ಕಾನೂನು ಉಲ್ಲಂಘಣೆ, ಕೋಣಗಳಿಗೆ ಹಿಂಸೆ: ಕಂಬಳ ಸಮಿತಿಗೆ ನೋಟಿಸ್‌

ಕರಾವಳಿ

ನಿಷೇಧದ ತೂಗುಕತ್ತಿಯಲ್ಲಿರುವ ಕಂಬಳ

ನಿಷೇಧದ ತೂಗುಕತ್ತಿಯಲ್ಲಿರುವ ಕಂಬಳ ಮತ್ತೆ ನಿಷೇಧದ ಭೀತಿಯಲ್ಲಿದೆ. ಪೇಟಾ ಸಂಸ್ಥೆಗೆ ಕಂಬಳ ಈ ಬಾರಿ ಸುಲಭ ಆಹಾರವಾಗಿದ್ದು, ಓಟಗಾರರು ಕಂಬಳ‌ಕೋಣಗಳಿಗೆ ರಕ್ತ ಬರುವಂತೆ ಬಾರುಕೋಲಿನಿಂದ ಹೊಡೆದ ಫೋಟೋ,ವಿಡಿಯೋ ಪೇಟಾಗೆ ದೊರಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಬಲ ಆಧಾರ ಪೇಟಾ ಸಂಸ್ಥೆಗೆ ಲಭ್ಯವಾಗಿದೆ‌.

ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಶುಸಂಗೋಪನಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಗೆ ಕೋಣಗಳಿಗೆ ಹಿಂಸೆಯ ಕುರಿತು ನೋಟೀಸ್ ನೀಡಿದೆ.ಕಂಬಳದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯಾಗಿದೆ ಎಂದು ಪಶುಪಾಲನಾ ಇಲಾಖೆ ನೋಟಿಸ್ ಜಾರಿ ಮಾಡಿರುವ ಬೆನ್ನಲ್ಲೇ ಕಂಬಳ ಸಮಿತಿ ಕೋಣಗಳ ಹಿಂಸಾಚಾರವನ್ನು ನಾವು ಒಪ್ಪಲ್ಲ. ಮುಂದೆ ಈ ರೀತಿಯ ಘಟನೆಗಳು ನಡೆದರೆ ಕಂಬಳ ಕೋಣಗಳ ಮಾಲಕರು, ಓಡಿಸುವವರೇ ಜವಾಬ್ದಾರಿ ಎಂದು ಹೇಳಿದೆ.

ಕಂಬಳ‌ ನಡೆಯುವ ಸಂದರ್ಭ ಕೋಣಗಳಿಗೆ ಹಿಂಸೆ ನೀಡಬಾರದೆಂದು ಮೈಕ್‌ನಲ್ಲಿ ಸೂಚನೆ ನೀಡಲಾಗುತ್ತಿದೆ. ಕೋಣಗಳಿಗೆ ಹೊಡೆಯೋದು ತಪ್ಪು ಎಂದು ಕಂಬಳ ಕೋಣಗಳ ಮಾಲಕರಿಗೂ ಸೂಚನೆ ನೀಡಲಾಗಿದೆ. ಆದರೆ ಕೆಲವರು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಮುಂದೆ ಈ ರೀತಿಯಲ್ಲಿ ಘಟನೆಗಳು ಮರುಕಳಿಸಿದಲ್ಲಿ‌ ಕೋಣಗಳ ಮಾಲೀಕರು, ಓಡಿಸುವವರೇ ಜವಾಬ್ದಾರಿ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಪಿ.ಆರ್ ಶೆಟ್ಟಿ ಹೇಳಿದ್ದಾರೆ.ಕೋಣಗಳನ್ನು ಓಟಕ್ಕೆ ಸಿದ್ಧಪಡಿಸುವಾಗ,ಕರೆ ಬಿಟ್ಟು ಮಂಜೊಟ್ಟಿ(ದಡ) ಸೇರಿದ ಬಳಿಕ ಕೋಣಗಳಿಗೆ ಹೊಡೆಯುವ ದೃಶ್ಯ ಪೇಟಾ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಸುಪ್ರೀಂ ಕೋರ್ಟ್‌ನ ಪಂಚ ಸದಸ್ಯರ ಪೀಠದಲ್ಲಿ ಕಂಬಳ ನಿಷೇಧದ ವಾದ-ಪ್ರತಿವಾದ ನಡೆಯುತ್ತಿದೆ. ಇದೀಗ ಕಂಬಳದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಪೀಠದ ಮುಂದೆ ಪೇಟಾ ಇಡುತ್ತಿದೆ.