ಲಿಂಗ ಪರಿವರ್ತಿಸಿ,ಸನಾ ಆದಳು ಸುಹೈಲ್ ಖಾನ್
ಉತ್ತರ ಪ್ರದೇಶದ ಕುಟುಂಬವೊಂದರ ಯುವತಿಯೊಬ್ಬಳು ಒಂದು ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಸೇರಿಕೊಂಡಿದ್ದಳು. ತನ್ನ ತಂದೆ-ತಾಯಿಯೊಂದಿಗೆ ವಾಸವಾಗಿದ್ದ ಸೋನಾಲ್ ಮನೆಗೆ ಸನಾ ಪೇಯಿಂಗ್ ಗೆಸ್ಟ್ ಆಗಿ ಬಂದಳು. ಅದೇ ಮನೆಯ ಮೇಲಿನ ಮಹಡಿಯಲ್ಲಿ ಆಕೆ ಉಳಿದುಕೊಂಡಿದ್ದಳು. ಇಬ್ಬರೂ ಒಂದೇ ವಯಸ್ಸಿನವರಾದ್ದರಿಂದ ಸಹಜವಾಗಿಯೇ ಬಹಳ ಬೇಗ ಗೆಳತಿಯರಾದರು.ಒಳ್ಳೆ ಗೆಳತಿಯರಾದ ಸೋನಾಲ್ ಮತ್ತು ಸನಾ ನಡುವೆ 4 ತಿಂಗಳೊಳಗೆ ಒಬ್ಬರನ್ನೊಬ್ಬರು ಬಿಟ್ಟು ಇರಲಾರದಂತಹ ಸಂಬಂಧ ಬೆಳೆಯಿತು. ಇಬ್ಬರೂ ಜೀವನಪೂರ್ತಿ ಒಟ್ಟಿಗೇ ಇರಲು ನಿರ್ಧರಿಸಿದರು. ಆದರೆ, ಸೋನಾಲ್ ಕುಟುಂಬವು ಅವರಿಬ್ಬರ ವಿಚಿತ್ರವಾದ ಪ್ರೀತಿಯನ್ನು ಒಪ್ಪದೆ ಸನಾಳನ್ನು ಮನೆಯಿಂದ ಆಚೆ ಕಳುಹಿಸಿದರು.
ಸರ್ಕಾರಿ ಕೆಲಸ ಮಾಡುತ್ತಿದ್ದ ಸನಾ ಅವರನ್ನು 2016ರಲ್ಲಿ ಝಾನ್ಸಿಗೆ ನೇಮಿಸಲಾಯಿತು. 1 ವರ್ಷದ ನಂತರ ಆಕೆಗೆ ಸರ್ಕಾರಿ ಕ್ವಾರ್ಟರ್ ಅನ್ನು ಮಂಜೂರು ಮಾಡಲಾಯಿತು. ಬಳಿಕ ಅವಳು ಅಲ್ಲಿ ಉಳಿದುಕೊಳ್ಳಲು ನಿರ್ಧರಿಸಿದಳು. 2017ರ ಆಗಸ್ಟ್ 10ರಂದು ಸನಾ ತಮ್ಮ ಸರ್ಕಾರಿ ಕ್ವಾರ್ಟರ್‌ಗೆ ತೆರಳಿದಳು. ಆದರೆ, ಆಕೆಗೆ ಸೋನಾಲ್ಳನ್ನು ಮರೆಯಲು ಸಾಧ್ಯವಾಗಲಿಲ್ಲ.ಸನಾ ಮನೆಯಿಂದ ಹೊರಗೆ ಹೋದ 4 ದಿನಗಳ ನಂತರ, ಸೋನಾಲ್ ಕೂಡ ಸನಾ ಜೊತೆ ಹೋಗಿ ವಾಸಿಸಲು ಶುರು ಮಾಡಿದಳು. ಸಮಯ ಕಳೆದಂತೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸೋನಾಲ್ ಸನಾಳ ಮನವೊಲಿಸಿದಳು. ಅವರು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ಭೇಟಿ ನೀಡಿ, ಸನಾಳ ಲಿಂಗ ಬದಲಾವಣೆಗೆ ಬೇಕಾ ಆಪರೇಷನ್ ಬಗ್ಗೆ ಮಾಹಿತಿ ಪಡೆದರು. ಅಲ್ಲಿ ವೈದ್ಯರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರು. ನಂತರ ಸನಾ ಲಿಂಗ ಪರಿವರ್ತನೆಯ ಆಪರೇಷನ್ಗೆ ‘ಫಿಟ್’ ಆಗಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಸೋನಾಲ್ಳೊಂದಿಗೆ ಇರಬೇಕೆಂಬ ಒಂದೇ ಕಾರಣಕ್ಕೆ ಸನಾ ಜೂನ್ 22, 2020ರಂದು ಲಿಂಗ ಬದಲಾವಣೆಯ ಆಪರೇಷನ್ ಮಾಡಿಸಿಕೊಂಡರು. ಅದಾದ ನಂತರ ಸನಾ ಅಧಿಕೃತವಾಗಿ ತನ್ನ ಹೆಸರನ್ನು ಸೊಹೈಲ್ ಖಾನ್ ಎಂದು ಬದಲಾಯಿಸಿಕೊಂಡಳು. ಸಲಿಂಗ ಸಂಬಂಧವನ್ನು ಮನೆಯವರು ಒಪ್ಪದ ಕಾರಣಕ್ಕೆ ಸನಾ ಸೊಹೈಲ್ ಖಾನ್ ಆಗಿ ಬದಲಾದಳು.ಸೋನಾಲ್ ಕೂಡ ಎಲ್ಲ ಕಡೆ ತಾನು ಸೊಹೈಲ್ ಖಾನ್ನ ಪತ್ನಿ ಎಂದು ಹೇಳಿಕೊಂಡಿದ್ದರು. ತಾನು ಕೂಡ ಸನಾಳಂತೆ ಸರ್ಕಾರಿ ನೌಕರಿಯನ್ನು ಪಡೆಯಬೇಕೆಂದು ಬಯಸಿದಳು. ಕೊನೆಗೆ ಸೋನಾಲ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತು. ಅಲ್ಲಿಂದ ಸೋನಾಲ್ ನಡವಳಿಕೆಯಲ್ಲಿ ಬದಲಾವಣೆಗಳು ಆಗತೊಡಗಿದವು.
ಸೋನಾಲ್ ಸನಾ ಅಲಿಯಾಸ್ ಸೊಹೈಲ್ನನ್ನು ಅವಾಯ್ಡ್ ಮಾಡಲು ಪ್ರಾರಂಭಿಸಿದಳು. ತನ್ನ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲಿ ಕಳೆಯುತ್ತಿದ್ದಳು. ಇದು ಅವರ ನಡುವೆ ಆಗಾಗ್ಗೆ ವಾದಗಳಿಗೆ ಕಾರಣವಾಯಿತು. ಒಂದು ರಾತ್ರಿ ಸೊಹೈಲ್ ಖಾನ್ ಸೋನಾಲ್ ಅಳುತ್ತಿರುವುದನ್ನು ನೋಡಿ ಏನಾಯಿತೆಂದು ವಿಚಾರಿಸಿದಾಗ ನಿನ್ನಿಂದಾಗಿ ನಾನು ನನ್ನ ಕುಟುಂಬದಿಂದ ದೂರವಾಗಿದ್ದೇನೆ ಎಂದು ಗಲಾಟೆ ಮಾಡಿದಳು.ಬಳಿಕ ಸೊಹೈಲ್ ಖಾನ್ಗೆ ಸೋನಾಲ್ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಜ್ಞಾನ್ ಎಂಬ ಯುವಕನೊಂದಿಗೆ ಸಂಬಂಧ ಹೊಂದಿರುವುದು ಗೊತ್ತಾಯಿತು. ಈ ಬಗ್ಗೆ ಆಕೆಯನ್ನು ಕೇಳಿದಾಗ ತಾನು ಆತನನ್ನೇ ಮದುವೆಯಾಗಲು ನಿರ್ಧರಿಸಿರುವುದಾಗಿ ಸೋನಾಲ್ ಹೇಳಿದಳು. ಯಾರಿಗಾಗಿ ತಾನು ಮನೆಯವರನ್ನು, ಸಮಾಜವನ್ನು ಎದುರು ಹಾಕಿಕೊಂಡು ಲಿಂಗ ಪರಿವರ್ತನೆ ಮಾಡಿಕೊಂಡಳೋ ಆಕೆ ಇನ್ನೊಬ್ಬನ ಜೊತೆ ಬದುಕಲು ಬಯಸಿರುವುದನ್ನು ಕೇಳಿ ಸೊಹೈಲ್ಗೆ ಆಘಾತವಾಯಿತು.
ಈ ವಿಚಾರವಾಗಿ ಸೊಹೈಲ್ ಖಾನ್ ಪೊಲೀಸರ ಸಹಾಯವನ್ನೂ ಕೇಳಿದಳು. ಕೊನೆಗೆ ಅವರಿಬ್ಬರ ನಡುವೆ ಜಗಳ ಹೆಚ್ಚಾಗಿ ಸೋನಾಲ್ ತನ್ನ ಮನೆಗೆ ವಾಪಾಸ್ ಹೋದಳು. ಬಳಿಕ ಸೋನಾಲ್ ಮತ್ತು ಆಕೆಯ ಕುಟುಂಬದವರು ಸನಾ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ಕಿರುಕುಳದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಸನಾ ಪೊಲೀಸರ ಮುಂದೆ ತನ್ನ ಕಷ್ಟವನ್ನು ವಿವರಿಸಿದಳು. ನಂತರ ಸೋನಾಲ್ಳನ್ನು ವಿಚಾರಣೆಗೆ ಕರೆಸಲಾಯಿತು. ಆದರೆ, ಪೊಲೀಸರು ಸೋನಾಲ್ ಪರವಾಗಿಯೇ ಮಾತನಾಡಿದ್ದರಿಂದ ಸನಾ ನ್ಯಾಯಾಲಯದ ಮೊರೆ ಹೋದರು.ಹಲವು ಬಾರಿ ಸಮನ್ಸ್ ನೀಡಿದರೂ ನ್ಯಾಯಾಲಯಕ್ಕೆ ಹಾಜರಾಗದ ಸೋನಾಲ್ ಅವರನ್ನು ಜನವರಿ 18ರಂದು ಪೊಲೀಸರು ಬಂಧಿಸಿದ್ದರು. ಸೋನಾಲ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 23 ರಂದು ನಡೆಯಲಿದೆ