ಪುತ್ತೂರಿನಲ್ಲಿ ‘ರೈ’ ಹವಾ..! ‘ಕೈ’ ಹಿಡಿಯುತ್ತರಾ ಮತದಾರ.?

ಕರಾವಳಿ

ಪುತ್ತೂರಿನಾದ್ಯಂತ ರೈ ಹವಾ ಕಂಡು ಬಿಜೆಪಿ ಮಂಕಾಗಿದೆ.

ಬಿಜೆಪಿಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿರುವ, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರ ಅತ್ಯಾಪ್ತ ರಾಗಿರುವ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಸಿದ್ದರಾಮಯ್ಯ- ಡಿಕೆಶಿ ಸಮ್ಮುಖದಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಮೂರು ತಿಂಗಳಿನಿಂದ ಕಾಂಗ್ರೆಸ್ ಪಕ್ಷದಿಂದ ಅಶೋಕ್ ರೈ ಅಭ್ಯರ್ಥಿಯಾಗಲಿದ್ದಾರೆ ಅನ್ನುವ ಸುದ್ದಿ ಹಬ್ಬಿತ್ತು. ಆದರೆ ಇದೀಗ ಆ ಸುದ್ಧಿಗೆ ಹೆಚ್ಚು ಮಹತ್ವ ಬಂದಿದೆ. ಅಶೋಕ್ ರೈ ಕಳೆದ ಹಲವಾರು ತಿಂಗಳಿನಿಂದ ಮಾನಸಿಕವಾಗಿ ಕಾಂಗ್ರೆಸ್ ನಾಯಕರೊಂದಿಗೆ ಗುರುತಿಸಿಕೊಂಡಿದ್ದು, ಕಾಂಗ್ರೆಸ್ ಟಿಕೆಟ್ ಗಾಗಿ ಗೌಪ್ಯವಾಗಿ ಅರ್ಜಿ ಸಲ್ಲಿಸಿದ್ದರು ಅನ್ನುವ ಮಾಹಿತಿಯೂ ಇತ್ತು. ಇದೀಗ ಅದಕ್ಕೆಲ್ಲ ತೆರೆ ಬಿದ್ದಂತಾಗಿದೆ.

ಪುತ್ತೂರು ಕಾಂಗ್ರೆಸ್ ನಲ್ಲಿ ‘ಮನೆಯೊಂದು ಮೂರು ಬಾಗಿಲು’ ಅನ್ನುವಂತೆ ಹಲವಾರು ವರ್ಷಗಳಿಂದ ಗುಂಪುಗಾರಿಕೆಯ ಸುದ್ಧಿಯೇ ಹೆಚ್ಚು ಚಾಲ್ತಿಯಲ್ಲಿತ್ತು ವಿನಃ ಪಕ್ಷ ಬಲವರ್ಧನೆಗೆ ಯಾವೊಬ್ಬ ನಾಯಕನೂ ಶ್ರಮಿಸದಿರುವುದು ಕಾಂಗ್ರೆಸ್ ಟಿಕೆಟ್ ಮೂಲ ಕಾಂಗ್ರೆಸ್ಸಿಗರು ಪಡೆಯಲು ತೊಡಕಾಗುತ್ತಿದೆ. ಟಿಕೆಟ್ ಕೊಟ್ಟರೂ ಒಬ್ಬರ ಕಾಲನ್ನು ಇನ್ನೊಬ್ಬರು ಹಿಡಿದು ಸೋಲಿಸುವುದೇ ಹೆಚ್ಚು. ಇದರ ಲಾಭ ವಿರೋಧಿ ಪಕ್ಷದ ಮುನಿಸಿಕೊಂಡ ನಾಯಕರು ಪಡೆದು ನೇರವಾಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಈ ಹಿಂದೆ ಶಕುಂತಲಾ ಶೆಟ್ಟಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಶಾಸಕಿಯಾಗಿ ಆಯ್ಕೆಯಾಗಿದ್ದರು.

ಹಾಗೆ ನೋಡಿದರೆ ಅಶೋಕ್ ಕುಮಾರ್ ರೈ ಕಳೆದ ಚುನಾವಣೆಯಲ್ಲಿಯೇ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅಡ್ಡಗಾಲಿಟ್ಟಿದ್ದರಿಂದ ಟಿಕೆಟ್ ತಪ್ಪಿತ್ತು. ನಳಿನ್ ರೊಂದಿಗೆ ರೈ ಬಾಂಧವ್ಯ ಅಷ್ಟೇನೂ ಚೆನ್ನಾಗಿಲ್ಲ. ಬಿಜೆಪಿಯಲ್ಲಿ ಟಿಕೆಟ್ ಸಿಗಲ್ಲ ಅನ್ನುವುದು ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರೊಂದಿಗೆ ಹೆಚ್ಚು ಒಡನಾಟ ಹೊಂದಿದ್ದರು. ಪುತ್ತೂರು ಕಾಂಗ್ರೆಸ್ ಒಡೆದ ಮನೆಯಂತಾಗಿದ್ದರಿಂದ ಎಲ್ಲರನ್ನೂ ಒಗ್ಗಟ್ಟಾಗಿ ಕೊಂಡುಹೋಗುವ ನಾಯಕರು ಇಲ್ಲದೇ ಇರುವುದರಿಂದ ಅಶೋಕ್ ಕುಮಾರ್ ರೈ ಗೆ ಇದು ಪ್ಲಸ್ ಆಗಿತ್ತು. ಯಾಕೆಂದರೆ ಅಶೋಕ್ ರೈ ಕಾಂಗ್ರೆಸ್- ಬಿಜೆಪಿ ಅನ್ನುವ ಭೇದಭಾವವಿಲ್ಲದೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಅಶೋಕ್ ಕುಮಾರ್ ರೈ ಪುತ್ತೂರು ಭಾಗದಲ್ಲಿ ಹಲವಾರು ವರ್ಷಗಳಿಂದ ತನ್ನ ಟ್ರಸ್ಟ್ ಮೂಲಕ ಸಮಾಜ ಸೇವೆ ನಡೆಸುತ್ತಾ ಬಂದಿದ್ದಾರೆ. ಹಲವಾರು ಬಡವರ ಕಣ್ಣೀರೊರೆಸುವ ಕಾರ್ಯ ಮಾಡಿದ್ದಾರೆ. ಪುತ್ತೂರಿನಲ್ಲಿ ‘ರೈ’ ಗೆ ರಾಜಕೀಯೇತರವಾಗಿ ಅಪಾರ ಪ್ರಮಾಣದ ಅಭಿಮಾನಿಗಳಿದ್ದಾರೆ. ಇದೀಗ ರೈ ಕಾಂಗ್ರೆಸ್ ಸೇರಿರುವುದರಿಂದ ಪುತ್ತೂರಿನಲ್ಲಿ ಈ ಬಾರಿ ಕಾಂಗ್ರೆಸ್ ವಿಜಯ ಸಾಧಿಸುವ ಅವಕಾಶ ಲಭಿಸಿದೆ. ಪುತ್ತೂರಿನಾದ್ಯಂತ ರೈ ಹವಾ ಕಂಡು ಬಿಜೆಪಿ ಮಂಕಾಗಿದೆ. ರೈ ಗೆ ಪ್ರತಿಸ್ಪರ್ಧಿಯಾಗುವ ಸಮರ್ಥ ಅಭ್ಯರ್ಥಿ ಸಿಗದೇ ಬಿಜೆಪಿ ಪರದಾಡುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರ ತವರೂರಿನಲ್ಲಿ ಮತ್ತೋರ್ವ ಬಂಟ ಸಮುದಾಯದ ಅಶೋಕ್ ರೈ ಹವಾ ಜೋರಾಗಿ ಬೀಸುತ್ತಿದೆ. ಈ ಬಾರಿ ಪುತ್ತೂರಿನಲ್ಲಿ ಕಾಂಗ್ರೆಸ್ ಕಮಾಲ್ ಮಾಡುವತ್ತ ಹೆಜ್ಜೆ ಹಾಕುತ್ತಿದೆ.