ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಣ್ಣಿನ ಅಕ್ರಮ ಗಣಿಗಾರಿಕೆ,ಮಿನಿ ಬಳ್ಳಾರಿಯಾದಿತೇ ದ.ಕ ಜಿಲ್ಲೆ.!

ಕರಾವಳಿ

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮಣ್ಣು ಮಾಫಿಯಾ ದಂಧೆಯಲ್ಲಿ ಶಾಮೀಲು .

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ತರದ ಮಾಫಿಯಾಗಳು ನಡೆಯುತ್ತಾ ಇರುತ್ತದೆ.ಮರಳು ಮಾಫಿಯಾ, ಗಾಂಜಾ ಮಾಫಿಯಾ, ಜೂಜು ಅಡ್ಡೆಗಳ ಮಾಫಿಯಾ, ಸೆಕ್ಸ್ ಮಾಫಿಯಾ ಇಂತಹ ಹಲವಾರು ಮಾಫಿಯಾಗಳಿಗೆ ಹೆಸರುವಾಸಿಯಾಗಿತ್ತು.ಆದರೆ ಇತ್ತೀಚೆಗೆ ಅದಕ್ಕೊಂದು ಹೊಸ ಮಾಫಿಯಾ ಸೇರ್ಪಡೆಯಾಗಿದೆ. ಅದುವೇ ಮಣ್ಣು ಮಾಫಿಯಾ. ಕೆಂಪುಕಲ್ಲಿನ ದಂಧೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ.ಕೃಷಿಭೂಮಿ, ಕುಮ್ಕಿ ಜಮೀನು ಹೀಗೆ ಎಲ್ಲೆಂದರಲ್ಲಿ ಮಣ್ಣು ಅಗೆದು ಸಾಗಾಟ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ.

ಜಿಲ್ಲೆಯ ಹಲವು ಕಡೆಗಳಿಂದ ಇಂಥ ಮಣ್ಣು ಸಾಗಾಟದ ಪ್ರಕ್ರಿಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಂದ್ರಪ್ರದೇಶದಲ್ಲಿ ಈ ಮಣ್ಣಿಗೆ ಭಾರಿ ಬೇಡಿಕೆ ಇರುವ ಹಿನ್ನಲೆಯಲ್ಲಿ ಮಣ್ಣಿನ ವಹಿವಾಟು ಹೆಚ್ಚಾಗಲಾರಂಭಿಸಿದೆ. ಕೃಷಿಗಾಗಿ ಭೂಮಿಯನ್ನು ಸಮತಟ್ಟು ಮಾಡುವ ಉದ್ದೇಶಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದು ನಿರಂತರವಾಗಿ ಈ ದಂಧೆ ನಡೆಸುತ್ತಿರುವ ಹಲವು ನಿದರ್ಶನಗಳು ಜಿಲ್ಲೆಯಲ್ಲಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ವರ್ಗ ಭೂಮಿಯ ಜೊತೆಗೆ ಸರಕಾರಿ ಭೂಮಿಯನ್ನೂ ಸೇರಿಸಿಕೊಂಡು ಮಣ್ಣಿನ ವ್ಯವಹಾರ ಮಾಡಲಾಗುತ್ತಿದೆ. ಇವುಗಳಲ್ಲಿ ಕೆಲವು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿಯೊಂದಿಗೆ ನಡೆದರೆ, ಇನ್ನು ಹೆಚ್ಚಿನ ಕಡೆಗಳಲ್ಲಿ ಅಕ್ರಮವಾಗಿಯೇ ನಡೆಯುತ್ತಿದೆ. ಆಂದ್ರಪ್ರದೇಶ ಹಾಗೂ ಇತರ ಭಾಗಗಳಿಗೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಸಿಗುವಂತಹ ಕೆಂಪುಕಲ್ಲು ಮಿಶ್ರಿತ ಮಣ್ಣಿಗೆ ಭಾರೀ ಬೇಡಿಕೆ ಇರುವ ಕಾರಣಕ್ಕಾಗಿ ಈ ಭಾಗದಲ್ಲಿ ಎಲ್ಲೆಂದರಲ್ಲಿ ಗುಡ್ಡ ಪ್ರದೇಶಗಳನ್ನು ಕೊರೆದು ಮಣ್ಣು ಸಾಗಿಸಲಾಗುತ್ತಿದೆ.

ಬರಡು ಭೂಮಿಯನ್ನು ಕೃಷಿ ಚಟುವಟಿಕೆ ಮಾಡುವ ಉದ್ಧೇಶದಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಕ ಅತೀ ಸುಲಭವಾಗಿ ಮಣ್ಣು ಹಾಗೂ ಕಲ್ಲು ತೆಗೆಯಲು ಪರವಾನಗಿಯನ್ನು ಪಡೆಯುವ ದಂಧೆಕೋರರು, ಬಳಿಕ ಇದೇ ಪರವಾನಿಗೆಯ ಮೂಲಕ ಅಕ್ರಮವಾಗಿ ಮಣ್ಣನ್ನು ಹೊರ ರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದಾರೆ. ಭೌಗೋಳಿಕವಾಗಿ ಕೊಂಚ ಭಿನ್ನವಾಗಿರುವ ಕರಾವಳಿಯಲ್ಲಿ ಈ ರೀತಿ ಗುಡ್ಡಗಳನ್ನು ಕೊರೆದು ಸಮತಟ್ಟು ಮಾಡುತ್ತಿರುವುದು ಕರಾವಳಿಯ ಭೌಗೋಳಿಕತೆಯ ಮೇಲೂ ಪರಿಣಾಮ ಬೀರಲಿದೆ.

ಮೂಡಬಿದ್ರೆ,ಗಂಜಿಮಠ,ಮುಚ್ಚೂರು ಕೊಡ್ಯಡ್ಕ,ನೀರುಡೆ,ಬಂಟ್ವಾಳ ತಾಲೂಕಿನ ಕನ್ಯಾನ,ಪೆರುವಾಯಿ, ಸಜಿಪ,ಮುಡಿಪು,ಬಾಳೆಪುಣಿ ಮೊದಲಾದ ಕಡೆಗಳಲ್ಲಿ ಲೋಡ್ ಮಾಡಿದ ಮಣ್ಣನ್ನು ಈ ಲಾರಿಗಳು ವಿಟ್ಲ-ಕಲ್ಲಡ್ಕ ರಸ್ತೆಯ ಮೂಲಕ,ಮತ್ತೊಂದು ಕಡೆ ಮೂಡಬಿದ್ರೆ-ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿ 169 ಮೂಲಕ ಬೃಹತ್ತ್ ಗಾತ್ರದ ಲಾರಿಗಳಲ್ಲಿ ಸಾಗಾಟ ಮಾಡುತ್ತಿದ್ದಾರೆ. ಇಂಥಹ ಭಾರೀ ಗಾತ್ರದ ವಾಹನಗಳ ಮೂಲಕ ಸಾಗಾಟ ಮಾಡುವ ಸಂದರ್ಭ ಸಂಚಾರಕ್ಕೆ ಅಡೆ-ತಡೆಯಾಗುತ್ತದೆ. ಇತ್ತೀಚೆಗೆ ಗುರುಪುರದ ಅಣೆ ಬಳಿ ಇಂತಹ ಮಣ್ಣಿನ ಎರಡು ಲಾರಿಗಳು ಮಗುಚಿ ಬಿದ್ದು ಜೀವ ಹಾನಿಯೂ ಉಂಟಾಗಿರುತ್ತದೆ. ಹೀಗಿದ್ದರೂ ಈ ಲಾರಿಗಳು ಇದೇ ರಸ್ತೆಗಳ ಮೂಲಕ ಸಂಚರಿಸುತ್ತಿದ್ದು, ಪೋಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ದಿನಕ್ಕೆ ಹತ್ತಾರು ಲಾರಿಗಳು ಈ ಮಣ್ಣನ್ನು ತುಂಬಿಕೊಂಡು ನಿರಂತರವಾಗಿ ರಸ್ತೆಯಲ್ಲಿ ಹೋಗುವುದರಿಂದ ಸ್ಥಳೀಯ ಜನರು ಪ್ರಾಣಭಯದಿಂದಲೇ ರಸ್ತೆಯಲ್ಲಿ ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ಹಿಂದೆ ಮಣ್ಣು ಸಾಗಾಟದ ಲಾರಿಯೊಂದು ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದು ವಿಟ್ಲದ ಸವಾರನೋರ್ವ ಮೃತಪಟ್ಟಿದ್ದಾನೆ. ಈ ಕಾರಣಕ್ಕಾಗಿ ಸಂಬಂದ ಎಲ್ಲಾ ಇಲಾಖೆಗಳು ಈ ಬಗ್ಗೆ ಎಚ್ಚರವಹಿಸಬೇಕಾಗಿದೆ.

ಈ ರೀತಿಯ ಮಣ್ಣು ಸಾಗಾಟದ ಜಮೀನುಗಳು ಬಂಟ್ವಾಳ ತಾಲೂಕಿನ ಮುಡಿಪು, ಇರಾ, ಕನ್ಯಾನ, ಮಂಗಳೂರು ಮತ್ತು ಮುಲ್ಕಿ- ಮೂಡಬಿದ್ರೆ ತಾಲೂಕಿನ ಹಲವು ಕಡೆಗಳಲ್ಲಿ ಕಾರ್ಯಾಚರಿಸುತ್ತಿದ್ದು, ಜುಜುಬಿ ರಾಜಸ್ವವನ್ನು ಸಂಗ್ರಹಿಸಿ ಸರಕಾರ ಕೋಟಿಗಟ್ಟಲೆ ಮೌಲ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಲು ಕಾನೂನಿನ ಮೂಲಕವೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೇ ಅವಕಾಶ ನೀಡಿದ್ದಾರೆ.ಇದೇ ರೀತಿಯ ಪ್ರಕ್ರಿಯೆ ನಡೆದಲ್ಲಿ ಬಳ್ಳಾರಿಯಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಮಣ್ಣಿನ ಗಣಿಗಾರಿಕೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ. ಆಂದ್ರಪ್ರದೇಶ ಹಾಗೂ ಇತರ ಭಾಗಗಳಿಗೆ ದ.ಕ ಜಿಲ್ಲೆಯ ಹಲವು ಕಡೆಗಳಲ್ಲಿ ಸಿಗುವಂತಹ ಕೆಂಪುಕಲ್ಲು ಮಿಶ್ರಿತ ಮಣ್ಣಿಗೆ ಭಾರೀ ಬೇಡಿಕೆ ಇರುವ ಕಾರಣಕ್ಕಾಗಿ ಈ ಭಾಗದಲ್ಲಿ ಎಲ್ಲೆಂದರಲ್ಲಿ ಗುಡ್ಡ ಪ್ರದೇಶಗಳನ್ನು ಕೊರೆದು ಮಣ್ಣು ಸಾಗಿಸಲಾಗುತ್ತಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಕಳ್ಳ ದಂಧೆಯಲ್ಲಿ ಶಾಮೀಲಾಗಿದ್ದಾರೆ.ಇವರಿಗೆ ತಿಂಗಳ ಮಾಮೂಲು ಸರಿಯಾಗಿ ಸಂದಾಯವಾಗುತ್ತಿದೆ.ಅದ್ದರಿಂದ ದ.ಕ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಮೌನಕ್ಕೆ ಶರಣಾಗಿ ಮಾಫಿಯಾದ ದಂಧೆಕೋರರೊಂದಿಗೆ ಕೈ ಜೋಡಿಸಿದ್ದಾರೆ. ಭೌಗೋಳಿಕವಾಗಿ ಕೊಂಚ ಭಿನ್ನವಾಗಿರುವ ಕರಾವಳಿಯಲ್ಲಿ ಈ ರೀತಿ ಗುಡ್ಡಗಳನ್ನು ಕೊರೆದು ಸಮತಟ್ಟು ಮಾಡುತ್ತಿರುವುದು ಕರಾವಳಿಯ ಭೌಗೋಳಿಕತೆಯ ಮೇಲೂ ಪರಿಣಾಮ ಬೀರಲಿದೆ ಎನ್ನುವ ಆತಂಕವನ್ನು ಪರಿಸರ ಪ್ರೇಮಿಗಳು ಹೊರ ಹಾಕುತ್ತಿದ್ದಾರೆ.