ಅಮ್ಮ ಇಸ್ಲಾಂ ಧರ್ಮಕ್ಕೆ ಮತಾಂತರ; ಹಿಂದೂ ಮಕ್ಕಳಿಗಿಲ್ಲ ಪಾಲಿನ ಹಕ್ಕು:ಗುಜರಾತ್ ಕೋರ್ಟ್​

ರಾಷ್ಟ್ರೀಯ

ಮಹಮದೀಯ ಕಾನೂನು ಪ್ರಕಾರ ಮುಸ್ಲಿಮರ ಆಸ್ತಿಯ ಹಕ್ಕು ಹಿಂದೂಗಳಿಗೆ ಇರುವುದಿಲ್ಲ. ಅಹ್ಮದಾಬಾದ್​ನ ನ್ಯಾಯಾಲಯ ಅಭಿಪ್ರಾಯಪಟ್ಟಿದೆ

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಸಾವನ್ನಪ್ಪಿದ ಅಮ್ಮನ ಆಸ್ತಿಯಲ್ಲಿ ಪಾಲು ಕೇಳಲು ಹೋದ ಹಿಂದೂ ಹೆಣ್ಮಕ್ಕಳ ಅರ್ಜಿಯನ್ನು ಗುಜರಾತ್​ನ ಕೋರ್ಟ್​ವೊಂದು ತಿರಸ್ಕರಿಸಿದೆ.ಅಮ್ಮ ಇಸ್ಲಾಂ ಧರ್ಮಕ್ಕೆ ಮತಾಂತರ,ಹಿಂದೂ ಧರ್ಮೀಯ ಮಕ್ಕಳಿಗಿಲ್ಲ ಆಸ್ತಿ.

ಅಹ್ಮದಾಬಾದಿನ ಮುಸ್ಲಿಂ ಮಹಿಳೆಯ ಆಸ್ತಿಯಲ್ಲಿ ಹಕ್ಕು ಕೇಳಲು ಹೋದ ಆಕೆಯ ಮೂವರು ಹಿಂದೂ ಧರ್ಮದ ಹೆಣ್ಮಕ್ಕಳ ಅರ್ಜಿಯನ್ನು ಗುಜರಾತ್​ನ ನ್ಯಾಯಾಲಯವೊಂದು ವಜಾಗೊಳಿಸಿದೆ. ಮಹಮದೀಯ ಕಾನೂನು ಪ್ರಕಾರ ಮುಸ್ಲಿಮರ ಆಸ್ತಿಯ ಹಕ್ಕು ಹಿಂದೂಗಳಿಗೆ ಇರುವುದಿಲ್ಲ ಎಂದು ಅಹ್ಮದಾಬಾದ್​ನ ಸ್ಥಳೀಯ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನಿಧನ ಹೊಂದಿದ ಆ ಮುಸ್ಲಿಂ ಮಹಿಳೆಯ ಆಸ್ತಿಗೆ ಆಕೆಯ ಮಗ ನಿಜವಾದ ವಾರಿಸುದಾರ ಎಂದು ಕೋರ್ಟ್ ತೀರ್ಮಾನಿಸಿದೆ.

ಈ ಮುಸ್ಲಿಂ ಮಹಿಳೆಯ ಮೂಲ ಹೆಸರು ರಂಜನ್ ತ್ರಿಪಾಠಿ. ಈಕೆಯ ಗಂಡ ಬಿಎಸ್​ಎನ್​ಎಲ್ ಉದ್ಯೋಗಿಯಾಗಿದ್ದು, 1979ರಲ್ಲಿ ಸಾವನ್ನಪ್ಪಿರುತ್ತಾರೆ. ಆಗ ಈ ದಂಪತಿಗೆ ಇಬ್ಬರು ಹೆಣ್ಮಕ್ಕಳಿರುತ್ತಾರೆ. ಜೊತೆಗೆ ರಂಜನ್ ತ್ರಿಪಾಠಿ ಗರ್ಭಿಣಿಯಾಗಿದ್ದು ನಂತರ ಮೂರನೇ ಹೆಣ್ಮಗುವಿಗೆ ಜನ್ಮ ನೀಡುತ್ತಾರೆ. ನಂತರ ಗಂಡ ಕೆಲಸ ಮಾಡುತ್ತಿದ್ದ ಬಿಎಸ್​ಎನ್​ಎಲ್​ನಲ್ಲಿ ಈಕೆಗೆ ಉದ್ಯೋಗ ಸಿಗುತ್ತದೆ.ಇದಾದ ಬಳಿಕ ರಂಜನಾ ತನ್ನ ಕುಟುಂಬವನ್ನು ಬಿಟ್ಟು ಇಸ್ಲಾಂಗೆ ಮತಾಂತರವಾಗಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು 1995ರಲ್ಲಿ ಮದುವೆಯಾಗುತ್ತಾರೆ. ರಂಜನಾ ತ್ರಿಪಾಠಿ ಹೆಸರು ರೆಹನಾ ಮಾಲಿಕ್ ಎಂದು ಬದಲಾಗುತ್ತದೆ. ಹೊಸ ದಾಂಪತ್ಯದಲ್ಲಿ ರೆಹನಾ ಗಂಡು ಮಗುವಿಗೆ ಜನ್ಮ ನೀಡುತ್ತಾರೆ. ಅತ್ತ ಈಕೆಯ ಮೂವರು ಹೆಣ್ಮಕ್ಕಳನ್ನು ಅಪ್ಪನ ಕುಟುಂಬದವರು ಪೋಷಿಸುತ್ತಾರೆ. ರೆಹಾನ ಮಲಿಕ್ ಕೆಲ ವರ್ಷಗಳ ಬಳಿಕ ನಿಧನ ಹೊಂದುತ್ತಾರೆ.

ರೆಹನಾ ಮಲಿಕ್​ರ ಮೊದಲ ಮೂವರು ಹೆಣ್ಮಕ್ಕಳು ಅಮ್ಮನ ಆಸ್ತಿಯಲ್ಲಿ ಪಾಲು ಕೇಳಲು ಕೋರ್ಟ್ ಮೆಟ್ಟಿಲೇರುತ್ತಾರೆ. ತನ್ನ ಅಪ್ಪ ಸಾವನ್ನಪ್ಪಿದ್ದರಿಂದ ಅಮ್ಮನಿಗೆ ಕೆಲಸ ಸಿಕ್ಕಿದೆ. ಅವರ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕು ತಮಗಿದೆ ಎಂದು ಈ ಹೆಣ್ಮಕ್ಕಳು ವಾದಿಸುತ್ತಾರೆ.ಆದರೆ ನ್ಯಾಯಾಲಯವು ಮೊಹಮ್ಮದಿಯನ್ ಕಾನೂನನ್ನು ಉಲ್ಲೇಖಿಸಿ ಹೆಣ್ಣು ಮಕ್ಕಳ ಮನವಿಯನ್ನು ತಿರಸ್ಕರಿಸುತ್ತದೆ.ನಿಧನ ಹೊಂದಿದವರು ಮುಸ್ಲಿಮರಾಗಿದ್ದರೆ ಅವರ ಕ್ಲಾಸ್ ಒನ್ ವಾರಸುದಾರರು ಹಿಂದೂಗಳಾಗಲು ಸಾಧ್ಯವಿಲ್ಲ. ಮುಸ್ಲಿಮರು ಮಾತ್ರ ಆಸ್ತಿಯಲ್ಲಿ ಹಕ್ಕು ಕೇಳಲು ಸಾಧ್ಯ ಎಂದು ಮಹಮ್ಮದೀಯ ಕಾನೂನು ಹೇಳುತ್ತದೆ. ತಾಯಿಯು ಇಸ್ಲಾಂಗೆ ಮತಾಂತರವಾಗಿ ಮುಸ್ಲಿಂ ಆದ ಬಳಿಕ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಆದ್ದರಿಂದ ಆ ಗಂಡು ಮಗುವೇ ಕ್ಲಾಸ್ ಒನ್ ವಾರಸುದಾರ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ