ಟರ್ಕಿ:ಭೂಕಂಪದಿಂದ ನೆಲ ಸಮವಾದ ಕಟ್ಟಡದಡಿ ಮಗುವಿಗೆ ಜನ್ಮಕೊಟ್ಟು ಕಣ್ಮುಚ್ಚಿದ ಮಹಾತಾಯಿ

ಅಂತಾರಾಷ್ಟ್ರೀಯ

ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಳಿಕ ಸಿರಿಯಾದ ಅಲೆಪ್ಪೊದಲ್ಲಿ ಕುಸಿದ ಕಟ್ಟಡದ ಅಡಿಯಲ್ಲಿ ಗರ್ಭಿಣಿ ತಾಯಿ ಮಗುವಿಗೆ ಜನ್ಮ ನೀಡಿದ್ದಾಳೆ. ರಕ್ಷಣಾ ಕಾರ್ಯಕರ್ತರು ಮಗುವನ್ನು ರಕ್ಷಿಸಿ ಆಕೆಯನ್ನು ಕಾಪಾಡಲು ಸ್ಥಳಕ್ಕೆ ಧಾವಿಸುವ ಮೊದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಸ್ಥಳೀಯ ಕಾರ್ಯಕರ್ತರು ವರದಿ ಮಾಡಿದ್ದಾರೆ.

ಕತ್ಮಾ ಗ್ರಾಮದಲ್ಲಿ ಭೂಕಂಪದ ಅವಶೇಷಗಳಿಂದ ಎಳೆಯ ಮಗುವನ್ನು ಹೊರತೆಗೆಯುವ ವೀಡಿಯೊವನ್ನು ಸಿರಿಯನ್ ಸ್ವಯಂಸೇವಕ ಸಂಸ್ಥೆ ಹಂಚಿಕೊಂಡಿದೆ. ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪ ಮತ್ತು ಆ ಬಳಿಕ ನಡೆದ ಆಘಾತಗಳಿಂದ ಸಿರಿಯಾ ಮತ್ತು ಟರ್ಕಿ ನಲುಗಿ ಹೋಗಿವೆ. ಈಗಾಗಲೇ ಸಾವಿನ ಸಂಖ್ಯೆ 17,500 ದಾಟಿದೆ ಎಂದು ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಅವಶೇಷಗಳಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವಲ್ಲಿ ಶ್ರಮವಹಿಸುತ್ತಿದೆ. ಈ ಕ್ರೂರ ದಿನಗಳನ್ನು “ಸಮಯದ ವಿರುದ್ಧ ಓಟ” ಎಂದು ಹೇಳಿದೆ.

12 ವರ್ಷಗಳ ಕ್ರೂರ ಅಂತರ್ಯುದ್ಧದ ನಂತರ ಈಗಾಗಲೇ ನಿರಾಶ್ರಿತರ ಬಿಕ್ಕಟ್ಟನ್ನು ಹೊಂದಿರುವ ಸಿರಿಯಾ ಇದೀಗ ಮತ್ತೊಮ್ಮೆ ತೊಂದರೆಯನ್ನು ಎದುರಿಸುತ್ತಿದೆ. ಭೂಕಂಪದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶವು ಸಿರಿಯನ್ ಅಧ್ಯಕ್ಷ ಬಶರ್ ಅಲ್-ಅಸ್ಸಾದ್‌ನಿಂದ ನಿಯಂತ್ರಿಸಲ್ಪಡುವ ಸರ್ಕಾರದ ಹಿಡಿತದ ಪ್ರದೇಶ ಮತ್ತು ಟರ್ಕಿಯ ಗಡಿಯಲ್ಲಿರುವ ಹಾಗೂ ಸರ್ಕಾರಿ ಪಡೆಗಳಿಂದ ಸುತ್ತುವರಿದಿರುವ ವಿರೋಧದ ಹಿಡಿತದ ಪ್ರದೇಶದ ನಡುವೆ ವಿಭಜಿಸಲ್ಪಟ್ಟಿದೆ.