ದ.ಕ ಜಿಲ್ಲೆಯ ಬೆಳ್ತಂಗಡಿಗೆ ಮಂಜೂರಾಗಿದ್ದ ಪೊಲೀಸ್ ಉಪ ವಿಭಾಗ ರದ್ದು

ರಾಜ್ಯ

ಬೆಳ್ತಂಗಡಿಗೆ ಹೊಸದಾಗಿ ಮಂಜೂರಾಗಿದ್ದ ಪೊಲೀಸ್ ಉಪವಿಭಾಗವನ್ನು ರಾಜ್ಯ ಸರಕಾರ ರದ್ದುಗೊಳಿಸಿದ್ದು, ಅದರ ಬದಲಿಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಉಪ ವಿಭಾಗ ರಚಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ಬೆಳ್ತಂಗಡಿಯ ಪೊಲೀಸ್ ಉಪವಿಭಾಗದ ಬೇಡಿಕೆ ನೆನೆಗುದಿಗೆ ಬಿದ್ದಿದೆ.

ತಿಂಗಳ ಹಿಂದೆ ರಾಜ್ಯ ಸರಕಾರವು ದ.ಕ ಜಿಲ್ಲಾ ಪೊಲೀಸ್ ಘಟಕಕ್ಕೆ ಬೆಳ್ತಂಗಡಿ ಉಪವಿಭಾಗವನ್ನು ರಚಿಸಿ ಆದೇಶ ಹೊರಡಿಸಿತ್ತು. ಈ ಉಪವಿಭಾಗ ವ್ಯಾಪ್ತಿಯಲ್ಲಿ ಬೆಳ್ತಂಗಡಿ, ಬೆಳ್ತಂಗಡಿ ಸಂಚಾರ ಠಾಣೆ, ಧರ್ಮಸ್ಥಳ, ಪೂಂಜಾಲಕಟ್ಟೆ ಹಾಗೂ ವೇಣೂರು ಠಾಣೆಗಳು ಬರುವುದಾಗಿ ಘೋಷಿಸಲಾಗಿತ್ತು.

ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿ ಐದು ಪೊಲೀಸ್ ಠಾಣೆಗಳಿದ್ದು , ಹೆಚ್ಚು ಅಪರಾಧ ಪ್ರಕರಣಗಳು ಇಲ್ಲಿ ದಾಖಲಾಗುತ್ತಿರುತ್ತದೆ. ಅಲ್ಲದೇ ಶ್ರೀ ಕ್ಷೇತ್ರ ಧರ್ಮಸ್ಥಳ ತಾಲೂಕಿನಲ್ಲಿರುವುದರಿಂದ ಅತಿ ಹೆಚ್ಚು ವಿಐಪಿಗಳು ಇಲ್ಲಿ ಭೇಟಿ ನೀಡುತ್ತಿರುತ್ತಾರೆ. ಈ ಎಲ್ಲ ಕಾರಣಗಳಿಂದ ಬೆಳ್ತಂಗಡಿಗೆ ಪೊಲೀಸ್ ಉಪವಿಭಾಗದ ಬೇಡಿಕೆ ಹಿಂದಿನಿಂದಲೂ ಇತ್ತು. ಆದರೆ ಮಂಜೂರಾಗಿದ್ದ ಉಪವಿಭಾಗವನ್ನು ಯಾಕೆ ರದ್ದುಪಡಿಸಲಾಗಿದೆ ಎಂಬುದಕ್ಕೆ ಸರಕಾರದ ಆದೇಶದಲ್ಲಿ ಯಾವುದೇ ಮಾಹಿತಿ ಇಲ್ಲ.