ಖರ್ಗೆ ರಣರಂಗಕ್ಕೆ.. ಡಿಕೆಶಿ ಕೂಲ್ ಆದರೆ.?
ಮಂಗಳೂರು ಉತ್ತರದಲ್ಲಿ ಇಬ್ಬರನ್ನು ಹೊರತುಪಡಿಸಿ ಮೂರನೇ ವ್ಯಕ್ತಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಬಹುದು ಅನ್ನುವ ಊಹಾಪೋಹಗಳಿಗೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆದಿದೆ. ಈ ಬಾರಿ ಮಂಗಳೂರು ಉತ್ತರದಲ್ಲಿ ಅಲ್ಫಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಲು ನಿರ್ಧರಿಸಿದೆ. ಜೊತೆಗೆ ಕೆಲವೊಂದು ಷರತ್ತುಗಳನ್ನು ಕೂಡ ನೀಡಿದೆ ಅನ್ನುವ ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದೆ.
ಮಂಗಳೂರು ಉತ್ತರದಲ್ಲಿ ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ, ಯುವ ನಾಯಕ ಇನಾಯತ್ ಅಲಿ ಇವರಿಬ್ಬರ ಮಧ್ಯೆ ಟಿಕೆಟ್ ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದ್ದು, ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಖಚಿತ ಎಂದು ಹೇಳಲಾಗಿದೆ. ಇವರಿಬ್ಬರನ್ನು ಬಿಟ್ಟು ಬಿಲ್ಲವ ಸಮುದಾಯಕ್ಕೆ ಟಿಕೆಟ್ ನೀಡಲಾಗುತ್ತದೆ ಅನ್ನುವ ಸುದ್ದಿಗಳಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ.
ಬಲ್ಲ ಮೂಲಗಳ ಪ್ರಕಾರ ಈ ಬಾರಿ ಮಂಗಳೂರು ಉತ್ತರದಲ್ಲಿ ಮಗದೊಮ್ಮೆ ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾರನ್ನು ಕಣಕ್ಕಿಳಿಸುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಬಾವಾರಿಗೆ ಇದು ಕೊನೆಯ ಒಂದು ಅವಕಾಶಗಳನ್ನು ನೀಡುವ ಬಗ್ಗೆ ಬಹುತೇಕ ಕಾಂಗ್ರೆಸ್ ರಾಜ್ಯ, ರಾಷ್ಟ್ರಮಟ್ಟದ ನಾಯಕರು ಒಲವು ವ್ಯಕ್ತಪಡಿಸಿದ್ದು,ಉತ್ತರದಲ್ಲಿ ಮೊಹಿದ್ದೀನ್ ಬಾವಾ ಹೆಸರು ಅಂತಿಮಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ ಜನಪರ ಕೆಲಸಗಳು, ಕೋಮು ರಾಜಕಾರಣದಿಂದ ಸೋಲು ಅನುಭವಿಸಬೇಕಾದ ಎಲ್ಲಾ ಮಾನದಂಡಗಳ ಬಗ್ಗೆ ಚರ್ಚಿಸಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಬ್ಲಾಕ್ ಪದಾಧಿಕಾರಿಗಳು, ಕಾರ್ಯಕರ್ತರ ಗುಪ್ತ ಸರ್ವೇಗಳನ್ನು ಆಧಾರವಾಗಿಟ್ಟುಕೊಂಡು ಮಗದೊಮ್ಮೆ ಮೊಹಿದ್ದೀನ್ ಬಾವಾರಿಗೆ ಅವಕಾಶ ನೀಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಇತ್ತ ಮೊಹಿದ್ದೀನ್ ಬಾವಾ ಟಿಕೆಟ್ ಪಡೆಯಲು ಕಳೆದ ಐದಾರು ತಿಂಗಳಿನಿಂದ ತ್ರಿವಿಕ್ರಮನಂತೆ ರಾಜ್ಯ-ರಾಷ್ಟ್ರ ನಾಯಕರ ಒಲವು ಪಡೆಯಲು ಅನೇಕ ಕಸರತ್ತುಗಳನ್ನು ಮಾಡಬೇಕಾಗಿ ಬಂದಿರುವುದು ಸುಳ್ಳಲ್ಲ. ಒಂದು ಹಂತದಲ್ಲಿ ಇನಾಯತ್ ಆಲಿಯವರಿಗೆ ಟಿಕೆಟ್ ಫೈನಲ್ ಹಂತಕ್ಕೆ ಬಂದಿದ್ದರೂ, ಹಠವಾದಿ, ಛಲವಾದಿ ಬಾವಾ ತನ್ನೆಲ್ಲ ತಂತ್ರ,ಪ್ರತಿತಂತ್ರಗಳ ಪ್ರಭಾವ ಬಳಸಿ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು. ಇತ್ತ ಪ್ರಿಯಾಂಕಾ ಖರ್ಗೆ ಆದಿಯಾಗಿ ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕರು ಬಾವಾ ಬೆನ್ನಿಗೆ ನಿಂತಿದ್ದು ಬಾವಾರಿಗೆ ಟಾನಿಕ್ ಲಭಿಸಿದಂತಾಗಿದೆ. ಇತ್ತೀಚೆಗೆ ನಡೆದ ಮುಸ್ಲಿಂ ನಾಯಕರ ಸಂಧಾನ ಸಭೆ ಕೂಡ ಬಾವಾರಿಗೆ ದೊಡ್ಡ ಮಟ್ಟದ ಯಶಸ್ಸು ಲಭಿಸಲು ಕಾರಣವಾಗಿದ್ದು,ಬಹುತೇಕ ಮುಸ್ಲಿಂ ನಾಯಕರು ಮೊಹಿದ್ದೀನ್ ಬಾವಾರ ಪರ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ ಅನ್ನುವ ಸ್ಪೋಟಕ ಮಾಹಿತಿ ಇದೀಗ ಲಭ್ಯವಾಗಿದೆ.
ಇನಾಯತ್ ಆಲಿಯವರ ಗಾಡ್ ಫಾದರ್ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಯವರ ಮನ ಒಲಿಸಲು ಪ್ರಿಯಾಂಕಾ ಖರ್ಗೆ ಆದಿಯಾಗಿ ರಾಷ್ಟ್ರ ನಾಯಕರು ಮುಂದಾಗಿದ್ದು, ನೇರವಾಗಿ ಡಿಕೆಶಿ ಬಳಿ ಬಾವಾರನ್ನು ಕಳುಹಿಸಿ ಮಾತನಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ. ಖರ್ಗೆ ಪುತ್ರ ನೇರವಾಗಿ ಬಾವಾ ಪರ ಫೀಲ್ಡಿಗೆ ಇಳಿದಿರುವುದರಿಂದ, ಅತ್ತ ಕ್ಷೇತ್ರದಲ್ಲಿ ಬ್ಲಾಕ್ ಮಟ್ಟದ ನಾಯಕರು ಬಾವಾ ಬೆನ್ನಿಗೆ ಇರುವುದರಿಂದ ಡಿಕೆಶಿ ಇದೀಗ ಸೈಲೆಂಟ್ ಆಗಿದ್ದಾರೆ ಅನ್ನುವ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಮೊಹಿದ್ದೀನ್ ಬಾವಾ, ಇನಾಯತ್ ಆಲಿ ಇವರಿಬ್ಬರಲ್ಲಿ ಯಾರಿಗಾದರೂ ಕೊನೆ ಕ್ಷಣದಲ್ಲಿ ಟಿಕೆಟ್ ಒಲಿದು ಬರಬಹುದು.’ಬಿ ಫಾರಂ’ ಕೊನೆ ಘಳಿಗೆಯಲ್ಲಿ ಯಾರಿಗೆ ದಕ್ಕಿ ಯಾರ ಅದೃಷ್ಟ ಖುಲಾಯಿಸುತ್ತದೆ ಎಂಬುದು ಯಕ್ಷ ಪ್ರಶ್ನೆ.? ಈ ಭಾರಿ ಮಂಗಳೂರು ಉತ್ತರದಲ್ಲಿ ಗೆದ್ದರೆ ಮಾತ್ರ ಮುಂದಿನ ಬಾರಿ ಸಮುದಾಯಕ್ಕೆ ಟಿಕೆಟ್ ಫಿಕ್ಸ್..!ಇಲ್ಲವಾದರೆ ಅಲ್ಫಸಂಖ್ಯಾತ ಸಮುದಾಯಕ್ಕೆ ಇದು ಕಾಂಗ್ರೆಸ್ ನಿಂದ ನೀಡುವ ಕೊನೆಯ ಅವಕಾಶ. ಎರಡು-ಮೂರು ಷರತ್ತುಗಳನ್ನು ಕೂಡ ಕಾಂಗ್ರೆಸ್ ಹೈಕಮಾಂಡ್ ವಿಧಿಸಿ ಉತ್ತರಕ್ಕೆ ಅಲ್ಪ ಸಂಖ್ಯಾತ ಸಮುದಾಯಕ್ಕೆ ಟಿಕೇಟ್ ಪಕ್ಕಾ ಮಾಡಿದೆ.
ಮಂಗಳೂರು ಉತ್ತರದಲ್ಲಿ ಈ ಬಾರಿ ಅಲ್ಪಸಂಖ್ಯಾತರು ತಮ್ಮ ಶಕ್ತಿಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಇದೆ. ಮುಸ್ಲಿಂ ಸಮುದಾಯ ಇಬ್ಭಾಗವಾಗಿ ಮತ ಚಲಾಯಿಸಿದರೆ ಮುಂದಿನ ಬಾರಿ ಈ ಕ್ಷೇತ್ರದಲ್ಲಿ ತಮ್ಮ ಸಮುದಾಯಕ್ಕೆ ಸಿಗುವ ಪ್ರಾತಿನಿಧ್ಯವನ್ನು ಮರೆಯಬೇಕು. ಒಟ್ಟಾರೆ ಚೆಂಡು ಇದೀಗ ಮುಸ್ಲಿಂ ಮತದಾರರ ಮುಂದಿದೆ. ಒಗ್ಗಟ್ಟಾಗಿ ಮತ ಚಲಾಯಿಸಿ ಗೆಲ್ಲಿಸುವ ಅನಿವಾರ್ಯತೆ ಕೂಡ ಇದೆ.ಭಗೀರಥ ಪ್ರಯತ್ನ ಮಾಡಿ ಗಂಗೆಯನ್ನು ಪಡೆದ ಹಾಗೇ ಬಾವಾ ಅಥವಾ ಇನಾಯತ್ ಅಲಿ ‘ಬಿ ಫಾರಂ’ತಂದು ಗದ್ದುಗೆ ಯಾರು ಏರುತ್ತಾರೆ ಎಂಬುದನ್ನು ಉತ್ತರದ ಮತದಾರ ಕಾದು ನೋಡಬೇಕಾಗಿದೆ.?