ಹಿಜಾಬ್​ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ,ಕಟ್ಟು ನಿಟ್ಟಾಗಿ ವಸ್ತ್ರ ಸಂಹಿತೆ ಪಾಲನೆ: ಶಿಕ್ಷಣ ಸಚಿವರು

ರಾಜ್ಯ

ಹೈಕೋರ್ಟ್ ಆದೇಶ ಪಾಲನೆ ಹಾಗೂ ಕಳೆದ ವರ್ಷ ಕೈಗೊಂಡಿರುವ ನಿರ್ಧಾರಕ್ಕೆ ಬದ್ಧವಾಗಿರಲು ತೀರ್ಮಾನಿಸಿರುವ ರಾಜ್ಯ ಸರ್ಕಾರ ಈ ಸಾರಿ ಎಸ್ಎಸ್ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆ ಸೇರಿದಂತೆ ಯಾವುದೇ ಪರೀಕ್ಷೆಗೆ ಬರುವವರಿಗೆ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ತೀರ್ಮಾನಿಸಿದೆ. ತನ್ಮೂಲಕ ಈ ಸಾರಿ ಪರೀಕ್ಷೆಗೆ ಆಗಮಿಸುವ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಕೊಠಡಿಯೊಳಗೆ ಬರುವಂತಿಲ್ಲ ಎನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಧ್ಯಮಗಳ ಮೂಲಕ ಸ್ಪಷ್ಟೀಕರಣ ನೀಡಿದ್ದು, ಕಳೆದ ವರ್ಷ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಈ ವರ್ಷವೂ ಬದ್ಧವಾಗಿದೆ. ಅಲ್ಲದೇ ವಸ್ತ್ರ ಸಂಹಿತೆ ವಿಚಾರದಲ್ಲಿ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದ್ದು ಅದರ ಪಾಲನೆ ಮಾಡಲಿದ್ದೇವೆ ಎಂದಿದ್ದಾರೆ.ಇಂದು ಶಾಲೆಗಳ ಆರಂಭಕ್ಕೆ ಅರ್ಜಿ ಸಲ್ಲಿಕೆ, ಮಾನ್ಯತೆ ನವೀಕರಣ, ನಿರಾಕ್ಷೇಪಣಾ ಪತ್ರ ನೀಡಿಕೆ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸೇವೆಗಳಲ್ಲಿ ಸುಧಾರಣೆ, ಸರಳೀಕರಣಕ್ಕಾಗಿ ನೂತನವಾಗಿ ಅಭಿವೃದ್ಧಿಪಡಿಸಲಾಗಿರುವ ಸಾಫ್ಟ್‌ವೇರ್‌ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿಸಿ ನಾಗೇಶ್, ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಎಸ್​ಎಸ್​ಎಲ್​​ಸಿ ಮತ್ತು ಪಿಯುಸಿ ಪರೀಕ್ಷೆ ಸಮಯದಲ್ಲಿ​ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ. ಈ ಬಾರಿ ಕೂಡ ಹಿಜಾಬ್​ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮಾ.9ರಿಂದ ದ್ವಿತೀಯ ಪಿಯು ಪರೀಕ್ಷೆ ರಾಜ್ಯದಲ್ಲಿ ಆರಂಭವಾಗಲಿದೆ. ರಾಜ್ಯದ ವಿವಿಧ ಜಿಲ್ಲೆಯ ಮುಸಲ್ಮಾನ್ ಸಮುದಾಯದ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಅನುಮತಿ ಕೋರಿದ್ದಾರೆ. ಈ ವಿದ್ಯಾರ್ಥಿನಿಯರ ಮನವಿಯನ್ನು ಪರಿಗಣಿಸದಂತೆ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಅಧಿಕಾರಿಗಳಿಗೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸ್ಪಷ್ಟ ಸೂಚನೆ ರವಾನಿಸಿದೆ.

ಮಾ.9 ರಿಂದ ಆರಂಭವಾಗುವ ವಾರ್ಷಿಕ ಪರೀಕ್ಷೆಗೆ ಹಿಜಾಬ್ ಧರಿಸಿ ಬರಲು ಅನುಮತಿ ನೀಡುವಂತೆ ಉಡುಪಿ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪದವಿ ಪೂರ್ವ ಕಾಲೇಜುಗಳ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಪರೀಕ್ಷಾ ಕೇಂದ್ರದ ಒಳಗೆ ಹಿಜಾಬ್ ಧರಿಸಿ ಬರುವುದನ್ನು ಹೈಕೋರ್ಟ್ ಅನುಮತಿಸಿಲ್ಲ. ಅಲ್ಲದೇ ಈ ವಿಚಾರ ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣೆಯಲ್ಲಿದೆ.