ವಾಹನ ಸವಾರರಿಗೆ ಮತ್ತೆ ಶಾಕ್,ಏಪ್ರಿಲ್‌ 1 ರಿಂದ ಹೈವೇ ಟೋಲ್‌ ದರ ಶೇ. 5ರಿಂದ 10 ರಷ್ಟು ಏರಿಕೆ..?

ರಾಷ್ಟ್ರೀಯ

ಟೋಲ್‌ ಪ್ಲಾಜಾದಿಂದ 20 ಕಿಲೋ ಮೀಟರ್‌ಗಳ ಒಳಗೆ ವಾಸಿಸುವ ವ್ಯಕ್ತಿಗೂ ಮಾಸಿಕ ಶುಲ್ಕ 10% ಹೆಚ್ಚಳ

ಏಪ್ರಿಲ್‌ 1 ರಿಂದ ಹೈವೇ ಟೋಲ್‌ ದರ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಶೇ.5 ರಿಂದ ಶೇ.10 ರಷ್ಟು ದರ ಹೆಚ್ಚಳವಾಗಲಿದೆ ಎಂದು ತಿಳಿದುಬಂದಿದೆ. ಮಾಸಿಕ ಪಾಸ್‌ ದರವೂ ಶೇ.10 ಏರಿಕೆಯಾಗಲಿದೆ ಎನ್ನಲಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ಬಳಲಿರುವ ದೇಶದ ಜನತೆಗೆ ಏಪ್ರಿಲ್‌ 1ರಿಂದ ಹೊಸ ಶಾಕ್‌ ಕಾದಿದೆ. ಅಂದಿನಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ ವೇಗಳಲ್ಲಿನ ಟೋಲ್‌ ದರ ಶೇ.5 ರಿಂದ 10 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಯಮ-2008ರ ಪ್ರಕಾರ ಸುಂಕದ ಪರಿಷ್ಕರಣೆ ಮಾಡಲಾಗುತ್ತಿದ್ದು, ಕಾರುಗಳು ಮತ್ತು ಲಘು ವಾಹನಗಳಿಗೆ ಪ್ರತಿ ಟ್ರಿಪ್‌ಗೆ ಶೇ. 5ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುವುದು ಮತ್ತು ಭಾರಿ ವಾಹನಗಳ ಟೋಲ್‌ ತೆರಿಗೆ ಶೇ.10ರಷ್ಟು ಹೆಚ್ಚಾಗಬಹುದು ಎಂದು ಮೂಲಗಳು ಹೇಳಿವೆ.

2022ರಲ್ಲಿ ಶೇ.10 ರಿಂದ 15 ರಷ್ಟು ದರ ಹೆಚ್ಚಿಸಲಾಗಿತ್ತು. ಆಗ ಎಲ್ಲ ವಾಹನಗಳಿಗೆ 10 ರಿಂದ 60 ರೂ. ನಡುವೆ ದರ ಏರಿಕೆ ಆಗಿತ್ತು. ಪ್ರಸ್ತುತ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರತಿ ಕಿ.ಮೀ.ಗೆ 2.19 ರೂ. ನಂತೆ ಟೋಲ್‌ ತೆರಿಗೆ ಸಂಗ್ರಹಿಸಲಾಗುತ್ತಿದೆ.ಈ ನಡುವೆ ಟೋಲ್‌ ಪ್ಲಾಜಾ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯ ನಿವಾಸಿಗಳಿಗೆ ನೀಡಲಾಗುವ ಮಾಸಿಕ ಪಾಸ್‌ ದರವನ್ನು ಕೂಡ ಶೇ.10 ರಷ್ಟು ಹೆಚ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ. 2022ರ ಆರ್ಥಿಕ ವರ್ಷದಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ 33,881.22 ಕೋಟಿ ರೂಪಾಯಿ ಟೋಲ್‌ ಸಂಗ್ರಹಿಸಲಾಗಿದೆ. ಇದು ಹಿಂದಿನ ವರ್ಷದ ಸಂಗ್ರಹಕ್ಕಿಂತ ಶೇ. 21 ರಷ್ಟು ಹೆಚ್ಚುವರಿಯಾಗಿದೆ.

ರಾಷ್ಟ್ರೀಯ ರಸ್ತೆಗಳ ಶುಲ್ಕ ನಿಯಮಗಳು 2008 ರ ಪ್ರಕಾರ, ಬಳಕೆದಾರರ ಶುಲ್ಕ ಪ್ಲಾಜಾದ ನಿರ್ದಿಷ್ಟ ವ್ಯಾಪ್ತಿಯೊಳಗೆ ವಾಸಿಸುವ ಜನರಿಗೆ ವಿನಾಯಿತಿಗೆ ಯಾವುದೇ ಅವಕಾಶವಿಲ್ಲ. ಆದರೂ, ವಾಣಿಜ್ಯೇತರ ಬಳಕೆಗಾಗಿ ನೋಂದಾಯಿಸಲಾದ ವಾಹನವನ್ನು ಹೊಂದಿರುವ ಮತ್ತು ಟೋಲ್‌ ಪ್ಲಾಜಾದಿಂದ 20 ಕಿಲೋ ಮೀಟರ್‌ಗಳ ಒಳಗೆ ವಾಸಿಸುವ ವ್ಯಕ್ತಿಯು ಶುಲ್ಕ ಪ್ಲಾಜಾ ಮೂಲಕ ಅನಿಯಮಿತ ಪ್ರಯಾಣಕ್ಕಾಗಿ 2022-23 ರ ಹಣಕಾಸು ವರ್ಷದಲ್ಲಿ ತಿಂಗಳಿಗೆ 315 ರೂ. ದರದಲ್ಲಿ ಮಾಸಿಕ ಪಾಸ್‌ಗೆ ಅರ್ಹರಾಗಿರುತ್ತಾರೆ.