ದ.ಕ ಜಿಲ್ಲೆಯಲ್ಲಿ 4 ಕಡೆ ಸಿಪಿಎಂ ಸ್ಪರ್ಧೆ ಬಹುತೇಕ ಖಚಿತ.!

ರಾಜ್ಯ

ಕಾಮ್ರೇಡ್ ಗಳ ಹೋರಾಟಕ್ಕೆ ಜಿಲ್ಲೆಯ ಜನತೆ ಜೈ ಅನ್ನುವರೇ.?

ಒಂದೊಮ್ಮೆ ಕಮ್ಯುನಿಸ್ಟ್ ಪಕ್ಷದ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಮ್ಯುನಿಸ್ಟ್ ಪಕ್ಷ ನೆಲೆ ಕಳೆದುಕೊಂಡಿದೆ. ಆದರೆ ಜನಪರ ನಿಲುವು, ಅನ್ಯಾಯದ ವಿರುದ್ಧ ಹೋರಾಟಗಳಲ್ಲಿ ಎಲ್ಲಾ ಪಕ್ಷಗಳಿಗಿಂತಲೂ ಕಮ್ಯುನಿಸ್ಟ್ ಪಕ್ಷ ಮುಂಚೂಣಿಯಲ್ಲಿದೆ. ಆದರೆ ಇತ್ತೀಚಿನ ಚುನಾವಣಾ ದುಡ್ಡಿನ ರಾಜಕಾರಣದ ಮುಂದೆ ಕಮ್ಯುನಿಸ್ಟ್ ಪಕ್ಷದ ಜನಪರ ಹೋರಾಟಗಳು ‘ಮತ’ ಆಗಿ ಪರಿವರ್ತನೆಯಾಗುವುದರಲ್ಲಿ ಸೋತಿದೆ ಅನ್ನುವುದು ನೂರಕ್ಕೆ ನೂರು ಸತ್ಯ.

ಬೆಳ್ತಂಗಡಿ, ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದೆ ಸಿಪಿಎಂ ಶಾಸಕರಿದ್ದ ಕ್ಷೇತ್ರಗಳು. ಬಿ.ವಿ ಕಕ್ಕಿಲ್ಲಾಯ ಸಿಪಿಎಂ ಪಕ್ಷದಿಂದ ಶಾಸಕರಾಗಿ ಜನಾನುರಾಯಿಯಾಗಿದ್ದರು. ಇನ್ನೂ ಕೆಲವು ಕಾಮ್ರೇಡ್ ಗಳು ಕರಾವಳಿ ಭಾಗದಿಂದ ಶಾಸಕರಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಇತಿಹಾಸ ನಿರ್ಮಿಸಿದ್ದರು. ಸಮಾಜದ ತುಳಿತಕ್ಕೊಳಗಾದವರ ಪರ,ಬೀಡಿ ಕಾರ್ಮಿಕರು,ಹೆಂಚಿನ ಕಾರ್ಖಾನೆ ಕಾರ್ಮಿಕರು ಸೇರಿದಂತೆ ಹಲವಾರು ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು ಕಾಮ್ರೇಡ್ ಗಳು.

ಇತ್ತೀಚಿನ ದಿನಗಳಲ್ಲೂ ಕಾಮ್ರೇಡ್ ಗಳ ಹೋರಾಟಗಳು ಇತಿಹಾಸ ಪುಟಗಳಲ್ಲಿ ದಾಖಲಾಗಿವೆ. ಕರಾವಳಿ ಭಾಗದಲ್ಲಿ ಕೋಮುಗಲಭೆ ನಡೆದು ಅಲ್ಪಸಂಖ್ಯಾತರು ದೌರ್ಜನ್ಯಕ್ಕೊಳಗಾದಾಗ ಅವರ ಪರ ಯಾದವ್ ಶೆಟ್ಟಿ ನೇತೃತ್ವದಲ್ಲಿ ಗಟ್ಟಿ ಧ್ವನಿಗಳು ಮೊಳಗುತ್ತಿದ್ದವು. ದೇಶದ ಇತಿಹಾಸದಲ್ಲಿ ಟೋಲ್ ಗೇಟ್ ರದ್ದುಗೊಳಿಸಿದ ಕೀರ್ತಿ ಮುನೀರ್ ಕಾಟಿಪಳ್ಳ ನೇತೃತ್ವದ ಕಾಮ್ರೇಡ್ ಗಳಿಗೆ ಸಲ್ಲುತ್ತದೆ. ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ಧ ನಿರಂತರ ಹೋರಾಟದ ಮೂಲಕ ಮುಚ್ಚಿಸುವಲ್ಲಿ ಯಶಸ್ಸು ಕಂಡಿದ್ದಾರೆ. MRPL ನಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶದಿಂದ ಹಿಡಿದು ಮನೆ ಕಳೆದುಕೊಂಡವರ ಪರ ಧ್ವನಿ ಎತ್ತಿದ್ದೇ ಕಮ್ಯುನಿಸ್ಟರು. ಉಳ್ಳಾಲದಲ್ಲಿ ಖಾಸಗಿ ಮೆಡಿಕಲ್ ಮಾಫಿಯಾಕ್ಕೆ ನೌಶಾದ್ ಅನ್ನುವ ಯುವಕ ಕಾಲು ಕಳೆದುಕೊಂಡಾಗ, ತಪ್ಪಾದ ಚಿಕಿತ್ಸೆಗೆ ಪರಿಹಾರ ನೀಡುವುದಾಗಿ ನಂಬಿಸಿ ಕೈ ಬಿಟ್ಟಾಗ ಆ ಯುವಕನ ಪರ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಕಾರ್ಪೋರೇಟ್ ಆಸ್ಪತ್ರೆ ಗಳ ವಿರುದ್ಧ ನಿರಂತರ ಸಮರ ನಡೆಸುತ್ತಿದ್ದಾರೆ. ಧರ್ಮ ದಂಗಲ್, ಕೊಲೆ ರಾಜಕಾರಣದ ಹೆಸರಿನಲ್ಲಿ ಅಮಾಯಕ ಅಲ್ಫಸಂಖ್ಯಾತ ಯುವಕರನ್ನು ಫಿಕ್ಸ್ ಮಾಡಿದಾಗ ಅವರ ಪರ ನಿಂತವರು ಕಮ್ಯುನಿಸ್ಟರು. ವಿಠಲ ಮಲೆಕುಡಿಯ ಪ್ರಕರಣದಲ್ಲೂ ಕೊನೆಯವರೆಗೂ ಆತನ ಪರ ನಿಂತು ನ್ಯಾಯ ಒದಗಿಸಿಕೊಡುವಲ್ಲಿ ಕಾಮ್ರೇಡ್ ಗಳು ಸಫಲರಾಗಿದ್ದಾರೆ.

ಇಂತಹ ಒಂದಾ..ಎರಡಾ.. ನೂರಾರು ಉದಾಹರಣೆಗಳಿವೆ. ಜಾತ್ಯತೀತ ಲೇಬಲ್ಲಿನ ಪಕ್ಷಗಳು ಚುನಾವಣಾ ಸಮೀಪ ಬರುತ್ತಿದ್ದಂತೆ ಮತದಾರರ ಓಲೈಕೆಗೆ ನಾನಾ ಕಸರತ್ತು ಮಾಡುತ್ತಿದೆ. ಆದರೆ ಕಾಮ್ರೇಡ್ ಗಳು ಫೀಲ್ಡಿಗಿಳಿದು ಸಂತ್ರಸ್ತರ ಪರ ಪ್ರಾಮಾಣಿಕವಾಗಿ ನಿಂತಿದ್ದಾರೆ.

ಈಗ ಚುನಾವಣಾ ವರ್ಷ. ಎಲ್ಲಾ ಪಕ್ಷಗಳಂತೆ ಸಿಪಿಎಂ ರಾಜ್ಯದಾದ್ಯಂತ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ 4 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಪಕ್ಕಾ ಆಗಿದೆ. ಮಂಗಳೂರು (ಉಳ್ಳಾಲ), ಬೆಳ್ತಂಗಡಿ, ಮಂಗಳೂರು ಉತ್ತರ,ಮಂಗಳೂರು ನಗರ, ಪುತ್ತೂರಿನಲ್ಲಿ ಸಿಪಿಎಂ ಸ್ಪರ್ಧೆ ಬಹುತೇಕ ಖಚಿತವಾಗಿದೆ.

ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷರು,ರಾಜ್ಯ ಸಭಾ ಸದಸ್ಯರು ಕೇರಳದ ಪ್ರಭಾವಿ ನಾಯಕರು ಆದ ಎ.ಎ ರಹೀಂ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಹರೇಕಳದಲ್ಲಿ ಯುವಜನರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದ ಯುವಜನರ ಆಶೋತ್ತರಗಳಾದ ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಬದುಕಿನ ಪ್ರಶ್ನೆಗಳು ಈ ಬಾರಿಯ ಚುನಾವಣೆಯ ಚರ್ಚೆಯ ವಿಷಯವಾಗಲಿದೆ.
ಇದೇ ಹರೇಕಳದಲ್ಲಿ ಕಾಂಗ್ರೇಸ್ ಪಕ್ದದ ಸಿದ್ದರಾಮಯ್ಯ ನೇತ್ರತ್ವದಲ್ಲಿ ಭಾರಿ ಸಮ್ಮೇಳನ ನಡೆದಿತ್ತು.ಬೊಮ್ಮಾಯಿ ನೇತ್ರತ್ವದಲ್ಲೂ ಇದೇ ಜಾಗದಲ್ಲಿ ಬಿಜೆಪಿ ಬೃಹತ್ತ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಇದೀಗ ಇದೇ ಸ್ಥಳದಲ್ಲಿ ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷರು,ರಾಜ್ಯ ಸಭಾ ಸದಸ್ಯರು,ಕೇರಳದ ಪ್ರಭಾವಿ ನಾಯಕರು ಆದ ಎ.ಎ.ರಹೀಂ ನೇತ್ರತ್ವದಲ್ಲಿ ಯುವಜನ ಸಮಾವೇಶ ಕೂಡ ನಡೆಯಲಿದೆ.ಇದೆಲ್ಲವನ್ನು ನೋಡುವಾಗ ಮುಂದೆ ಬರುವಂತಹ ಚುನಾವಣೆಗೆ ಸಿಪಿಐಎಂ ಪಕ್ಷದ ಚುನಾವಣಾ ತಯಾರಿಯಂತಿದೆ.
ಒಟ್ಟಾರೆಯಾಗಿ ಸಿಪಿಐಎಂ ಪಕ್ಷ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕೆಲವು ರಾಜಕೀಯ ಪಕ್ಷಗಳಿಗೆ ಕಂಟಕ ತಪ್ಪಿದ್ದಲ್ಲ.!