಥಿಗಳ ಪಟ್ಟಿ;ಫೆ.2ರಂದು ಸಭೆ

ರಾಜ್ಯ

ಕನಿಷ್ಠ 100 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ, ಹೈಕಮಾಂಡ್‌ಗೆ ರವಾನಿಸುವ ಬಗ್ಗೆ ಇಂದು ಕೆಪಿಸಿಸಿಯಲ್ಲಿ ಚರ್ಚೆ

ಫೆಬ್ರವರಿ ಎರಡನೇ ವಾರದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ.

ರಾಜ್ಯದಲ್ಲಿ ಇನ್ನೇನು ಮೂರು ತಿಂಗಳಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆಗೆ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಕೆಪಿಸಿಸಿ ಚುನಾವಣಾ ಸಮಿತಿಯ ಸಭೆ ಫೆ.2ರಂದು ನಡೆಯಲಿದೆ. ಕನಿಷ್ಠ 100 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ, ಹೈಕಮಾಂಡ್‌ಗೆ ರವಾನಿಸುವ ಬಗ್ಗೆ ಕಾಂಗ್ರೆಸ್‌ ನಾಯಕರು ಈ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.ಕೆಲವು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಸ್ಥಳೀಯ ನಾಯಕರ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿದೆ. ಅಂಥ ಕ್ಷೇತ್ರಗಳನ್ನು ಹೊರತುಪಡಿಸಿ, ಇತರ ಕ್ಷೇತ್ರಗಳಿಗೆ 2–3 ಆಕಾಂಕ್ಷಿಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಬಹುತೇಕ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್‌ ಸಿಗುವುದು ಖಚಿತ. ಫೆಬ್ರುವರಿ ಎರಡನೇ ವಾರದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಹಾಲಿ ಶಾಸಕರು ಸ್ಪರ್ಧೆಯಿಂದ ಹಿಂದೆ ಸರಿಯಲು ಬಯಸಿದ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್‌ ನೀಡಬೇಕೆಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಆಗಲಿದೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಎರಡನೇ ಹಂತದ ‘ಪ್ರಜಾಧ್ವನಿ’ ಯಾತ್ರೆ ಫೆ. 3ರಿಂದ ಆರಂಭವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತ್ಯೇಕವಾಗಿ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಿಂದ ಈ ಯಾತ್ರೆ ಆರಂಭಿಸಲಿದ್ದಾರೆ. ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಸುತ್ತಾಡಲು ನಿರ್ಧರಿಸಿದ್ದಾರೆ. ಈ ಪ್ರವಾಸ, ಈ ಇಬ್ಬರು ನಾಯಕರಿಗೂ ಪ್ರತಿಷ್ಠೆಯ ವಿಷಯ ಆಗಲಿದೆ ಎಂಬ ಚರ್ಚೆಯೂ ಕಾಂಗ್ರೆಸ್‌ ವಲಯದಲ್ಲಿ ನಡೆದಿದೆ.

ಇಂದು ಮಧ್ಯಾಹ್ನ 3 ಗಂಟೆಗೆ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳೂ ಭಾಗವಹಿಸಲಿದ್ದಾರೆ. ಇನ್ನಿರುವ ದಿನಗಳಲ್ಲಿ ಚುನಾವಣೆ ಎದುರಿಸಲು ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳು, ರಣತಂತ್ರದ ಕುರಿತು ಎರಡೂ ಸಭೆಗಳಲ್ಲಿ ಚರ್ಚೆ ನಡೆಯಲಿದೆ. ಬೂತ್‌ಮಟ್ಟದಲ್ಲಿ ಸಂಘಟನೆ ಚುರುಕು ಮುಟ್ಟಿಸುವ ಜೊತೆಗೆ ಸ್ಥಳೀಯ ನಾಯಕರನ್ನು ಚುನಾ ವಣೆಗೆ ಸಜ್ಜುಗೊಳಿಸುವ ಕುರಿತು ನಾಯಕರು ವಿಚಾರ ವಿನಿಮಯ ನಡೆಸಲಿದ್ದಾರೆ. ಅಲ್ಲದೆ, ಬಿಜೆಪಿ, ಜೆಡಿಎಸ್‌ನ ಕೆಲವು ಮುಖಂಡರು ಕಾಂಗ್ರೆಸ್‌ ಸೇರಲು ಮುಂದಾಗಿದ್ದು, ಕೆಲವರನ್ನು ಫೆಬ್ರುವರಿ ಮೊದಲ ವಾರದಲ್ಲಿಯೇ ಪಕ್ಷಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ.ಇತರ ಪಕ್ಷಗಳಿಂದ ಕಾಂಗ್ರೆಸ್‌ ಸೇರುವರಿಂದ ಪಕ್ಷಕ್ಕೆ ಆಗಬಹುದಾದ ಲಾಭದ ಬಗ್ಗೆಯೂ ಚರ್ಚೆ ನಡೆಯಲಿದೆ’ ಎಂದೂ ಮೂಲಗಳು ಹೇಳಿವೆ.