ಕರ್ನಾಟಕ ವಿಧಾನ ಸಭೆ ಚುನಾವಣೆ ಹಿನ್ನೆಲೆ 47 ಸಾವಿರ ರೌಡಿಗಳ ಮೇಲೆ ಖಾಕಿ ಕಣ್ಣು

ರಾಜ್ಯ

ಮಂಗಳೂರು 1,526, ದ.ಕನ್ನಡ ಜಿಲ್ಲೆ 1,158,ಉಡುಪಿಯಲ್ಲಿ1,154 ರೌಡಿಗಳು

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿರುವ 47,001 ರೌಡಿಶೀಟರ್‌ಗಳ ಮೇಲೂ ಖಾಕಿ ಹದ್ದಿನ ಕಣ್ಣಿಟ್ಟಿದೆ. ಹಳೇ ಚಾಳಿ ಮುಂದುವರಿಸುತ್ತಿರುವ ರೌಡಿಗಳ ಹೆಡೆಮುರಿ ಕಟ್ಟಲು ಕಾರ್ಯಾಚರಣೆ ಶುರು ಹಚ್ಚಿಕೊಂಡಿದೆ.ವಿಧಾನಸಭೆ ಚುನಾವಣೆ ರಂಗೇರಲು ಕೆಲ ತಿಂಗಳುಗಳಷ್ಟೇ ಬಾಕಿಯಿದ್ದು, ಅಲ್ಲಲ್ಲಿ ಸದ್ದಿಲ್ಲದೇ ರೌಡಿ ಚಟುವಟಿಕೆಗಳು ನಡೆಯುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಸರ್ಕಾರವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ.ಈ ನಿಟ್ಟಿನಲ್ಲಿ ಫ‌ುಲ್‌ ಅಲರ್ಟ್‌ ಆಗಿರುವ ರಾಜ್ಯ ಖಾಕಿ ಪಡೆ ಕರ್ನಾಟಕದಲ್ಲಿರುವ 47,001 ರೌಡಿಗಳ ಮೇಲೂ ನಿಗಾ ಇಟ್ಟಿದೆ. ಪದೇಪದೆ ಹಳೇ ಚಾಳಿ ಮುಂದುವರಿಸುತ್ತಿರುವ ರೌಡಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು ಶೀಘ್ರದಲ್ಲಿ ಒಬ್ಬೊಬ್ಬರನ್ನೇ ಬಂಧಿಸುವ ಕಾರ್ಯ ನಡೆಯಲಿದೆ.

ಇದು ಚುನಾವಣೆ ವರ್ಷವಾಗಿದ್ದು, ರೌಡಿಗಳಿಂದ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆಲವು ಗಣ್ಯರ ಜೀವಕ್ಕೆ ಸಂಚಕಾರ ಬರುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಅಹಿತಕರ ಘಟನೆ ನಡೆದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ. ರೌಡಿಗಳು ಬಾಲ ಬಿಚ್ಚಿದರೆ ರಾಜ್ಯದ ಘನತೆಗೆ ಕುಂದುಂಟಾಗಲಿದೆ.ಹೀಗಾಗಿ ರೌಡಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದ ಬಹುತೇಕ ಪೊಲೀಸ್‌ ಠಾಣೆಗಳಲ್ಲಿ ಪದೇಪದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರು ಹಾಗೂ ಹಿಂದಿನ ಚುನಾವಣೆ ವೇಳೆ ಅಪರಾಧಗಳಲ್ಲಿ ಭಾಗಿಯಾದ ರೌಡಿಗಳನ್ನು ಜೈಲಿಗಟ್ಟಲಾಗಿದೆ. ಇತ್ತೀಚೆಗೆ ಬಾಂಡ್‌ ಉಲ್ಲಂಘಿಸಿ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ 35 ರೌಡಿಶೀಟರ್‌ಗಳನ್ನು ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸರು ಜೈಲಿಗಟ್ಟಿರುವುದು ಮೇಲಿನ ಅಂಶಗಳಿಗೆ ಪುಷ್ಠಿ ನೀಡುತ್ತದೆ.

2023ರ ಜನವರಿ ತಿಂಗಳಲ್ಲಿ ಅತೀ ಹೆಚ್ಚು 7,361 ರೌಡಿಶೀಟರ್‌ಗಳನ್ನು ರೌಡಿಪಟ್ಟಿಯಿಂದ ಕೈಬಿಡಲಾಗಿದೆ. ಮಂಗಳೂರಿನಲ್ಲಿ 781, ಉಡುಪಿ 292,ರೌಡಿ ಪಟ್ಟಿಯಿಂದ ಕೈ ಬಿಡಲಾಗಿದೆ.ಮಂಗಳೂರು ನಗರದಲ್ಲಿ 1,526, ದ.ಕನ್ನಡ ಜಿಲ್ಲೆಯಲ್ಲಿ -1,158,ಉಡುಪಿ ಜಿಲ್ಲೆಯಲ್ಲಿ-1,154 ರೌಡಿಗಳು ಇದೀಗ ಲೀಸ್ಟಿನಲ್ಲಿದ್ದಾರೆ.