ಕಲಬುರಗಿ ಜಿಲ್ಲೆಯ ಆಳಂದ ಬಳಿಯ ಲಾಡ್ಲೆ ಮಶಾಕ್ ದರ್ಗಾ ವಿವಾದದ ಕುರಿತಂತೆ ಕಲಬುರಗಿ ವಕ್ಫ್ ಟ್ರಿಬ್ಯುನಲ್ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಅನುಮತಿ ನೀಡಿದೆ.
ಸಾಕಷ್ಟು ವಿವಾದ ಸೃಷ್ಟಿಸಿದ್ದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಕಲಬುರಗಿ ವಕ್ಫ್ ಟ್ರಿಬ್ಯುನಲ್ ಕೋರ್ಟ್ ಅನುಮತಿ ನೀಡಿದೆ. ಹಿಂದು ಮತ್ತು ಮುಸ್ಲಿಂರಿಗೂ ಪೂಜೆಗೆ ಅವಕಾಶ ನೀಡಿದೆ. ಪೂಜೆಗೆಂದು ಪ್ರತ್ಯೇಕ ಸಮಯ ನೀಡಿ ಕೋರ್ಟ್ ಆದೇಶ ನೀಡಿದೆ.
ಶಿವರಾತ್ರಿ ಹಬ್ಬವಾದ ಇಂದು ಲಾಡ್ಲೆ ಮಶಾಕ್ ದರ್ಗಾದಲ್ಲಿ ಉರಸ್ ಇರುವ ಹಿನ್ನಲೆ ಬೆಳಗ್ಗೆ 8 ಗಂಟೆಯಿಂದ 2 ಗಂಟೆಯವರೆಗೆ ಮುಸ್ಲಿಂರಿಗೆ ಪೂಜೆಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 2 ರಿಂದ ಸಂಜೆ 6 ವರೆಗೆ ಹಿಂದುಗಳಿಗೆ ಶಿವಲಿಂಗ ಪೂಜೆಗೆ ಅವಕಾಶ ನೀಡಿದೆ. ಅಲ್ಲದೇ ಪೂಜೆಗೆ 15 ಜನ ಹಿಂದುಗಳು ಮಾತ್ರೆ ತೆರಳಿ ಪೂಜೆ ನೆರವೇರಿಸುವಂತೆ ಆದೇಶ ಹೊರಡಿಸಿದೆ.
ಮಹಾಶಿವರಾತ್ರಿ ನಿಮಿತ್ಯ ಆಳಂದ ಪಟ್ಟಣದಲ್ಲಿ ಫೆ.18 ರಂದು ಲಾಡ್ಲೆ ಮಶಾಕ್ ದರ್ಗಾದದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಸಿದ್ದಲಿಂಗೇಶ್ವರ ಸ್ವಾಮಿಗಳಿಂದ ಮಹಾಪೂಜೆ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಫೆ.17ರ ರಾತ್ರಿ 12 ರಿಂದ ಫೆ.18ರ ರಾತ್ರಿ 12 ಗಂಟೆ ವರೆಗೆ ಪಟ್ಟಣದಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.