ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ವಾಂಟೆಡ್ ಆರೋಪಿ ತೌಫಿಲ್ ನನ್ನು ಬಂಧಿಸಿದ NIA ಅಧಿಕಾರಿಗಳು

ಕರಾವಳಿ

ಆರೋಪಿ ತೌಫಿಲ್ ತಲೆಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು.

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ವಾಂಟೆಡ್ ಆರೋಪಿಯನ್ನ NIA ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿ ತೌಫಿಲ್ ಸುಳಿವು ಕೊಟ್ಟವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು.

ಕಳೆದ ಐದಾರು ತಿಂಗಳಿಂದ ಆರೋಪಿ ತೌಫಿಲ್ ಅಮೃತಹಳ್ಳಿಯ ಮಾರುತಿ ಲೇ ಔಟ್ ನಲ್ಲಿ ವಾಸವಿದ್ದ. ಮಡಿಕೇರಿ ಮೂಲದ ತೌಫಿಲ್, ನಂಜುಂಡಪ್ಪ ಎಂಬುವರ ಮೂರು ಅಂತಸ್ತಿನ ಕಟ್ಟಡದಲ್ಲಿ ಬಾಡಿಗೆಗೆ ಇದ್ದ. ತೌಫಿಲ್ ಯಾರನ್ನೂ ಅಷ್ಟಾಗಿ ಮಾತನಾಡಿಸುತ್ತಿರಲಿಲ್ಲ. ನಿನ್ನೆ ರಾತ್ರಿ 9.30 ಕ್ಕೆ ಖಚಿತ ಮಾಹಿತಿ ಮೇರೆಗೆ ತೌಫಿಲ್ ವಾಸವಿದ್ದ ಮನೆ ಮೇಲೆ NIA ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.

NIA ಅಧಿಕಾರಿಗಳು ಆಟೋ ಚಾಲಕ, ಪ್ಲಂಬರ್ ವೇಷದಲ್ಲಿ ತೌಫಿಲ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಮೊದಲಿಗೆ ಪ್ಲಂಬರ್ ಅಂತಾ ಕೈಯಲ್ಲಿ ರಿಂಚ್ ಹಿಡಿದು ಇಬ್ಬರು ಅಧಿಕಾರಿಗಳು ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ತೌಪಿಲ್ ಮಟನ್ ಕಟ್ ಮಾಡುತ್ತಿದ್ದಾನಂತೆ. ಅಧಿಕಾರಿಗಳನ್ನು ನೋಡಿ ಗಲಿಬಿಲಿಗೊಂಡ ತೌಪಿಲ್ ಅವರ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಅಷ್ಟರಲ್ಲಿ ತೌಪಿಲ್ ಅನ್ನು NIA ಅಧಿಕಾರಿಗಳು ಲಾಕ್ ಮಾಡಿದ್ದಾರೆ. ಸದ್ಯ ತೌಪಿಲ್ ಅನ್ನು ವಶಕ್ಕೆ ಪಡೆದ NIA ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಜುಲೈ 26,2022 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿತ್ತು