ಉಳ್ಳಾಲ ಯುವಕನಿಗೆ ಚೂರಿ ಇರಿದು ಕೊಲೆಗೆ ಯತ್ನ, ಆರೋಪಿಗಳು ಪರಾರಿ

ಕರಾವಳಿ

ಉಳ್ಳಾಲದ ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಪುರ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ನಡೆದಿದೆ.

ಕೋಟೆಪುರ ನಿವಾಸಿ ಸದಕತ್ತುಲ್ಲಾ ಕೊಲೆಯತ್ನಕ್ಕೆ ಒಳಗಾದ ಯುವಕ. ಗಾಯಾಳುವನ್ನು ಗಂಭೀರ ಸ್ಥಿತಿಯಲ್ಲಿ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿದೆ. ಛಬ್ಬಿ ಅಲಿಯಾಸ್ ಕಬೀರ್ ಮತ್ತು ರಾಝಿಕ್ ಎಂಬವರು ಇನ್ನಿಬ್ಬರನ್ನು ಸೇರಿಸಿಕೊಂಡು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.

ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.ಸದಕತ್ತುಲ್ಲಾ ಮನೆಯಲ್ಲಿದ್ದ ಸಂದರ್ಭ ಎದುರುಗಡೆ ಕರೆಸಿ ಚೂರಿಯಿಂದ ಹೊಟ್ಟೆ ಭಾಗಕ್ಕೆ ಇರಿಯಲಾಗಿದೆ. ತಕ್ಷಣ ಮನೆ ಮಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಫಿಶ್ ಆಯಿಲ್ ಮಿಲ್ ಮಾಲೀಕರಿಂದ ಬೆದರಿಸಿ ಹಣ ಪಡೆದಿರುವ ವಿಚಾರದಲ್ಲಿ ಇಬ್ಬರ ನಡುವೆ ವೈಷಮ್ಯವಿತ್ತು. ಕೆಲ ತಿಂಗಳುಗಳ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿ ಆರೋಪಿಗಳ ಪೈಕಿ ಓರ್ವನಿಗೆ ಸದಕತ್ತುಲ್ಲಾ ತಂಡ ಹಲ್ಲೆ ನಡೆಸಿತ್ತು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ದಾಳಿ ನಡೆದಿರುವ ಸಾಧ್ಯತೆಯನ್ನು ಉಳ್ಳಾಲ ಪೊಲೀಸರು ವ್ಯಕ್ತಪಡಿಸಿದ್ದಾರೆ.