ಮೂಡುಬಿದಿರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಬೀದಿನಾಯಿ ದಾಳಿ,ಆರೋಗ್ಯ ಕೇಂದ್ರದ ನಿರ್ಲಕ್ಷ

ಕರಾವಳಿ

ಪಶು ವೈದ್ಯಾಧಿಕಾರಿಗಳು, ಆರೋಗ್ಯಾಧಿಕಾರಿಗಳು,ಆಢಳಿತ ವರ್ಗ ಬೀದಿ ನಾಯಿಗಳ ಹಾವಳಿ ತಡೆಗೆ ಯಾಕೆ ಕ್ರಮ ಕೈಗೊಂಡಿಲ್ಲ?

ಸಮುದಾಯ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಬಳಿ ಇಂಜೆಕ್ಷನ್ ತೆಗೆದುಕೊಳ್ಳಲು ಕುರ್ಚಿಯಲ್ಲಿ ಕುಳಿತಿದ್ದ ಮೂಡಬಿದ್ರೆ ಕೋಟೆಬಾಗಿಲಿನ ಮಹಮ್ಮದ್ ಅಕ್ಬರ್ ಎಂಬವರ ಎರಡೂವರೆ ವರ್ಷ ಪ್ರಾಯದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಹೆಣ್ಣು ಮಗುವಿನ ಕೆನ್ನೆ,ಮುಖ ಹಾಗೂ ಇತರ ಕಡೆ ಕಚ್ಚಿ ಗಾಯಗೊಳಿಸಿದೆ. ಚುಚ್ಚುಮದ್ದಿಗಾಗಿ ಮಗುವನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಪಕ್ಕದಲ್ಲಿ ಮಗುವಿನ ತಂದೆ ಮತ್ತು ತಾಯಿ ಕುಳಿತಿದ್ದರು. ಆಸ್ಪತ್ರೆಯ ಬಳಿ ಓಡಾಡುತ್ತಿದ್ದ ಬೀದಿ ನಾಯಿಯೊಂದು ಏಕಾಏಕಿ ಮಗುವಿನ ಮೇಲೆ ದಾಳಿ ನಡೆಸಿತ್ತು. ಈ ಘಟನೆಯಿಂದ ಆರೋಗ್ಯ ಕೇಂದ್ರಕ್ಕೆ ಬರುವ ಸಾರ್ವಜನಿಕರನ್ನು ಆತಂಕಕ್ಕೀಡಾಗಿದ್ದಾರೆ.

ಮೂಡಬಿದ್ರೆ ಪೇಟೆಯಲ್ಲಿ ಇದಕ್ಕೂ ಮೊದಲು ಈ ಬೀದಿನಾಯಿಗಳು ಇನ್ನೂ ಇಬ್ಬರಿಗೆ ಕಚ್ಚಿದೆ ಎನ್ನಲಾಗಿದೆ. ಮೂಡುಬಿದಿರೆ ಆರೋಗ್ಯ ಕೇಂದ್ರದಲ್ಲಿ ನಾಯಿ ಕಚ್ಚಿದ್ದಕ್ಕೆ ಪೂರ್ಣ ಪ್ರಮಾಣದ ಚಿಕಿತ್ಸೆ ಇಲ್ಲದ ಕಾರಣ ಮಗುವಿನ ಮನೆಯವರು ಖಾಸಗಿ ಆಸ್ಪತ್ರೆಯಿಂದ ಮದ್ದುಗಳನ್ನು ತರಿಸಿ ಸರಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ನೀಡಿದ್ದಾರೆ ಎನ್ನಲಾಗಿದೆ.ಈ ಘಟನೆಯ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿ,ಇನ್ಚಾರ್ಜ್ ವೈದ್ಯರಾಗಲಿ, ನರ್ಸ್ ಗಳಾಗಲಿ ಹಿರಿಯ ವೈದ್ಯಾಧಿಕಾರಿಗಳಿಗೆ ಮಾಹಿತಿಯೇ ನೀಡಿರಲಿಲ್ಲ ಎನ್ನಲಾಗಿದೆ.

ನಗರದಾದ್ಯಂತ ನಾಯಿಗಳ ಹಾವಳಿ ಹೆಚ್ಚಾದ ಕಾರಣ ಮಕ್ಕಳು, ಮಹಿಳೆಯರು ಸೇರಿದಂತೆ ಜನರು ಮನೆಯಿಂದ ಹೊರಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಆದರೆ ಅಧಿಕಾರಿಗಳು ಮಾತ್ರ ಇದುವರೆಗೂ ನಾಯಿಗಳ ಹಾವಳಿ ತಡೆಗಟ್ಟುವಂತಹ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

ವಾಹನ ಸವಾರರನ್ನು ಕೂಡ ಹಿಂಬಾಲಿಸಿ ದಾಳಿ ನಡೆಸುತ್ತಿವೆ ಬೀದಿ ನಾಯಿಗಳು.ಇದರಿಂದ ಅಪಘಾತಗಳು ನಡೆಯುವ ಸಂಭವವಿದೆ. ನಾಯಿಗಳನ್ನು ಕಂಡರೆ ಸಾಕು ಜನರು ಬೆಚ್ಚಿಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಸಾಕಿದ ಜಾನುವಾರುಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಗೀಳಿಗೆ ಜನರು ಕಂಗಾಲಾಗಿದ್ದಾರೆ. ನಾಯಿಗಳ ದಾಳಿಯಿಂದ ಜನರು ನಿತ್ಯವೂ ತಪ್ಪಿಸಿಕೊಳ್ಳಲು ಪರದಾಡುವಂತಾಗಿದೆ.

ಪಶು ವೈದ್ಯಾಧಿಕಾರಿಗಳು, ಆರೋಗ್ಯಾಧಿಕಾರಿಗಳು,ಆಢಳಿತ ವರ್ಗ ಬೀದಿ ನಾಯಿಗಳ ಹಾವಳಿ ತಡೆಗೆ ಯಾಕೆ ಕ್ರಮ ಕೈಗೊಂಡಿಲ್ಲ? ಬಂದಿರುವ ಅನುದಾನ ಏನಾಗಿದೆ? ನಾಯಿಗಳನ್ನು ಹಾಗೇ ಬಿಟ್ಟರೆ ಶಾಶ್ವತ ಪರಿಹಾರವಾಗುತ್ತದೆಯೇ.? ಶೀಘ್ರವೇ ಸಂಬಂದ ಪಟ್ಟವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೊಂದು ಶಾಶ್ವತ ಪರಿಹಾರ ಕೈಗೊಂಡು ಬೀದಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರನ್ನು ರಕ್ಷಿಸಬೇಕಾಗಿದೆ.