ಮೊಹಿದ್ದೀನ್ ಬಾವಾ- ಇನಾಯತ್ ಆಲಿ ಗೆ ಬಿಗ್ ಶಾಕ್.!

ಕರಾವಳಿ

ಇಬ್ಬರ ಜಗಳದಲ್ಲಿ’ಬಿಲ್ಲವ’ ಪದ್ಮರಾಜ್ ಹೆಸರು ಮುಂಚೂಣಿಯಲ್ಲಿ.!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಟಿಕೆಟ್ ಹಂಚಿಕೆಗೆ ಭಾರೀ ತೊಡಕಾಗಿರುವ ಕ್ಷೇತ್ರ ಇದ್ದರೆ ಅದು ಮಂಗಳೂರು ಉತ್ತರ ಮಾತ್ರ. ಅಂತಹ ಪುತ್ತೂರಿನಲ್ಲಿ ಹತ್ತಾರು ಬಣಗಳಿದ್ದರೂ ಇದೀಗ ಅಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ. ಆದರೆ ಮಂಗಳೂರು ಉತ್ತರದಲ್ಲಿ ಗುಂಪುಗಾರಿಕೆಗೆ ಇನ್ನೂ ಲಗಾಮು ಬಿದ್ದಂತ್ತಿಲ್ಲ. ಇಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಾಗಿ ನಾಯಕರ ವೈಯುಕ್ತಿಕ ಪ್ರತಿಷ್ಠೆಯೇ ಮೇಳೈಸಿದೆ. ಮುಸ್ಲಿಂ ಸಮುದಾಯಕ್ಕೆ ಸಿಕ್ಕ ಅವಕಾಶವನ್ನು ಕೈಯಾರೆ ಕಳೆದುಕೊಳ್ಳುವ ಅವಕಾಶವೇ ಹೆಚ್ಚಾಗಿದೆ. ಮಾಡಿದುಣ್ಣೋ ಮಹರಾಯ ಅನ್ನುವ ಗಾದೆಮಾತಿನಂತೆ ಇಬ್ಬರ ಜಗಳ ಮೂರನೆಯವನಿಗೆ ಲಾಭ ತಂದುಕೊಡುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿದೆ.

ಮಂಗಳೂರು ಉತ್ತರದಲ್ಲಿ ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ, ಹೊಸ ಮುಖ ಇನಾಯತ್ ಆಲಿ ಮುಲ್ಕಿ ಇವರ ಮಧ್ಯೆ ಟಿಕೆಟ್ ಗಾಗಿ ಕಳೆದ ಎಂಟು ತಿಂಗಳಿಂದೀಚೆಗೆ ಭಾರೀ ಪೈಪೋಟಿ ಏರ್ಪಟ್ಟಿದೆ. ಇಬ್ಬರು ನಾಯಕರು ಹಿಂಬಾಲಕರ ದಂಡೇ ಕಟ್ಟಿಕೊಂಡು ಕ್ಷೇತ್ರಾದ್ಯಂತ ಓಡಾಡುತ್ತಿದ್ದಾರೆ. ‘ಟಿಕೆಟ್ ನನಗೆ’ ಎಂದು ಇಬ್ಬರು ನಾಯಕರು ಮದುವೆ,ಮುಂಜಿ,ಕೋಲ,ಕ್ರಿಕೇಟ್,ಉರೂಸ್,ಜಾತ್ರೆ,ಶವಯಾತ್ರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ಯಕರ್ತರು ಯಾರಿಗೆ ಟಿಕೆಟ್ ಸಿಗಬಹುದು ಅನ್ನುವ ಗೊಂದಲದಲ್ಲಿ ದಿನದೂಡುತ್ತಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಇನಾಯತ್ ಅಲಿ ಮುಲ್ಕಿಯವರಿಗೆ ಟಿಕೆಟ್ ಬಹುತೇಕ ಖಚಿತಪಡಿಸಿದ್ದರೂ, ಮೊಹಿದ್ದೀನ್ ಬಾವಾರನ್ನು ಆಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕ್ಷೇತ್ರದಾದ್ಯಂತ ಸುತ್ತಾಡುತ್ತಿರುವುದರಿಂದ ತನಗೆ ಟಿಕೆಟ್ ಸಿಗದಿದ್ದರೆ ಬಂಡಾಯವಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಬಾವಾ ಘೋಷಿಸಿರುವುದರಿಂದ ಇನಾಯತ್ ಅಲಿ ಮುಲ್ಕಿಯವರಿಗೆ ಟಿಕೆಟ್ ಫೈನಲ್ ಆಗುವುದಕ್ಕೆ ತೊಡಕಾಗಿದೆ. ಬಾವಾ ಪಕ್ಷೇತರರಾಗಿ ಸ್ಪರ್ಧಿಸಿದರೆ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸುವ ಸಾಧ್ಯತೆ ಹೆಚ್ಚಳವಾಗಿದೆ.

ಬಾವಾ-ಆಲಿ ಮಧ್ಯೆ ನಡೆಯುತ್ತಿರುವ ಟಿಕೆಟ್ ಸಮರವನ್ನು ಬಲು ಚಾಣಾಕ್ಷತೆಯಿಂದ ನೋಡುತ್ತಾ ಕುಳಿತಿರುವ ಕಾಂಗ್ರೆಸ್ ನೊಳಗಿನ ಬಿಲ್ಲವ ಬಣ ಇದೀಗ ಜಾಣ ನಡೆ ಇಟ್ಟಿರುವುದು ಮೊಹಿದ್ದೀನ್ ಬಾವಾ, ಇನಾಯತ್ ಆಲಿ ಮುಲ್ಕಿಗೆ ಶಾಕ್ ಕೊಟ್ಟಿದೆ. ಇಬ್ಬರು ಮುಸ್ಲಿಂ ನಾಯಕರ ಜಗಳದಿಂದ ಮಂಗಳೂರು ಉತ್ತರದಲ್ಲಿ ಮುಸ್ಲಿಮರಿಗೆ ಟಿಕೆಟ್ ತಪ್ಪುತ್ತದೆ ಅನ್ನುವ ಮುಂದಾಲೋಚನೆಯಿಂದ ಮುಸ್ಲಿಂ ನಾಯಕರು ಇಬ್ಬರು ನಾಯಕರನ್ನು ಅಜ್ಞಾತ ಸ್ಥಳಕ್ಕೆ ಕರೆಯಿಸಿ ಗೌಪ್ಯ ಮೀಟಿಂಗ್ ನಡೆಸಿದರೂ ಫಲಪ್ರದವಾದಂತೆ ಕಾಣುತ್ತಿಲ್ಲ. ಮುಸ್ಲಿಂ ನಾಯಕರ ಸಂಧಾನ ಸರ್ಕಸ್ ಎಂಟ್ರಿ ಬಹುತೇಕ ತಡವಾಯಿತು ಅನ್ನುವ ಅಭಿಪ್ರಾಯ ಮುಸ್ಲಿಂ ವಲಯಗಳಲ್ಲಿ ಕೇಳಿಬರತೊಡಗಿದೆ. ಇಬ್ಬರು ನಾಯಕರು ತಮ್ಮ ಪಟ್ಟನ್ನು ಬಿಟ್ಟುಕೊಡಲು ತಯಾರಿಲ್ಲದ ಕಾರಣ ಸಂಧಾನ ಕೂಡ ಸಕ್ಸಸ್ ಆಗಿಲ್ಲ.

ಆದರೆ ಇತ್ತ ತೆರೆಮರೆಯಲ್ಲಿ ಬಿಲ್ಲವ ಟೀಂ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ದೆಹಲಿ ಮಟ್ಟದಲ್ಲಿ ಲಾಬಿ ಆರಂಭಿಸಿದೆ. ಮಂಗಳೂರು ಉತ್ತರದಲ್ಲಿ ಇಬ್ಬರು ನಾಯಕರು ಟಿಕೆಟ್ ಗಾಗಿ ಪರಸ್ಪರ ಪೈಪೋಟಿಗೆ ಇಳಿದಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಇಬ್ಬರನ್ನೂ ಬಿಟ್ಟು ಬಿಲ್ಲವ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬೇಕೆನ್ನುವ ಹೊಸ ಕೂಗು ಜೋರಾಗಿ ಕೇಳಿ ಬಂದಿದೆ. ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೂ ತಲುಪಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷಗಿರಿ, ಎಂಎಲ್ಸಿ, ಬೆಳ್ತಂಗಡಿ ಕ್ಷೇತ್ರ ಹೀಗೆ ಮೂರು ಕಡೆ ಬಿಲ್ಲವ ಪ್ರತಿನಿಧಿಗೆ ಕಾಂಗ್ರೆಸ್ ಮಣೆ ಹಾಕಿದೆ. ಆದರೆ ಬಿಲ್ಲವ ಮತದಾರರು ಮಾತ್ರ ಕಾಂಗ್ರೆಸ್ ಗೆ ಮಣೆ ಹಾಕುತ್ತಿಲ್ಲ. ಇದೀಗ ಮಂಗಳೂರು ಉತ್ತರ ಕ್ಷೇತ್ರವನ್ನು ಬಿಲ್ಲವರಿಗೆ ಬಿಟ್ಟು ಕೊಡುವುದು ಯಾವ ನ್ಯಾಯ? ಅನ್ನುವ ಮಾತು ಕೇಳಿ ಬರತೊಡಗಿದೆ.

ಜಿಲ್ಲೆಯ ಬಿಲ್ಲವರ ಪರಮೋಚ್ಚ ನಾಯಕ ಜನಾರ್ಧನ ಪೂಜಾರಿ ಯವರನ್ನು ಜಿಲ್ಲೆಯಲ್ಲಿ ಬಹು ಸಂಖ್ಯೆಯಲ್ಲಿರುವ ಬಿಲ್ಲವರಿಂದ ಗೆಲ್ಲಿಸಿ ಕೊಡಲು ಸಾಧ್ಯವಾಗಿಲ್ಲ. ಇನ್ನೂ ಮಂಗಳೂರು ಉತ್ತರ ಕ್ಷೇತ್ರವನ್ನು ಬಿಲ್ಲವರಿಗೆ ನೀಡಿದರೆ ಗೆಲ್ಲಲು ಸಾಧ್ಯವೇ.? ಇದೀಗ ಬಿಲ್ಲವರಲ್ಲಿ ಒಂದು ಗುಂಪು ಪದ್ಮರಾಜ್ ರವರ ಅಭ್ಯರ್ಥಿತನಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಬಿಲ್ಲವರಲ್ಲಿ ಬಹುತೇಕರು ಬಿಜೆಪಿಯ ಕಟ್ಟರ್ ಸಂಘಟನೆಯಲ್ಲಿ ಗುರುತಿಸಿಕೊಂಡವರು. ಬಂಟ ಸಮುದಾಯ ಸಾಮೂಹಿಕವಾಗಿ ಬಿಜೆಪಿ ಕಡೆ ವಾಲುವ ಸಾಧ್ಯತೆ ಇದೆ. ಮುಸ್ಲಿಂ ಸಮುದಾಯ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಎಸ್ ಡಿ ಪಿ ಐ,ಜೆಡಿಎಸ್,ಲಾಭ ಪಡೆಯುವ ಸಾಧ್ಯತೆ ಹೆಚ್ಚಿದೆ.

ಇಬ್ಬರ ಜಗಳದಲ್ಲಿ ಕಾಂಗ್ರೆಸ್ ಸದಸ್ಯತ್ವವೇ ಪಡೆಯದ ಬಿಲ್ಲವ ಪದ್ಮರಾಜ್ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಬಿ.ಕೆ. ಹರಿಪ್ರಸಾದ್ ಕೈ ಚಳಕ ಕೆಲಸ ಮಾಡಿದೆ ಅನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನಾದರೂ ಕಾಂಗ್ರೆಸ್ ಮುಸ್ಲಿಂ ನಾಯಕರು ಗುಂಪು ಕಟ್ಟಿಕೊಂಡು ಟಿಕೆಟ್ ಫೈಟಿಗೆ ಇಳಿಯುವ ಬದಲು, ಸಂಧಾನದ ಮೂಲಕ ಓರ್ವ ಮುಸ್ಲಿಂ ನಾಯಕನ ಹೆಸರು ಅಂತಿಮಗೊಳಿಸಿದರೆ ಒಳ್ಳೆಯದು. ಇಲ್ಲವಾದರೆ ಇವರು ಜಗಳ ಮಾಡುತ್ತಲೇ ಇರಬೇಕು. ಟಿಕೆಟ್ ಮತ್ತೊಬ್ಬರಿಗೆ ದೊರೆಯುವುದು ಸತ್ಯ.ಬ್ಯಾರಿಗಳಿಗೆ ಬ್ಯಾನರೇ..ಗತಿ. ಇನ್ನಾದರೂ ಅರ್ಥ ಮಾಡಿಕೊಳ್ಳಲಿ.ಅಂತು-ಇಂತು ಕಾಂಗ್ರೇಸಿಗರು ಉತ್ತರವನ್ನು ಮರೆಯುವುದೇ ಲೇಸು.!