ದೈವಗಳಿಗೆ ಅಪಮಾನ ಮಾಡಿದವರು ರಾಜಿನಾಮೆ ನೀಡಬೇಕು.ಇಲ್ಲವಾದರೆ ಮುಖ್ಯಮಂತ್ರಿಗಳೇ ವಜಾ ಮಾಡಬೇಕು.

ಕರಾವಳಿ

ಬಿಜೆಪಿ ಪಕ್ಷ ಹಿಂದೂಗಳ ಧಾರ್ಮಿಕ ನಂಬಿಕೆಯಾದ ದೈವಗಳನ್ನು ಓಟು ಬ್ಯಾಂಕಾಗಿ ಪರಿವರ್ತಿಸಿದೆ.

ತುಳುನಾಡಿನಲ್ಲಿ ದೈವದ ಬಗ್ಗೆ ಅಪಾರ ಗೌರವ, ನಂಬಿಕೆಯುಳ್ಳ ಜನರಿದ್ದಾರೆ. ಬಹುತೇಕ ಹಿಂದೂಗಳು ತುಳುನಾಡಿನಲ್ಲಿ ದೈವಗಳನ್ನು ಆರಾಧಿಸುತ್ತಾರೆ, ಗೌರವಿಸುತ್ತಾರೆ. ಇದು ತಲೆತಲಾಂತರಗಳಿಂದ ಬಂದ ನಂಬಿಕೆ.

ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಹಿಂದೂ ರಕ್ಷಕರು ಎಂದು ಪೋಸು ಕೊಡುವ ಸಂಘಟನೆಗಳು, ಬಿಜೆಪಿ ಪಕ್ಷ ಹಿಂದೂಗಳ ಧಾರ್ಮಿಕ ನಂಬಿಕೆಯಾದ ದೈವಗಳನ್ನು ಓಟು ಬ್ಯಾಂಕಾಗಿ ಪರಿವರ್ತಿಸಿದೆ. ದೈವದ ಬಗ್ಗೆ ಅನ್ಯಧರ್ಮೀಯ ಕೆಲ ಕಿಡಿಗೇಡಿಗಳು ಅಗೌರವ ತೋರಿಸಿದಾಗ ಅದನ್ನೆ ದೊಡ್ಡ ಇಶ್ಯೂ ಮಾಡಿ ಚುನಾವಣಾ ರಾಜಕೀಯ ಮಾಡುತ್ತದೆ. ಆದರೆ ಇದೆಲ್ಲ ತೋರಿಕೆಗಾಗಿ ಮಾತ್ರ ಕಾಣುತ್ತಿದೆ. ಯಾಕೆಂದರೆ ಸದನದಲ್ಲಿ ಅವಳಿ ಜಿಲ್ಲೆಯ ಡಜನ್ ಗಟ್ಟಲೆ ಬಿಜೆಪಿ ಶಾಸಕರಿದ್ದರೂ, ಬಿಜೆಪಿಯ ಕೆಲವು ಶಾಸಕರು ಕರಾವಳಿ ಹಿಂದೂಗಳ ಧಾರ್ಮಿಕ ನಂಬಿಕೆಯಾಗಿರುವ ದೈವಗಳನ್ನು ಹಾಸ್ಯದ ರೂಪದಲ್ಲಿ ಚಿತ್ರಿಸುತ್ತಿದ್ದರೂ ಆ ಬಗ್ಗೆ ಇಲ್ಲಿನ ಬಿಜೆಪಿ ಶಾಸಕರು ತುಟಿಬಿಚ್ಚುತ್ತಿಲ್ಲ. ಯು.ಟಿ. ಖಾದರ್ ಹಿಂದೂಗಳ ಧಾರ್ಮಿಕ ನಂಬಿಕೆಯ ಅವಹೇಳನದ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಲು ಸಾಧ್ಯವಾದರೆ, ದೈವದ ಹೆಸರಿನಲ್ಲಿ ಓಟು ಪಡೆದು ಗೆದ್ದ ಬಿಜೆಪಿ ಶಾಸಕರು ತುಟಿಬಿಚ್ಚುತ್ತಿಲ್ಲ. ‘ಹಿಂದೂ ನಾವೆಲ್ಲ ಒಂದು’ ಅನ್ನುವ ಬಿಜೆಪಿ, ಪರಿವಾರದ ಸಂಘಟನೆಗಳು ಬಿಜೆಪಿ ಶಾಸಕರೇ ದೈವವನ್ನು ಅವಹೇಳನಗೊಳಿಸುತ್ತಿದ್ದರೂ ಕನಿಷ್ಠ ಪಕ್ಷ ಧ್ವನಿ ಎತ್ತಲು ಕರಾವಳಿಯ ಬಿಜೆಪಿ ಶಾಸಕರಿಂದ ಸಾಧ್ಯವಾಗುತ್ತಿಲ್ಲ ಅಂದಾದರೆ ಇವರದ್ದು ದೈವದ ಮೇಲೆ ಬೂಟಾಟಿಕೆಯ ಪ್ರೇಮವಲ್ಲವೇ..? ಜಾತ್ರೆಗಳಲ್ಲಿ ಅನ್ಯಧರ್ಮೀಯರು ಹೊಟ್ಟೆ ಪಾಡಿಗಾಗಿ ಸ್ಟಾಲ್ ಇಟ್ಟರೆ ಮುಗಿದುಬೀಳುವ ಮತೀಯವಾದಿಗಳು ತಮ್ಮವರೇ ದೈವದ ಬಗ್ಗೆ ಹಾಸ್ಯದ ವಸ್ತುವನ್ನಾಗಿಸಿದಾಗ ಇವರ ಧರ್ಮ ಏಕೆ ಜಾಗೃತಗೊಳ್ಳುತ್ತಿಲ್ಲ.. ಖಂಡಿತ ಕರಾವಳಿಯ ತುಳುವರು ಇಂತಹ ಇಬ್ಬಂದಿತನಕ್ಕೆ ಸೂಕ್ತ ಉತ್ತರ ಕೊಡುವ ಕಾಲ ಕೂಡಿಬಂದಿದೆ.

ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಮುರುಗೇಶ್ ನಿರಾಣಿಯವರು ಇದೀಗ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ, ತಾವು ಪ್ರತಿನಿಧಿಸುತ್ತಿರುವ ಬೀಳಗಿ ಕ್ಷೇತ್ರದ ಜನರ ಮನೋರಂಜನೆಗಾಗಿ ಕರಾವಳಿಯ ಭೂತಾರಾದನೆಯನ್ನು ಅಪಹಾಸ್ಯ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಕೆಲವು ವರ್ಷಗಳ ಹಿಂದೆ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ವಾಟ್ಸಪ್ ಸಂದೇಶ ಕಳುಹಿಸಿದ್ದ ಮುರುಗೇಶ್ ನಿರಾಣಿಯವರ ವಿರುದ್ದ ಎಫ್‌ಐಆರ್ ದಾಖಲಾಗಿತ್ತು. ಇದೀಗ ಅದೇ ರೀತಿಯಲ್ಲಿ ತಮ್ಮ ಕ್ಷೇತ್ರದ ಜನರ ಮನೋರಂಜನೆಗಾಗಿ ಭೂತ ಕೋಲ, ದೈವ ನರ್ತನದ ಹಾಸ್ಯ ಕಾರ್ಯಕ್ರಮ ಕೈಗೊಂಡಿರುವುದು ಖಂಡನಾರ್ಹ ಎಂದು ಹಿಂದೂ ಕಾರ್ಯಕರ್ತರು ಅಕ್ರೋಶ ಹೊರಹಾಕುತ್ತಿದ್ದಾರೆ.

ಕೆಲ ಸಮಯದ ಹಿಂದೆ ಮೈಸೂರು ಮತ್ತಿತರ ಕಡೆ ಕೆಲವರು ತುಳುವರ ಆರಾಧ್ಯ ದೈವ ‘ಕೊರಗಜ್ಜ’ ಹಾಗೂ ಇತರ ದೈವಗಳ ಕೋಲ ಆಯೋಜಿಸಲು ಮುಂದಾದ ಅಧಿಕೃತ ಆಚರಣೆಯನ್ನೇ ದೈವಾರಾಧಕರು ವಿರೋಧಿಸಿದ್ದರು. ದೈವಗಳ ಹೆಸರನ್ನು ವಾಣಿಜ್ಯ ವಿಚಾರಕ್ಕೆ ಬಳಸುವುದನ್ನು ಅಥವಾ ನಾಟಕೀಯ ಸನ್ನಿವೇಶಕ್ಕೆ ಬಳಸುವುದನ್ನು ತಡೆಯುವ ಉದ್ದೇಶ ಎಲ್ಲರದ್ದಾಗಿದೆ. ಹೀಗಿರುವಾಗ ಬೀಳಗಿಯ ರಾಜಕೀಯ ಕಾರ್ಯಕ್ರಮದಲ್ಲಿ ಭೂತಾರಾಧನೆ ವೇಷ ಆಯೋಜಿಸಿ ಆ ಸನ್ನಿವೇಶವನ್ನು ಹಾಸ್ಯಕ್ಕಾಗಿ ಬಳಕೆ ಮಾಡಿರುವುದು ಖಂಡನಾರ್ಹ.

ನಿರಾಣಿಯವರ ಬೆಂಬಲಿಗರನ್ನು ರಂಜಿಸುವ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಂದಾಯ ಸಚಿವ ಆರ್.ಅಶೋಕ್ ಕೂಡಾ ನಿರಾಣಿಯವರಿಗೆ ಸಾಥ್ ನೀಡಿರುವುದು ಕೋಟ್ಯಾಂತರ ಹಿಂದೂಗಳ ಪಾಲಿಗೆ ನೋವುಂಟು ಮಾಡಿದೆ.

‘ನೀವು ನಿಜವಾಗಿಯೂ ಆರೆಸ್ಸೆಸ್ ಸಿದ್ದಾಂತ ಒಪ್ಪುವುದೇ ಆದರೆ, ಹಿಂದೂ ಸಂಘಟನೆಗಳ ನಿಲುವುಗಳನ್ನು ಒಪ್ಪಿಕೊಳ್ಳುವುದೇ ಆದರೆ, ಬೀಳಗಿಯ ಈ ತಪ್ಪನ್ನು ಒಪ್ಪಿಕೊಂಡು, ನೈತಿಕ ಹೊಣೆ ಹೊತ್ತು ಈ ಇಬ್ಬರೂ ಸಚಿವರೂ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು* ಎಂದು ಒತ್ತಾಯಿಸುತ್ತಿದ್ದೇವೆ. ಇಲ್ಲವಾದರೆ, ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಸಚಿವರನ್ನು ಮುಖ್ಯಮಂತ್ರಿಗಳೇ ವಜಾ ಮಾಡಲಿ. ಬಿಜೆಪಿಯು ನಿಜವಾಗಿಯೂ ಹಿಂದೂಗಳ ಹಿತ ಕಾಯುವ ಪಕ್ಷವೇ ಆಗಿದ್ದಲ್ಲಿ, ಹಿಂದೂ ದೇವರ ಬಗ್ಗೆ ಪದೇ ಪದೇ ಅವಹೇಳನ ಮಾಡುತ್ತಿರುವ ನಾಯಕರನ್ನು ಪಕ್ಷದಿಂದಲೇ ವಜಾ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರನ್ನೂ ಕಾರ್ಯಕರ್ತರೇ ಒತ್ತಾಯಿಸುತ್ತಿದ್ದಾರೆ‌.