150 ಕ್ಷೇತ್ರಗಳಲ್ಲಿ ’ಕೈ’ ಪಟ್ಟಿ ಅಂತಿಮ.ಶೀಘ್ರದಲ್ಲಿ ಮೊದಲ ಪಟ್ಟಿ ಪ್ರಕಟ.

ರಾಜ್ಯ

ಮೋಹನ್‌ ಪ್ರಕಾಶ್‌ ನೇತೃತ್ವದ ಕಾಂಗ್ರೆಸ್‌ ಸ್ಕ್ರೀನಿಂಗ್‌ ಸಮಿತಿ ಹೆಚ್ಚಿನ ಗೊಂದಲಗಳಿಲ್ಲದ 150 ಕ್ಷೇತ್ರಗಳಿಗೆ ಒಂದು ಹೆಸರು ಅಂತಿಮಗೊಳಿಸಿದ್ದು, ಶೀಘ್ರದಲ್ಲಿ ಮೊದಲ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆಯಿದೆ.

ಮಂಗಳವಾರ ರಾತ್ರಿ ಸುಮಾರು ಮೂರು ತಾಸು ನಡೆದ ಸಭೆಯಲ್ಲಿ ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್, ಎಐಸಿಸಿ ಪ್ರಧಾನ‌ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಎಂ.ಬಿ. ಪಾಟೀಲ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದರು. ಈ ಸಭೆಯಲ್ಲಿ ಸಂಭವನೀಯ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಸಲ್ಲಿಸಲು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಒಟ್ಟು 68 ಹಾಲಿ ಶಾಸಕರ ಮತ್ತು ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿರುವವರಿಗೆ ಟಿಕೆಟ್‌ ಖಚಿತವಾಗಿದ್ದು, ಅವರ ಹೆಸರು ಅಂತಿಮ ಪಟ್ಟಿಯಲ್ಲಿದೆ. ಉಳಿದಂತೆ, ಸ್ವಲ್ಪ ಗೊಂದಲ ಇರುವ 30 ರಿಂದ 40 ಕ್ಷೇತ್ರಗಳಿಗೆ ಇಬ್ಬರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಇನ್ನೂ 40ರಿಂದ 50 ಕ್ಷೇತ್ರಗಳಲ್ಲಿ ಪೈಪೋಟಿ ಹೆಚ್ಚಿದ್ದು, 3–4 ಹೆಸರುಗಳಿವೆ ಎಂದೂ ಗೊತ್ತಾಗಿದೆ. ‘ಸ್ಕ್ರೀನಿಂಗ್ ಕಮಿಟಿಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಆಧರಿಸಿ ಸಮಾಲೋಚನೆ ನಡೆಸಿದ ನಾಯಕರು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದಾರೆ. ಗೊಂದಲಕ್ಕೆ ಯಾವುದೇ ಅವಕಾಶ ಇಲ್ಲದಂತೆ ಯಾವ ರೀತಿಯ ಹೆಜ್ಜೆ ಇಡಬೇಕು ಮತ್ತು ಚುನಾವಣಾ ರಣತಂತ್ರ ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಮಹತ್ವದ ಚರ್ಚೆ ಸಭೆಯಲ್ಲಿ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.