ಯಾಕೆ ರೋಹಿಣಿ ವಿರುದ್ಧ ಯಾವುದೇ ತನಿಖೆ ಆಗಲ್ಲ..?
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬಗ್ಗೆ ಸಾಕಷ್ಟು ಆರೋಪವನ್ನು ಐಪಿಎಸ್ ಅಧಿಕಾರಿ ರೂಪಾ ಮಾಡಿದ್ದಾರೆ. ಮೈಸೂರು ಡಿಸಿ ಆಗಿದ್ದ ಶರತ್ ವರ್ಗಾವಣೆಗೆ ರೋಹಿಣಿ ಸಿಂಧುರಿ ಪ್ರಭಾವ ಬೀರಿದ್ರು ಎನ್ನುವ ಆರೋಪ ಮಾಡಿದ್ದಾರೆ. ತಿಂಗಳಿಗೂ ಮುಂಚೆಯೇ ಸರ್ಕಾರ ವರ್ಗಾವಣೆ ಮಾಡಿದ್ದಂತೂ ಸತ್ಯ. ಆ ವರ್ಗಾವಣೆ ಹಿಂದೆ ರೋಹಿಣಿ ಸಿಂಧುರಿ ಪ್ರಭಾವ ವರ್ಕ್ ಆಯ್ತಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಇನ್ನು ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 32 ಜನರು ಸಾವನ್ನಪ್ಪಿದ್ದರು. ಅಂದಿನ ಚಾಮರಾಜನಗರ ಡಿಸಿ ಆಗಿದ್ದ ಎಂ.ಆರ್.ರವಿ ಆರೋಪ ಮಾಡಿದ್ದರು. ನಮ್ಮ ಆಕ್ಸಿಜನ್ ವಾಹನ ಮೈಸೂರಿಗೆ ಹೋದರೂ ಆಕ್ಸಿಜನ್ ಕೊಡದಂತೆ ರೋಹಿಣಿ ಸಿಂಧೂರಿ ಒತ್ತಡ ಏರಿದ್ದರು. ಈ ಅಧಿಕಾರವನ್ನು ರೋಹಿಣಿ ಅವರಿಗೆ ಕೊಟ್ಟಿದ್ದು ಯಾರು..? ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಕರಣದಲ್ಲೂ ರೋಹಿಣಿ ಸಿಂಧೂರಿ ಸಿಲುಕಲಿಲ್ಲ. ಯಾವುದೇ ತನಿಖೆಯೂ ನಡೆಯಲಿಲ್ಲ. ಬಡಜನರ ಸಾವಿಗೆ ಕಾರಣ ಯಾರು ಅನ್ನೋದನ್ನು ಸರ್ಕಾರ ಪತ್ತೆ ಮಾಡುವ ಗೋಜಿಗೂ ಹೋಗಲಿಲ್ಲ. ಅದು ಹೊರ ಬಂದಿದ್ದರೆ ಸರ್ಕಾರಕ್ಕೂ ಮುಜುಗರ ಅನ್ನೋ ಕಾರಣಕ್ಕೆ ಸುಮ್ಮನಾಯ್ತು.
ಮೈಸೂರಿನ ಪಾರಂಪರಿಕ ಕಟ್ಟಡದಲ್ಲಿ ಸ್ವಿಮ್ಮಿಂಗ್ ಪೂಲ್ ಮಾಡಿಸಿದ್ದಾರೆ. ಕೊರೊನಾ ಸಮಯದಲ್ಲಿ ಜನರ ಸೇವೆ ಮಾಡಬೇಕಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಸ್ವಿಮ್ಮಿಂಗ್ ಪೂಲ್ ಮಾಡಿದ್ದು ಕಾನೂನು ಬಾಹೀರ ಎಂದು ಜೆಡಿಎಸ್ ಶಾಸಕ ಸಾ ರಾ ಮಹೇಶ್ ಆರೋಪ ಮಾಡಿದ್ದರು. ಆ ಬಳಿಕ 8 ರೂಪಾಯಿ ಬೆಲೆ ಬಾಳುವ ಬಟ್ಟೆ ಬ್ಯಾಗ್ಗೆ 52 ರೂಪಾಯಿ ಕೊಟ್ಟ ಖರೀದಿ ಮಾಡಿದ್ದಾರೆ. ಸರ್ಕಾರಕ್ಕೆ ಬರೋಬ್ಬರಿ 6 ಕೋಟಿ ರೂಪಾಯಿ ಅಕ್ರಮ ಮಾಡಲಾಗಿದೆ ಎಂದು ಸಾರಾ ಮಹೇಶ್ ಆರೋಪ ಮಾಡಿದ್ದರು. ತನಿಖೆಗೂ ಆಗ್ರಹ ಮಾಡಿದ್ದರು. ವಿಧಾನಸಭಾ ಅಧಿವೇಶನದಲ್ಲೂ ಒತ್ತಾಯ ಮಾಡಿದರು. ಆದರೂ ರಾಜ್ಯ ಬಿಜೆಪಿ ಸರ್ಕಾರ ಯಾವುದೇ ತನಿಖೆ ಮಾಡುವ ಪ್ರಯತ್ನ ಮಾಡಲಿಲ್ಲ. ಸಾರಾ ಮಹೇಶ್ ಆಕ್ರಂದನ ಘೋರ ಕಲ್ಲ ಮೇಲೆ ಮಳೆ ಸುರಿದಂತೆ ಎನ್ನುವಂತಿತ್ತು. ಇಷ್ಟೆಲ್ಲಾ ಆರೋಪಗಳು ಕೇಳಿ ಬಂದರೂ ಸರ್ಕಾರ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೂಡುವುದು ಸಹಜ. ಇದಕ್ಕೆ ಉತ್ತರ ನಾವು ಹೇಳ್ತೀವಿ. ರೋಹಿಣಿ ಸಿಂಧೂರಿಯನ್ನು ಪ್ರಶ್ನೆ ಮಾಡುವ ಯಾವ ಸಚಿವರೂ ಇಲ್ಲ. ಹಿರಿಯ ಐಎಎಸ್ ಅಧಿಕಾರಿಗಳು ಇಲ್ಲ ಎನ್ನುತ್ತಾರೆ ಹಿರಿಯ ಅಧಿಕಾರಿ ಒಬ್ಬರು.
ರೋಹಿಣಿ ಸಿಂಧೂರಿ ಅವರು ರಾಜ್ಯ ಸರ್ಕಾರದಲ್ಲಿ ಪ್ರಮುಖ ರಾಜಕಾರಣಿಗಳಿಗೆ ಆತ್ಮೀಯರು ಎನ್ನಲಾಗಿದ್ದು, ಯಾವುದೇ ಕೇಸ್ ಕೂಡ ರೋಹಿಣಿ ವಿರುದ್ಧ ದಾಖಲಾಗುವುದಿಲ್ಲ. ಇದೇ ಕಾರಣಕ್ಕೆ ಯಾವುದೇ ಐಎಎಸ್ ಅಧಿಕಾರಿಗಳಿಗೂ ರೋಹಿಣಿ ಸಿಂಧೂರಿ ಸೊಪ್ಪು ಹಾಕುವುದಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮಾತಿಗೂ ರೋಹಿಣಿ ಸಿಂಧೂರಿ ಒಮ್ಮೆಮ್ಮೆ ಕ್ಯಾರೇ ಎನ್ನುವುದಿಲ್ಲ ಎನ್ನುತ್ತಾರೆ ವಿಧಾನಸೌಧದ ಅಧಿಕಾರಿಗಳು. ಯಾವುದೇ ಅಧಿಕಾರಿ ಅಥವಾ ಶಾಸಕರು, ರಾಜಕಾರಣಿಗಳು ತಮ್ಮ ವಿರುದ್ಧ ಆರೋಪ ಮಾಡಿದಾಗ ಅದಕ್ಕೆ ಉತ್ತರ ನೀಡದೆ ಮೌನಕ್ಕೆ ಶರಣಾಗುವುದು ರೋಹಿಣಿ ಸಿಂಧೂರಿ ಅವರ ತಂತ್ರಗಾರಿಕೆ. ಆ ಬಳಿಕ ತಮ್ಮದೇ ಆದ ಸಾಮಾಜಿಕ ಜಾಲತಾಣವನ್ನು ನೋಡಿಕೊಳ್ಳುವ ಏಜೆನ್ಸಿ ಮೂಲಕ ಸಾರ್ವಜನಿಕರ ಕಣ್ಣಿಗೆ ಮಣ್ಣೆರೆಚುವ ರೀತಿಯಲ್ಲಿ ಪೋಸ್ಟ್ಗಳನ್ನು ಹಾಕಲಾಗುತ್ತದೆ. ರೋಹಿಣಿ ಸಿಂಧೂರಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ ಆಗಿರುವ ಕಾರಣಕ್ಕೆ ಎಲ್ಲರೂ ಟಾರ್ಗೆಟ್ ಮಾಡುತ್ತಾರೆ ಎಂದು ಪೋಸ್ಟ್ಗಳನ್ನು ಹಾಕಲಾಗುತ್ತದೆ. ಇದೇ ಕಾರಣಕ್ಕೆ ಯಾರಾದರೂ ಆರೋಪ ಮಾಡಿದಾಗ ಜನರು ಜಾಲತಾಣದಲ್ಲೂ ಸಿಂಧೂರಿ ಪರವಾಗಿಯೇ ನಿಲ್ಲುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ರೋಹಿಣಿ ಸಿಂಧೂರಿ ಯಾರಿಗೆ ಸಿಂಹಸ್ವಪ್ನ ಆಗಿದ್ದಾರೆ ಎನ್ನುವುದು ಮಾತ್ರ ಗೊತ್ತಿಲ್ಲ. ಆದರೆ ಹಿರಿಯ ಅಧಿಕಾರಿಗಳಿಗೂ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎನ್ನುವುದು ಮಾತ್ರ ವಿಧಾನಸೌಧದ ಪಡಸಾಲೆ ಮಾತನಾಡುತ್ತದೆ.