ಸಫೀಯಾ ಮಂಗಳೂರು ಯೂನಿವರ್ಸಿಟಿಯಲ್ಲಿ ಉಪನ್ಯಾಸಕಿ ಆಗಿರದೇ ಇದ್ದರೆ ವಿಠಲ ಮಲೆಕುಡಿಯ ಇಂದು ಪತ್ರಕರ್ತನಾಗುತ್ತಿರಲಿಲ್ಲ?

ಕರಾವಳಿ

✍️.ನವೀನ್ ಸೂರಿಂಜೆ

ಸಫೀಯಾ ಎಂಬ ಮಾನವತವಾದಿ ಮುಸ್ಲಿಂ ಸಮುದಾಯದ ಹೆಣ್ಣು ಮಗಳು ಮಂಗಳೂರು ಯೂನಿವರ್ಸಿಟಿಯಲ್ಲಿ ಉಪನ್ಯಾಸಕಿ ಆಗಿರದೇ ಇದ್ದರೆ ವಿಠಲ ಮಲೆಕುಡಿಯ ಎಂಬ ಯುವಕ ಇಂದು ಪತ್ರಕರ್ತನಾಗುತ್ತಿರಲಿಲ್ಲವೇನೋ ? ನಮ್ಮ ಜೊತೆ ಪತ್ರಕರ್ತೆಯಾಗಿದ್ದ ಸಫೀಯಾ ಹತ್ತು ವರ್ಷದ ಹಿಂದೆಯೇ ಪತ್ರಿಕೋದ್ಯೋಗವನ್ನು ಬಿಟ್ಟು ಉಪನ್ಯಾಸ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು.

ವಿಠಲ ಮಲೆಕುಡಿಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಸೇರಿಕೊಂಡಾಗ ಸಫೀಯಾ ಎಂಬ ಅ ಹೆಣ್ಣು ಮಗಳು ಉಪನ್ಯಾಸಕಿಯಾಗಿದ್ದರು. ವಿಠಲ ಮಲೆಕುಡಿಯನನ್ನು ನಕ್ಸಲ್ ಆರೋಪದಲ್ಲಿ ಬಂಧಿಸಿ ಜೈಲಿನಲ್ಲಿಟ್ಟಿದ್ದರು.ನಾವು ವಿಠಲನನ್ನು ಜಾಮೀನಿನ ಮೇಲೆ ಬಿಡಿಸಲು ಓಡಾಡುತ್ತಿದ್ದೆವು.ಮುನೀರ್ ಕಾಟಿಪಳ್ಳ ನೇತೃತ್ವದ ಡಿವೈಎಫ್ಐ, ಎಡಚಿಂತಕರು ರಾಜ್ಯ/ರಾಷ್ಟ್ರವ್ಯಾಪಿ ಹೋರಾಟದ ಮೂಲಕ ವಿಠಲನ ಬಿಡುಗಡೆಗೆ ಒತ್ತಾಯಿಸುತ್ತಿದ್ದರು. ಅದೊಂದು ದಿನ ಸಫೀಯಾ ನನಗೆ ಫೋನ್ ಮಾಡಿದಳು. “ಇಗನಾ, ವಿಠಲನಿಗೆ ನಾಡಿದ್ದು ಎಕ್ಸಾಂ ಇದೆ. ಎಕ್ಸಾಂ ಬರೆಯದಿದ್ದರೆ ಕಷ್ಟ ಆಗುತ್ತೆ” ಎಂದು ದುಗುಡದಲ್ಲಿ ಹೇಳ್ತಾ ಇದ್ರು.

ನಾವು ವಕೀಲ ದಿನೇಶ್ ಹೆಗ್ಡೆ ಉಳೆಪಾಡಿಯವರನ್ನು ಸಂಪರ್ಕಿಸಿ ವಿಠಲನಿಗೆ ಪರೀಕ್ಷೆ ಬರೆಯಲು ಅವಕಾಶ ಕೇಳಿದ್ವಿ. ಸಫೀಯಾಳು ವಿಠಲನಿಗೆ ಬೇಕಾದ ಎಲ್ಲಾ ಪುಸ್ತಕದ ವ್ಯವಸ್ಥೆ ಮಾಡಿದಳು. ಸಫಿಯಾ ಒದಗಿಸಿದ ಪುಸ್ತಕವನ್ನು ಜೈಲಿನಲ್ಲಿರುವ ವಿಠಲನಿಗೆ ನೀಡಿದ್ವಿ. ವಿಠಲ ಜೈಲಿನಲ್ಲೇ ಓದಿ ಕೈಕೋಳದಲ್ಲೇ ಪರೀಕ್ಷೆ ಬರೆದಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.‌
ವಿಠಲ ಪರೀಕ್ಷೆಯಲ್ಲಿ ಪಾಸಾಗಿ ಸಧ್ಯ ಪತ್ರಕರ್ತನಾಗಿದ್ದಾನೆ. ಇದು ವಿಠಲ ಮಲೆಕುಡಿಯನ ಗೆಲುವಲ್ಲ. ಇಡೀ ಮಲೆಕುಡಿಯ ಸಮುದಾಯದ ಗೆಲುವು. ಇಂತಹ ಗೆಲುವಿನಲ್ಲಿ ಗೆಳತಿ ಸಫೀಯಾ ಕೂಡಾ ಪಾಲುದಾರಳು.

ಪ್ರಜ್ಞಾವಂತರ ಮೌನ ಅಪರಾಧ. ಪ್ರಜ್ಞಾವಂತರ ಸಣ್ಣ ಸಣ್ಣ ಭಾಗಿದಾರಿಕೆಯೂ ಕ್ರಾಂತಿ ಸೃಷ್ಟಿಸುತ್ತಿದೆ. ಕುತ್ಲೂರು ಕಥನ ಪುಸ್ತಕ ಬಿಡುಗಡೆ ವೇಳೆ ಗೆಳತಿ ಸಫೀಯಾಳಿಗೆ ದೇಶದ ಖ್ಯಾತ ಚಿಂತಕ ಹರ್ಷ್ ಮಂದರ್ ಗೌರವ ಪ್ರತಿ ನೀಡಿದರು‌.