ಮಂಗಳೂರಿನಲ್ಲಿ ಮಟ್ಕಾ ದಂಧೆ ಜೋರು: ನಾಗರಿಕರ ದೂರು

ಕರಾವಳಿ

ಮಂಗಳೂರು ನಗರ ಪರಿಸರದಲ್ಲಿ ಇಸ್ಪೀಟ್ ಕ್ಲಬ್, ಸ್ಕಿಲ್ ಗೇಮ್ ನಂತಹ ಅಕ್ರಮ ಚಟುವಟಿಕೆಗಳು ಬಾಗಿಲು ಮುಚ್ಚಿಕೊಂಡ ಬೆನ್ನಲ್ಲೇ ನಗರದಾದ್ಯಂತ ಮಟ್ಕಾ ದಂಧೆ ಜೋರಾಗಿ ನಡೆಯುತ್ತಿದೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

ಹಂಪನಕಟ್ಟೆ ಹಳೆ ಬಸ್ ಸ್ಟ್ಯಾಂಡ್, ಸ್ಟೇಟ್ ಬ್ಯಾಂಕ್ ಬಳಿಯ ಸಿಟಿ ಬಸ್ ಸ್ಟ್ಯಾಂಡ್, ಲಿಂಕಿಂಗ್ ಟವರ್, ಕಂಕನಾಡಿ ಮಾರ್ಕೆಟ್, ಉರ್ವ ಮಾರ್ಕೆಟ್, ಕಾವೂರು, ಕೊಟ್ಟಾರ ಚೌಕಿ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಗೂಡು ಶೆಡ್ಡೆ, ಸುರತ್ಕಲ್, ಕಾನ, ಮೂಲ್ಕಿ, ಕಿನ್ನಿಗೋಳಿ ಪರಿಸರದಲ್ಲಿ ಈ ದಂಧೆ ಜೋರಾಗಿಯೇ ನಡೆಯುತ್ತಿದೆ.

ಬಡ ಮತ್ತು ಮಧ್ಯಮ ವರ್ಗದವರ ಬದುಕು ಬರ್ಬಾದ್ ಮಾಡುತ್ತಿರುವ ಮಟ್ಕಾ ದಂಧೆ ರೂವಾರಿ ಉಡುಪಿಯಲ್ಲಿದ್ದು ತನ್ನ ಏಜೆಂಟ್ ಗಳ ಮೂಲಕ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಈ ದಂಧೆಯನ್ನು ಅವ್ಯಾಹತವಾಗಿ ನಡೆಸುತ್ತಿದ್ದಾನೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಅಕ್ರಮ ಚಟುವಟಿಕೆಗಳ ವಿರುದ್ಧ ಸಮರ ಸಾರಿರುವ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಮಟ್ಕಾ ನಿಯಂತ್ರಣಕ್ಕೆ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ವಿನಂತಿಸಿದ್ದಾರೆ.