ದಕ್ಷಿಣ ಕನ್ನಡ ಜಿಲ್ಲೆಯ ಕಂದಾವರ ,ಗುರುಪುರ ವ್ಯಾಪ್ತಿಯ ಗ್ರಾಮದಲ್ಲಿ ಮಣ್ಣಿನ ಅಕ್ರಮ ಗಣಿಗಾರಿಕೆ

ಕರಾವಳಿ

ಗಣಿ,ಭೂವಿಜ್ಞಾನ ಇಲಾಖೆ, ಕಂದಾವರ ಗ್ರಾಮ ಪಂಚಾಯತ್ ಅಧಿಕಾರಿಗಳು ಮಣ್ಣು ಮಾಫಿಯಾದಲ್ಲಿ ಶಾಮೀಲು ಶಂಕೆ.!

ಜಿಲ್ಲೆಯ ಮಣ್ಣು ಮಾಫಿಯಾ. ಕೆಂಪುಕಲ್ಲಿನ ದಂಧೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ.ಎಲ್ಲೆಂದರಲ್ಲಿ ಮಣ್ಣು ಅಗೆದು ಸಾಗಾಟ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ.ಜಿಲ್ಲೆಯ ಹಲವು ಕಡೆಗಳಿಂದ ಇಂಥ ಮಣ್ಣು ಸಾಗಾಟದ ಪ್ರಕ್ರಿಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಂದ್ರಪ್ರದೇಶದಲ್ಲಿ ಈ ಮಣ್ಣಿಗೆ ಭಾರಿ ಬೇಡಿಕೆ ಇರುವ ಹಿನ್ನಲೆಯಲ್ಲಿ ಮಣ್ಣಿನ ವಹಿವಾಟು ಹೆಚ್ಚಾಗಲಾರಂಭಿಸಿದೆ. ಕೃಷಿಗಾಗಿ ಭೂಮಿಯನ್ನು ಸಮತಟ್ಟು ಮಾಡುವ ಉದ್ದೇಶಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದು ನಿರಂತರವಾಗಿ ಈ ದಂಧೆ ನಡೆಸುತ್ತಿರುವ ಹಲವು ನಿದರ್ಶನಗಳು ಜಿಲ್ಲೆಯಲ್ಲಿದೆ.

ದಕ್ಷಿಣಕನ್ನಡ ಜಿಲ್ಲೆಯ ಕೆಲವು ಕಡೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿಯೊಂದಿಗೆ ನಡೆದರೆ, ಇನ್ನು ಹೆಚ್ಚಿನ ಕಡೆಗಳಲ್ಲಿ ಅಕ್ರಮವಾಗಿಯೇ ನಡೆಯುತ್ತಿದೆ. ಆಂದ್ರಪ್ರದೇಶ ಹಾಗೂ ಇತರ ಭಾಗಗಳಿಗೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಸಿಗುವಂತಹ ಕೆಂಪುಕಲ್ಲು ಮಿಶ್ರಿತ ಮಣ್ಣಿಗೆ ಭಾರೀ ಬೇಡಿಕೆ ಇರುವ ಕಾರಣಕ್ಕಾಗಿ ಈ ಭಾಗದಲ್ಲಿ ಎಲ್ಲೆಂದರಲ್ಲಿ ಗುಡ್ಡ ಪ್ರದೇಶಗಳನ್ನು ಕೊರೆದು ಮಣ್ಣು ಸಾಗಿಸಲಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಕ ಅತೀ ಸುಲಭವಾಗಿ ಮಣ್ಣು ಹಾಗೂ ಕಲ್ಲು ತೆಗೆಯಲು ಪರವಾನಗಿಯನ್ನು ಪಡೆಯುವ ದಂಧೆಕೋರರು, ಬಳಿಕ ಇದೇ ಪರವಾನಿಗೆಯ ಮೂಲಕ ಅಕ್ರಮವಾಗಿ ಮಣ್ಣನ್ನು ಹೊರ ರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 169 ಮೂಲಕ ಬೃಹತ್ತ್ ಗಾತ್ರದ ಲಾರಿಗಳಲ್ಲಿ ಸಾಗಾಟ ಮಾಡುತ್ತಿದ್ದಾರೆ.ಇಂತಹ ಭಾರೀ ಗಾತ್ರದ ವಾಹನಗಳ ಮೂಲಕ ಅಕ್ರಮ ಮಣ್ಣು ಸಾಗಾಟ ಮಾಡುವ ಸಂದರ್ಭ ಸಂಚಾರಕ್ಕೆ ಅಡೆ-ತಡೆಯಾಗುತ್ತದೆ. ಈ ಬಗ್ಗೆ ಪೋಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಮೌನ ಪಾಲಿಸಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.ದಿನಕ್ಕೆ ಹತ್ತಾರು ಲಾರಿಗಳು ಈ ಮಣ್ಣನ್ನು ತುಂಬಿಕೊಂಡು ನಿರಂತರವಾಗಿ ರಸ್ತೆಯಲ್ಲಿ ಹೋಗುವುದರಿಂದ ಸ್ಥಳೀಯ ಜನರು ಪ್ರಾಣಭಯದಿಂದಲೇ ರಸ್ತೆಯಲ್ಲಿ ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈ ರೀತಿಯ ಮಣ್ಣು ಸಾಗಾಟ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಕಡೆಗಳಲ್ಲಿ ಕಾರ್ಯಾಚರಿಸುತ್ತಿದ್ದು, ಜುಜುಬಿ ರಾಜಸ್ವವನ್ನು ಸಂಗ್ರಹಿಸಿ ಸರಕಾರದ ಕೋಟಿಗಟ್ಟಲೆ ಮೌಲ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಲು ಕಾನೂನಿನ ಮೂಲಕವೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೇ ಅವಕಾಶ ನೀಡಿದ್ದಾರೆ.ಇದೇ ರೀತಿಯ ಪ್ರಕ್ರಿಯೆ ನಡೆದಲ್ಲಿ ಬಳ್ಳಾರಿಯಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಮಣ್ಣಿನ ಗಣಿಗಾರಿಕೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಕಳ್ಳ ದಂಧೆಯಲ್ಲಿ ಶಾಮೀಲಾಗಿದ್ದಾರೆ.ಇವರಿಗೆ ತಿಂಗಳ ಮಾಮೂಲು ಸರಿಯಾಗಿ ಸಂದಾಯವಾಗುತ್ತಿದೆ.ಅದ್ದರಿಂದ ದ.ಕ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಮೌನಕ್ಕೆ ಶರಣಾಗಿ ಮಾಫಿಯಾದ ದಂಧೆಕೋರರೊಂದಿಗೆ ಕೈ ಜೋಡಿಸಿದ್ದಾರೆ.

ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾವರ ಪದವು ಸರ್ವೆ ಸಂಖ್ಯೆ 104 ರ ಜಮೀನಿನಲ್ಲಿ ಜನ ವಸತಿ ಪ್ರದೇಶದ ಸಮೀಪ ಕೆಂಪು ಕಲ್ಲು ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದು, ಸದರಿ ಗಣಿಗಾರಿಕೆಯಲ್ಲಿ ಕ್ರಷರ್ ಯಂತ್ರಗಳನ್ನು ಬಳಸಿ ಹಗಲು,ರಾತ್ರಿ ಎನ್ನದೆ ಗಣಿಗಾರಿಕೆ ಮಾಡಿ ಕೆಂಪು ಕಲ್ಲು ಮತ್ತು ಮಣ್ಣನ್ನು ಸೂಕ್ತ ಸುರಕ್ಷತೆಯ ನಿಯಮಗಳನ್ನು ಪಾಲನೆ ಮಾಡದೇ ಬೃಹತ್ತ್ ಗಾತ್ರದ ವಾಹನ ಬಳಸಿ ಜನವಸತಿ ಪ್ರದೇಶಗಳ ರಸ್ತೆಗಳ ಮೂಲಕವೇ ಹೊರಗಡೆ ಸಾಗಿಸುತ್ತಿದ್ದಾರೆ.

ಸದರಿ ಗಣಿಗಾರಿಕೆಯಲ್ಲಿ ಬಳಸುತ್ತಿರುವ ಕ್ರಷರ್ ಯಂತ್ರಗಳಿಂದ ನಿರಂತರ ಶಬ್ದ ಮಾಲಿನ್ಯವಾಗಿ,ಇದರ ದೂಳು ಸುತ್ತ ಮುತ್ತಲಿನ ಪರಿಸರದಲ್ಲಿ ವ್ಯಾಪಿಸುತ್ತಿದೆ.ಗ್ರಾಮದ ಜನವಸತಿ ರಸ್ತೆಗಳಲ್ಲಿ ಘನ ಟ್ರಕ್ ಗಳ ಮೂಲಕ,ಧೂಳನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆಗಳನ್ನು ಬಳಸಿಕೊಳ್ಳದೇ,ಕಲ್ಲು ಮತ್ತು ಮಣ್ಣನ್ನು ಹೊರಗಡೆ ಸಾಗಿಸುತ್ತಿದ್ದು ಇದರಿಂದ ಗ್ರಾಮದಲ್ಲಿ ಧೂಳು ವ್ಯಾಪಿಸಿ ನಿವಾಸಿಗಳಿಗೆ ತೊಂದರೆಯಾಗುತ್ತಿದೆ.

ಗಣಿಗಾರಿಕೆಯಿಂದ ಸಮೀಪದ ನಿವಾಸಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ, ವಯೋವೃದ್ಧರಿಗೆ, ಗರ್ಭಿಣಿ ಮಹಿಳೆಯರಿಗೆ ಶ್ವಾಸಕೋಶ ಸಂಬಂಧಿತ ಅನಾರೋಗ್ಯ ಸಮಸ್ಯೆಗಳು ಕಂಡು ಬರುತ್ತಿದ್ದು, ಗ್ರಾಮಸ್ಥರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಸದ್ರಿ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸುವಂತೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಸದ್ರಿ ಗಣಿಗಾರಿಕೆಯು ಯಾವುದೋ ಇತರ ಉದ್ದೇಶದ ಅನುಮತಿ ಪಡೆದು ಅಕ್ರಮವಾಗಿ ಕೆಂಪು ಕಲ್ಲಿನ ಗಣಿಗಾರಿಕೆ ನಿರ್ವಹಿಸುತ್ತಿರುವ ಬಗ್ಗೆ ಸಂಶಯವಿದ್ದು,ಸಂಬಂಧ ಪಟ್ಟವರು ಈ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.ಈ ಭಾಗದ ಸಾರ್ವಜನಿಕರಿಗೆ ಈ ಅಕ್ರಮ ದಂಧೆಯಿಂದ ತೊಂದರೆಯಾಗುತ್ತಿದ್ದರೂ ಕಂದಾವರ ಗ್ರಾಮ ಪಂಚಾಯತಿನ ಅಧಿಕಾರಿಗಳು ಮತ್ತು ಪಂಚಾಯತ್ ಅಧ್ಯಕ್ಷರು ಹಾಗೂ ಕಲ್ಲು ಕೋರೆಯ ಹತ್ತಿರ ಮನೆಯಿರುವ ಉಧ್ಯಮಿಯೊಬ್ಬರು ಮೌನ ವಹಿಸಿರುವ ಬಗ್ಗೆ ಸಾರ್ವಜನಿಕರಿಗೆ ಸಂಶಯವಿದೆ. ಇದೀಗ ಈ ಭಾಗದ ಜನರು ಬೀದಿಗಿಳಿದು ಹೋರಾಟ ನಡೆಸಲು ಸನ್ನದ್ದರಾಗಿದ್ದಾರೆ.