ಬಡಗುಳಿಪಾಡಿ ಗ್ರಾಮದಲ್ಲಿ ಟ್ರಕ್ ಬೇ ಮಾಡಲು ಸರ್ವೇ
ಮಂಗಳವಾರ ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಸಾಣೂರು-ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಭೆ ಸೇರಿ ಸಮಿತಿಯ ಅಧ್ಯಕ್ಷರಾದ ಮರಿಯಮ್ಮ ಥೋಮಸ್ 2016 ರಿಂದ ಇಂದಿನ ತನಕ ನಡೆದು ಬಂದ ಹೋರಾಟದ ಹಾದಿಯನ್ನು ಸೇರಿದ ಭೂ ಸಂತ್ರಸ್ತರಿಗೆ ತಿಳಿಸಿದರು.ಅಂದಿನಿಂದ ಇಂದಿನ ತನಕ ನಾವು ಎಲ್ಲಾ ಸಂದರ್ಭಗಳಲ್ಲಿ ಭೂ ಸ್ವಾಧೀನ ಅಧಿಕಾರಿಗಳನ್ನು,ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಮತ್ತು ನಮ್ಮ ಜನ ಪ್ರತಿನಿಧಿಗಳನ್ನು ಆಗಾಗ್ಗೆ ಭೇಟಿ ಮಾಡಿ ಸಂತ್ರಸ್ತರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿರುತ್ತೇವೆ. ಆದರೂ ನಮಗೆ ನ್ಯಾಯ ದೊರಕುವ ಸೂಚನೆಗಳು ಬರದೆ ಇದ್ದಾಗ ನಾವು ಕೋರ್ಟು ಮೆಟ್ಟಿಲೇರುವ ಸಂದರ್ಭ ಒದಗಿ ಬಂತು.ಇದು ನಮ್ಮ ದುರದೃಷ್ಟ. ಆದರೆ ಕೋರ್ಟು ನಮ್ಮ ಪರವಾಗಿ ತೀರ್ಪು ನೀಡಿ ನಮ್ಮ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಿರುವುದು ಸಂತೋಷದ ವಿಚಾರ ಎಂದರು.
ಈ ತಿಂಗಳು ಕೋರ್ಟು ನೀಡಿರುವ ತೀರ್ಪಿನ ಪ್ರತಿ ಇನ್ನೂ ದೊರಕದೆ ಇರುವುದರಿಂದ ಈಗಲೇ ನಮ್ಮ ಮುಂದಿನ ನಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸ್ವಲ್ಪ ಕಷ್ಟವಾಗಬಹುದು.ನಾವು ಕೆಲವೇ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ನಮ್ಮ ಅವಹಾಲುಗಳನ್ನು ಅವರಿಗೆ ಮನವರಿಕೆ ಮಾಡಿ ಕೊಡುವ ಬಗ್ಗೆ ವಿಚಾರ ಮಾಡುತ್ತೇವೆ ಎಂದು ತಿಳಿಸಿದರು.ಮೂರು ಗ್ರಾಮಗಳ ನಾಲ್ಕು ಅರ್ಜಿಗಳನ್ನು ವಿಲೇವಾರಿ ಮಾಡಿ ಮೊದಲೇ ಆಗಿರುವಂತಹ ಅವಾರ್ಡ್ ನಂತೆ ಪರಿಹಾರ ನೀಡಲು ಹೈಕೋರ್ಟು ಈಗಾಗಲೇ ಸೂಚಿಸಿದ್ದರೂ ಸಹ ಹೆದ್ದಾರಿ ಇಲಾಖೆಯು ಮತ್ತೊಮ್ಮೆ ಈ ಮೂರು ಗ್ರಾಮಗಳ ವಿಷಯದಲ್ಲಿ ಜಿಲ್ಲಾಧಿಕಾರಿಗಳಿಗೆ ಆರ್ಬಿಟ್ರೇಷನ್ ಅರ್ಜಿ ಹಾಕಿರೋದು ಎಲ್ಲರಲ್ಲೂ ಆಶ್ಚರ್ಯಗೊಳಿಸಿದೆ ಎಂದರು.
ಜಿಲ್ಲಾಧಿಕಾರಿಯವರು ಪದವು ಗ್ರಾಮದ ಅವಾರ್ಡ್ ಬಗ್ಗೆ ಹೆದ್ದಾರಿ ಇಲಾಖೆಯು ಎತ್ತಿರುವ ಅಪಸ್ವರದ ಬಗ್ಗೆ ಮತ್ತು ಅರ್ಬಿಟೇಶನ್ ಅರ್ಜಿ ಸಲ್ಲಿಸಲು ಪ್ರಯತ್ನಿಸಿದಾಗ ಅದನ್ನು ಅಲ್ಲಿಯೇ ತಿರಸ್ಕರಿಸಿ ಪದವು ಗ್ರಾಮಸ್ಥರಿಗೆ ನ್ಯಾಯ ಒದಗಿಸಿರುತ್ತಾರೆ.ಪದವು ಗ್ರಾಮದ ಅವಾರ್ಡ್ ಪ್ರಶ್ನಿಸಿ ಹೆದ್ದಾರಿ ಇಲಾಖೆಯು ಮತ್ತೆ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನೆ ಸಲ್ಲಿಸಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.ನಮ್ಮ ಹೋರಾಟಕ್ಕೆ ನ್ಯಾಯ ಈಗಾಗಲೇ ದೊರಕಿದೆ ಮತ್ತೆ ಕೆಲವೇ ದಿನಗಳಲ್ಲಿ ಆರ್ಬಿಟ್ರೇಷನ್ ನಲ್ಲಿ ಜಿಲ್ಲಾಧಿಕಾರಿಯವರು ನಮ್ಮ ಪರವಾಗಿ ತೀರ್ಪು ನೀಡುವ ಭರವಸೆ ನಮಗೆ ಇದೆ ಎಂದಿದ್ದಾರೆ.ಸಂತ್ರಸ್ತರ ಪರವಾಗಿ ತೀರ್ಪು ಬಂದರೆ ಪ್ರತಿಯೊಂದು ಗ್ರಾಮದಲ್ಲಿ ಪರಿಹಾರದ ಹಣ ಪ್ರತಿ ಸೆನ್ಸ್ ಜಾಗಕ್ಕೆ ಹೆಚ್ಚುವರಿಯಾಗಿ ದೊರೆಯಲಿದೆ ಈಗಾಗಲೇ ಹೈಕೋರ್ಟಿನಿಂದ ತೀರ್ಪು ಬಂದಿರುವ ಪುತ್ತಿಗೆ ಗ್ರಾಮದಲ್ಲಿ ಒಂದು ಸೆನ್ಸ್ ಜಾಗಕ್ಕೆ ರೂ.30,000 ಇದ್ದದ್ದು ಈಗ ರೂ.1,40,000 ಕ್ಕೆ ಏರಿಕೆ ಆಗಿದೆ ಎಂಬ ಮಾಹಿತಿಯನ್ನು ಕೂಡ ನೀಡಿದರು.
ಹೆದ್ದಾರಿ ಇಲಾಖೆಯ ವತಿಯಿಂದ ಈಗ ಮತ್ತೊಮ್ಮೆ ಬಡಗ ಉಳಿಪಾಡಿ ಗ್ರಾಮದಲ್ಲಿ ಟ್ರಕ್ ಬೇ ಮಾಡಲು ಸರ್ವೇ ನಡೆಸುತ್ತಿರುವ ಬಗ್ಗೆ ಅಲ್ಲಿಯ ಭೂ ಸಂತ್ರಸ್ತರು ಸಭೆಗೆ ಮಾಹಿತಿ ನೀಡಿದರು. ಇದನ್ನು ಈ ಹಂತದಲ್ಲೇ ಪ್ರತಿಭಟಿಸಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಎಂದು ಆ ಗ್ರಾಮಸ್ಥರಿಗೆ ಸಲಹೆ ನೀಡಲಾಯಿತು.ಹೆದ್ದಾರಿಯ ಟೋಲ್ ಗೇಟ್ ನಿರ್ಮಾಣ ಆಗುತ್ತಿರುವ ಸೂರಲ್ಪಾಡಿಯಲ್ಲಿ ಈ ಮೊದಲು ನೀಡಿದ್ದ ತ್ರೀಡಿ ನೋಟಿಫಿಕೇಶನ್ ಬದಲಾಯಿಸಿ ಹೆದ್ದಾರಿಯ ಮಧ್ಯದಿಂದ ಒಂದು ಬದಿಯಲ್ಲಿ 75 ಮೀಟರ್ ಮತ್ತು ಇನ್ನೊಂದು ಬದಿಯಲ್ಲಿ 25 ಮೀಟರ್ ಭೂಸ್ವಾಧೀನ ಮಾಡಿ ಹಿಂದಿನ ತ್ರೀಡಿ ನೋಟಿಸ್ ಅನ್ನು ಕಸದ ಬುಟ್ಟಿಗೆ ಎಸೆದು ತಮ್ಮ ಎಡವಟ್ಟು ಕೆಲಸವನ್ನು ಹೆದ್ದಾರಿ ಇಲಾಖೆಯು ಮತ್ತೊಮ್ಮೆ ಮಾಡಿ ಭೂಸಂತ್ರಸ್ತರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನವನ್ನು ಮಾಡುತ್ತಿದೆ.ಮೂರು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಮಂತ್ರಿಯವರಲ್ಲಿ ಸಾಣೂರು ಗ್ರಾಮದ ಭೂ ಸಂತ್ರಸ್ತರು ತಮ್ಮ ಅವಹಾಲುಗಳನ್ನು ಹೇಳಿಕೊಂಡಾಗ ಕೆಲವೇ ದಿನಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ಕಂದಾಯ ಅದಾಲತ್ ನಡೆಸುತ್ತೇನೆ ಎನ್ನುವ ಭರವಸೆ ನೀಡಿದ್ದರು ಆದರೆ ಮೂರು ತಿಂಗಳು ಕಳೆದರೂ ಜಿಲ್ಲಾಧಿಕಾರಿಯವರು ಕಂದಾಯ ಅದಾಲತ್ ನಡೆಸದೆ ಹಾಗೂ ಹೆದ್ದಾರಿ ಇಲಾಖೆಯವರು ಹೈಕೋರ್ಟ್ ಸೂಚನೆಯಂತೆ ಪರಿಹಾರವನ್ನು ಕೂಡ ನೀಡದೆ ಬಡ ರೈತರನ್ನು ಸತಾಯಿಸುತ್ತಿರುವುದು ತುಂಬಾ ಬೇಸರದ ವಿಷಯ ಎಂದು ಸಾಣೂರು ನರಸಿಂಹ ಕಾಮತ್ ರವರು ಹೇಳಿದರು.
ಹೆದ್ದಾರಿ ಇಲಾಖೆಯು ತೋರುತ್ತಿರುವ ವಿಳಂಬ ನೀತಿ, ಭೂ ಸ್ವಾಧೀನ ಕಚೇರಿಯಿಂದ ಪರಿಹಾರ ನೀಡುವಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ,ಜನ ಪ್ರತಿನಿಧಿಗಳು ಭೂ ಸಂತ್ರಸ್ತರ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸದಿರುವ ಬಗ್ಗೆ ಹಾಗೆಯೇ ಕಾಂಟ್ರಾಕ್ಟ್ ದಾರಾ ಕಂಪನಿಯವರು ರಸ್ತೆ ನಿರ್ಮಾಣದ ಸಂದರ್ಭದಲ್ಲಿ ತೋರುತ್ತಿರುವ ಅಸಡ್ಡೆಯ ಬಗ್ಗೆ ಪ್ರತಿಭಟಿಸಲು ತಾರೀಕು 07-03-2023ನೇ ಮಂಗಳವಾರದಂದು ಮಂಗಳೂರಿನ ಜಿಲ್ಲಾಧಿಕಾರಿಯವರ ಕಚೇರಿಯ ಮುಂದೆ,ಮತ್ತೆ ಭೂ ಸ್ವಾಧೀನ ಅಧಿಕಾರಿಯವರ ಕಚೇರಿ ಮುಂದೆ ಬೃಹತ್ ಪ್ರತಿಭಟನೆಯನ್ನು ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಭೂಮಿ ಕಳೆದುಕೊಳ್ಳುತ್ತಿರುವ ಎಲ್ಲಾ ಭೂಸಂತ್ರಸ್ಥರು ಭಾಗವಹಿಸುವುದಾಗಿ ಸಭೆಯಲ್ಲಿ ಒಕ್ಕೊರಳಿನಿಂದ ನಿರ್ಧರಿಸಲಾಯಿತು.ಬ್ರಜೇಶ್ ಶೆಟ್ಟಿ ಮಿಜಾರು ಇವರು ಸ್ವಾಗತಿಸಿದರು. ಶ್ರೀ ಜಯರಾಮ ಪೂಜಾರಿ ಬೆಳುವಾಯಿ ಇವರು ವಂದನಾರ್ಪಣೆಗೈದರು.