ದಾವಣಗೆರೆಯ ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕಿ ಲೋಕಾಯುಕ್ತ ಬಲೆಗೆ

ರಾಜ್ಯ

ಪೋಕ್ಸೊ ಪ್ರಕರಣದ ಆರೋಪಿಗೆ ಸಹಾಯ ಮಾಡುವ ವಾಗ್ದಾನ ನೀಡಿ, ಲಂಚ ಪಡೆಯುತ್ತಿದ್ದ ದಾವಣಗೆರೆಯ ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕಿತ್ತೂರು ಗ್ರಾಮದ ಜಿ.ಟಿ. ಮದನ ಕುಮಾರ್ ವಿರುದ್ಧ 2021ರಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೇಖಾ ಅವರು ಒಟ್ಟು ₹ 3 ಲಕ್ಷ ‌‌ಲಂಚಕ್ಕೆ ಬೇಡಿಕೆ ಇರಿಸಿದ್ದರು. ಈ ಪೈಕಿ ಈ ಮೊದಲೇ ₹ 1.13 ಲಕ್ಷ ಪಡೆದಿದ್ದರು. ಉಳಿದ ₹ 1.87 ಲಕ್ಷ ಹಣ ನೀಡುವಂತೆ ದುಂಬಾಲು ಬಿದ್ದಿದ್ದರಲ್ಲದೆ, ಖಾತರಿಗಾಗಿ ಸಹಿ ಮಾಡಿದ ಖಾಲಿ ಚೆಕ್‍ ಪಡೆದಿದ್ದರು.

ರೇಖಾ ಅವರು ದಾವಣಗೆರೆಯ ತಮ್ಮ ನಿವಾಸದಲ್ಲಿ ₹ 1.87 ಲಕ್ಷ ಹಾಗೂ ಖಾತ್ರಿಗೋಸ್ಕರ ಪಡೆದ ಚೆಕ್‌ ಅನ್ನು ವಾಪಸ್‌ ನೀಡುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಹಣದೊಂದಿಗೆ ವಶಕ್ಕೆ ಪಡೆದಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ದಾವಣಗೆರೆ ಲೋಕಾಯುಕ್ತ ಘಟಕದ ಎಸ್‌ಪಿ ಎಂ.ಎಸ್‌. ಕೌಲಾಪುರೆ, ಪೊಲೀಸ್ ಇನ್‌ಸ್ಪೆಕ್ಟರ್‌ ಆಂಜನೇಯ ಎನ್‌.ಎಚ್‌ ನೇತೃತ್ವದಲ್ಲಿ ದಾಳಿ ನಡೆದಿತ್ತು.