ಯಡಿಯೂರಪ್ಪರನ್ನು ಬದಿಗೆ ಸರಿಸುವ ಬಿಜೆಪಿಯ ಹೊಸ ತಂತ್ರ; ಮಠಾಧಿಪತಿಗಳ ಓಲೈಕೆಗಿಳಿದ ಕೇಂದ್ರ ನಾಯಕತ್ವ.

Uncategorized

ರಾಜ್ಯದಲ್ಲಿ ಮಠಾಧಿಪತಿಗಳನ್ನು ಓಲೈಸಿ,ಬಿಜೆಪಿಯಿಂದ ಜಾತಿ ಆಧಾರಿತ ನಾಯಕತ್ವದ ಕಾರ್ಯತಂತ್ರ.!

ಕರ್ನಾಟಕ ಚುನಾವಣೆಗೆ ಕೆಲ ತಿಂಗಳು ಬಾಕಿ ಇವೆ. ಈ ಸಮಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಜಾತಿ ಆಧರಿತ ರಾಜಕಾರಣದ ಮೂಲಕ ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಮೂರು ಪಕ್ಷಗಳು ಕಾರ್ಯಯೋಜನೆ ರೂಪಿಸಿವೆ. ಆದರೆ, ಈ ಯೋಜನೆಗಳು ವಿಭಿನ್ನ ತಂತ್ರಗಳನ್ನು ಹೊಂದಿವೆ. ಇದರ ಭಾಗವಾಗಿ ಬಿಜೆಪಿಯ ಕೇಂದ್ರ ನಾಯಕತ್ವವು ಹೊಸದೊಂದು ತಂತ್ರವನ್ನು ರೂಪಿಸಿದೆ.ಬಿಜೆಪಿಯ ಪ್ರಮುಖ ಪರಮೋಚ್ಚ ಲಿಂಗಾಯತ ನಾಯಕ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಕರ್ನಾಟಕದ ಬಿಜೆಪಿಯಲ್ಲಿ ಬಹುದೊಡ್ಡ ಖಾಲಿತನ ಕಾಣಿಸಿಕೊಂಡಿದೆ.ಯಡಿಯೂರಪ್ಪನವರಂತಹ ವರ್ಚಸ್ವಿ ನಾಯಕರ ಸ್ಥಾನ ತುಂಬುವ ಹೊಸಬರುಯಾರೆಂಬುದು ಇನ್ನೂ ಬಗೆಹರಿಯದ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ, ಬಿಜೆಪಿಯಲ್ಲಿ ಆಂತರಿಕವಾಗಿ ಬದಲಾವಣೆಗಳಾಗುತ್ತಿವೆ.

ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕನ್ನಡ ಸಂಘದ ಅಮೃತ ಮಹೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಅಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ಕರ್ನಾಟಕದ ಐದು ಪ್ರಮುಖ ಮಠಾಧೀಶರು. ಅದರಲ್ಲಿ ಪ್ರಬಲ ಸಮುದಾಯಗಳ ಸ್ವಾಮೀಜಿಗಳೆಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಿರುವ ವಿಚಾರ.
ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಹಾಗೂ ಜೈನ ಧರ್ಮಗುರುಗಳು ಅಲ್ಲಿ ನೆರೆದಿದ್ದರು. ಆದರೆ ಕರ್ನಾಟಕ ಬಿಜೆಪಿಯ ಪ್ರಮುಖ ಲಿಂಗಾಯತ ನಾಯಕರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ಗೈರು ಹಾಜರಾಗಿದ್ದರು.ಹಾಗೆಯೇ ಒಕ್ಕಲಿಗ ನಾಯಕರಾದ ಡಾ ಸಿ ಎನ್ ಅಶ್ವತ್ಥನಾರಾಯಣ, ಆರ್ ಅಶೋಕ್‌, ಕೆ ಸುಧಾಕರ್ ಅವರೂ ಇರಲಿಲ್ಲ ಎಂಬುದು ಹಲವು ಶಂಕೆಗಳಿಗಳನ್ನು ಹುಟ್ಟುಹಾಕಿದೆ.

ಕರ್ನಾಟಕದಲ್ಲಿ ಲಿಂಗಾಯತರದ್ದು ದೊಡ್ಡ ಸಮುದಾಯವಾಗಿದ್ದರೆ, ಒಕ್ಕಲಿಗರದ್ದು ಎರಡನೇ ಅತ್ಯಂತ ಪ್ರಬಲವಾದ ಸಮುದಾಯ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಿಂಗಾಯತರಾದರೂ ಯಡಿಯೂರಪ್ಪನವರಿಗೆ ಇರುವ ವರ್ಚಸ್ಸು ಅವರಿಗಿಲ್ಲ ಎಂಬುದು ಕೇಂದ್ರ ನಾಯಕರಿಗೆ ಮನವರಿಕೆಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ದೆಹಲಿಯಲ್ಲಿ ನಡೆದ ಬೆಳವಣಿಗೆಯು ರಾಜ್ಯ ನಾಯಕರಿಗೆ ಹೊಸ ಸಂದೇಶವೊಂದನ್ನು ರವಾನಿಸಿದೆ. ಜಾತಿ ಆಧಾರಿತ ನಾಯಕರ ಅವಲಂಬನೆಯನ್ನು ಕಡಿಮೆ ಮಾಡಲು ಬಿಜೆಪಿ ಹೈಕಮಾಂಡ್‌ ತಂತ್ರ ರೂಪಿಸಿದೆ ಎಂದು ಹೇಳಲಾಗುತ್ತಿದೆ. ನೇರವಾಗಿ ಧಾರ್ಮಿಕ ಮುಖಂಡರ ಬಳಿಗೆ ಹೋಗುವುದು, ಅವರನ್ನು ಓಲೈಸುವುದು ಬಿಜೆಪಿಯ ಹೊಸ ಕಾರ್ಯತಂತ್ರವಾಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಕ್ಕಲಿಗರ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ, ಲಿಂಗಾಯತ ಧರ್ಮಗುರುಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಂಜಾವದೂತ ಸ್ವಾಮೀಜಿ ಹಾಗೂ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬ್ರಾಹ್ಮಣರಾದ ಪೇಜಾವರ ಮಠದ ಪೀಠಾಧಿಪತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಜೈನ ಧರ್ಮಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ದೆಹಲಿಯ ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದರು. ಕರ್ನಾಟಕದಲ್ಲಿ ಮಠಾಧಿಪತಿಗಳನ್ನು ಓಲೈಸುವ ಮೂಲಕ ಬಿಜೆಪಿ ಕೇಂದ್ರ ನಾಯಕತ್ವವು ಜಾತಿ ಆಧಾರಿತ ನಾಯಕತ್ವದಿಂದ ಬಿಡುಗಡೆ ಹೊಂದುವ ಕಾರ್ಯತಂತ್ರ ರೂಪಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.