ರಾಜ್ಯ ಬಿಜೆಪಿಯಲ್ಲಿ ತಲ್ಲಣ.!

ರಾಜ್ಯ

ಹಿರಿಯರಿಗಿಲ್ಲ ಟಿಕೆಟ್,ಅಮಿತ್ ಷಾ ಖಡಕ್ ವಾರ್ನಿಂಗ್.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ – ಬಿಜೆಪಿ ಗೆಲ್ಲುವ ಕ್ಷೇತ್ರಗಳಿವು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಗರಿಗೆದರುತ್ತಿದ್ದಂತೆ ಆಡಳಿತಾರೂಢ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಬಿಜೆಪಿಯ ಮಾಸ್ ಲೀಡರ್ ಯಡಿಯೂರಪ್ಪರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿಯವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ ತರುವಾಯ ರಾಜ್ಯದಲ್ಲಿ ಬಿಜೆಪಿ ಇಮೇಜ್ ಕಳೆದುಕೊಳ್ಳುತ್ತಾ ಬಂದಿರುವುದು ಸುಳ್ಳಲ್ಲ. ಇದರ ನೇರ ಪ್ರತಿಫಲನ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಆಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಈ ಚುನಾವಣೆಯಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆಗೆ ಸಿಲುಕಿ ಒಡ್ಡಾಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿಯ ಚಾಣಕ್ಯ,ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ರಾಜ್ಯದ ನಾಯಕರಿಗೆ ಶಾಕಿಂಗ್ ನೀಡಿದ್ದು ದಾವಣಗೆರೆಯಲ್ಲಿ ನಡೆಯಬೇಕಿದ್ದ ಸಮಾವೇಶವನ್ನು ರದ್ದುಪಡಿಸಿ ‘ನಿಮ್ಮ ತಲೆಗೆ ನಿಮ್ಮ ಕೈ’ ಅನ್ನುವ ರೀತಿಯ ಸಂದೇಶ ಹೊರಡಿಸಿದ್ದಾರೆ. ಗುಪ್ತ ಸರ್ವೇಯ ಪ್ರಕಾರ ರಾಜ್ಯದಲ್ಲಿ ಬಿಜೆಪಿ 50 ರಿಂದ 60 ಸ್ಥಾನ ಪಡೆದು ಹೀನಾಯ ಸೋಲು ಕಾಣುತ್ತದೆ. ಕಾಂಗ್ರೆಸ್ ಭರ್ಜರಿಯಾಗಿ ಬಹುಮತ ಪಡೆಯುತ್ತದೆ ಎನ್ನುವ ಮಾಹಿತಿ ಬಿಜೆಪಿ ಹೈಕಮಾಂಡ್ ಗೆ ದೊರೆಯುತ್ತಿದ್ದಂತೆ,ರಾಜ್ಯ ಬಿಜೆಪಿ ನಾಯಕರ ಬಗ್ಗೆ ಅಮಿತ್ ಷಾ ಕೆಂಡಾಮಂಡಲರಾಗಿದ್ದಾರೆ. ಮುಖ್ಯಮಂತ್ರಿ ಅನ್ನುವ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿಗೆ ಈ ಬಾರಿ ಟಿಕೆಟ್ ಸಿಕ್ಕರೆ,ಉಳಿದ ಬಿಜೆಪಿ ಹಿರಿಯರಿಗೆ ಗೇಟ್ ಪಾಸ್ ನೀಡಲು ಷಾ ಸೂಚನೆ ನೀಡಿದ್ದಾರೆ. ಹಿರಿಯ ಮುಖಂಡರಿಗೆ ಟಿಕೆಟ್ ನಿರಾಕರಿಸಿ ಪ್ರಭಾವಿಯುಳ್ಳ ಅವರ ಪುತ್ರರಿಗೆ ಮಾತ್ರ ಟಿಕೆಟ್ ನೀಡಲು ಮುಂದಾಗಿದೆ. ಬಿಜೆಪಿ ಪಕ್ಷದ ಇಮೇಜಿಗೆ ಧಕ್ಕೆ ತಂದ ಜಾರಕಿಹೊಳಿ ಸೇರಿದಂತೆ ಎಲ್ಲಾ ಹಿರಿಯ ತಲೆಗಳಿಗೆ ಈ ಬಾರಿ ಟಿಕೆಟ್ ಇಲ್ಲ ಅನ್ನುವ ಸುದ್ದಿ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದ್ದಂತೆ ಬಿಜೆಪಿ ಹಿರಿಯ ನಾಯಕರು ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದ್ದಾರೆ. ಅವುಗಳಲ್ಲಿ ಕೆಲವರು ತಮ್ಮ ಅಸ್ತಿತ್ವ ಉಳಿಸಿ ಕೊಳ್ಳಲು ಕಾಂಗ್ರೆಸ್ ಬಾಗಿಲು ಬಡಿದುಕೊಳ್ಳುವ ಎಲ್ಲಾ ಲಕ್ಷಣಗಳು ಇವೆ. ಕೆಲವರಂತೂ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಗುಪ್ತ ಮಾತುಕತೆ ನಡೆಸಿದ್ದು ಚುನಾವಣೆ ಹೊಸ್ತಿಲಲ್ಲಿ ಹಲವು ಪ್ರಭಾವೀ ನಾಯಕರು ಬಿಜೆಪಿಗೆ ಕೈ ಕೊಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಒಟ್ಟಾರೆ ರಾಜ್ಯ ರಾಜಕಾರಣದ ಚಿತ್ರಣ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಒಂದು ವೇಳೆ ರಾಜ್ಯದಲ್ಲಿ ಕೊನೆ ಕ್ಷಣದಲ್ಲಿ ಮ್ಯಾಜಿಕ್ ನಡೆದು ಕಾಂಗ್ರೆಸ್ ಬಹುಮತಕ್ಕಿಂತ ಕಡಿಮೆ ಸ್ಥಾನ ಪಡೆದರೆ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಿದರೆ ಅಂತಹ ಸಂದರ್ಭದಲ್ಲಿ ಬಿಜೆಪಿ ತಟಸ್ಥ ನಿಲುವು ತೆಗೆದುಕೊಂಡು ಸರಕಾರ ರಚನೆಗೆ ಮುಂದಾಗದಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದರೆ ಒಂದು ವರ್ಷದಲ್ಲಿ ಸರಕಾರ ಪತನಗೊಳ್ಳುವುದು ಗ್ಯಾರಂಟಿ. ಅದರ ಲಾಭ ಪಡೆದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಬಹುದು ಅನ್ನುವ ಲೆಕ್ಕಾಚಾರ ಬಿಜೆಪಿಯದ್ದು.

ಮೇ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಬಿಜೆಪಿ ನಾನಾ ಕಸರತ್ತು ನಡೆಸುತ್ತಿದ್ದರೂ ಕಾಂಗ್ರೆಸ್ ಪಕ್ಷದ ಈ ಬಾರಿಯ ‘ಗ್ಯಾರಂಟಿ’ ಯೋಜನೆಗಳು ಜನರನ್ನು ಸೆಳೆಯುತ್ತಿದ್ದು ಬಿಜೆಪಿ ಚುನಾವಣೆಗೆ ಮುನ್ನ ಅಸ್ತ್ರ ಇಲ್ಲದೆ ಒದ್ದಾಡುತ್ತಿದೆ. ಇತ್ತ ಹಿಂದುತ್ವ ಕಾರ್ಡ್ ಪ್ರಯೋಗ ಬಿಜೆಪಿಯನ್ನು ಕರಾವಳಿ ಭಾಗದಲ್ಲಿ ಕೈ ಹಿಡಿದರೆ ಇಡೀ ರಾಜ್ಯದಲ್ಲಿ ಅಂತಹ ವಾತಾವರಣ ಇಲ್ಲ ಅನ್ನುವುದು ಬಿಜೆಪಿಯ ನಾಯಕರಿಗೆ ಕೂಡ ಜ್ಞಾನೋದಯವಾಗಿದೆ. ಅಮಿತ್ ಷಾ ಎರಡು ಬಾರಿ ರಾಜ್ಯಕ್ಕೆ ಬಂದು ಮ್ಯಾಜಿಕ್ ಮಾಡುತ್ತಿದ್ದರೂ ಈ ಬಾರಿ ವರ್ಕೌಟ್ ಆಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.

ಇತ್ತ ಬಿಜೆಪಿಗೆ ಶಕ್ತಿ ತುಂಬುತ್ತಿದ್ದ ಕರಾವಳಿ ಭಾಗ ಹಾಗೂ ಬಿಜೆಪಿಯ ಭದ್ರಕೋಟೆಗಳಲ್ಲೂ ಕೂಡ ಬಿಜೆಪಿ ಅನೇಕ ಸ್ಥಾನಗಳನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಸಮರ್ಥ ನಾಯಕತ್ವದ ಕೊರತೆ ಈ ಬಾರಿ ಬಿಜೆಪಿಗೆ ದೊಡ್ಡ ಮುಳುವಾಗುವ ಸಾಧ್ಯತೆಯಿದೆ.

ಬಿಜೆಪಿಯ ಭದ್ರಕೋಟೆ, ಹಿಂದುತ್ವದ ಪ್ರಯೋಗಶಾಲೆ ಎನಿಸಿಕೊಂಡಿದ್ದ ಕರಾವಳಿಯಲ್ಲಿ ಬಿಜೆಪಿ ನಿರೀಕ್ಷಿಸಿದಷ್ಟು ಸ್ಥಾನ ಪಡೆಯುವುದು ಅನುಮಾನ ಅನ್ನುವ ಮಾಹಿತಿ ಗುಪ್ತ ಸರ್ವೇಯಿಂದ ಹೊರಬಂದಿದೆ. ಕಳೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ರಲ್ಲಿ 7 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ 4 ಸ್ಥಾನ ಪಡೆದುಕೊಂಡರೆ ಸಾಧನೆ ಅನ್ನುವ ರೀತಿಯ ವಾತಾವರಣ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹೈಕಮಾಂಡ್ ಗೆ ದೊರೆತ ಗುಪ್ತ ಮಾಹಿತಿಯ ಕೆಲವೊಂದು ಸ್ಯಾಂಪಲ್ ಇಲ್ಲಿದೆ.

ಗೆಲ್ಲಲು ಸಾಧ್ಯವಿರುವ ಕ್ಷೇತ್ರಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ( ಉಳ್ಳಾಲ) ಈ ಬಾರಿಯೂ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಯು.ಟಿ ಖಾದರ್ ಗೆ ಈ ಬಾರಿಯ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದು ಮುಸ್ಲಿಂ ವಲಯಗಳಲ್ಲಿ ಖಾದರ್ ಬಗ್ಗೆ ಹೆಚ್ಚಿನ ಅಸಮಾಧಾನ ಇದ್ದು ಎಸ್ಡಿಪಿಐ, ಜೆಡಿಎಸ್ ಸಾಕಷ್ಟು ಮತ ಬಾಚಿಕೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಹಿನ್ನಡೆ ಕಂಡಿದ್ದು, ಎಸ್ಡಿಪಿಐ ವರ್ಚಸ್ಸು ಹೆಚ್ಚಿಸಿದೆ. ಬಿಜೆಪಿಯಲ್ಲಿ ಪ್ರಬಲ ಅಭ್ಯರ್ಥಿ ಇಲ್ಲದಿರುವುದು ಖಾದರ್ ಗೆಲುವಿನ ಸಾಧ್ಯತೆ ಹೆಚ್ಚು, ಇತ್ತ ಉಳ್ಳಾಲ ದರ್ಗಾ ವಿಚಾರ ಸಾಕಷ್ಟು ಕೋಲಾಹಲ ಎಬ್ಬಿಸುವ ಸಾಧ್ಯತೆ ಇದ್ದು, ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಧಾರ್ಮಿಕ ನಾಯಕರು ಅಸಮಾಧಾನ ವ್ಯಕ್ತ ಪಡಿಸಿ ಚುನಾವಣೆಯಲ್ಲಿ ತಿರುಗೇಟು ನೀಡುವ ಮಾತುಗಳನ್ನಾಡಿದ್ದಾರೆ.ಈ ವಿಚಾರ ಖಾದರ್ ಸೋಲು,ಗೆಲುವಿನ ಸಾಧ್ಯತೆ ನಿರ್ಣಯಿಸುವುದೇ ಅಧಿಕವಾಗಿದೆ.

ಮೂಡುಬಿದಿರೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವಿನ ಪತಾಕೆ ಹಾರಿಸುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಯುವ ನಾಯಕ ಮಿಥುನ್ ರೈ ಪರ ಹೆಚ್ಚಿನ ಒಲವು ಮತದಾರರಲ್ಲಿದೆ. ಉಮಾನಾಥ ಕೋಟ್ಯಾನ್ ಸಾಫ್ಟ್ ಆಗಿರುವುದು ಬಿಜೆಪಿಯಲ್ಲೇ ದೊಡ್ಡ ಅಸಮಾಧಾನ ಇದೆ.

ಪುತ್ತೂರಿನಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವಿನ ನಗೆ ಬೀರಲಿದ್ದು, ಬಿಜೆಪಿಯಿಂದ ಕಾಂಗ್ರೆಸ್ ಸೇರಿರುವ ಅಶೋಕ್ ರೈ ಪರ ಕ್ಷೇತ್ರದಲ್ಲಿ ಹವಾ ಹೆಚ್ಚಿದೆ.

ಬಂಟ್ವಾಳದಲ್ಲಿ ರಮಾನಾಥ ರೈ ಯವರನ್ನು ಕ್ಷೇತ್ರದ ಜನ ಕೈ ಹಿಡಿಯುವ ಸಾಧ್ಯತೆ ಹೆಚ್ಚಿದೆ. ಕಳೆದ ಬಾರಿ ಸೋಲಿಸಿ ಸೋತೆವು ಅನ್ನುವ ವಾತಾವರಣ ಕ್ಷೇತ್ರದಲ್ಲಿದೆ. ರೈ ಯವರಿಗೆ ಇದು ಕೊನೆಯ ಚುನಾವಣೆ ಆಗಿರುವುದರಿಂದ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವ ಸಾಧ್ಯತೆ ಹೆಚ್ಚಿರುವುದರಿಂದ ಗೆಲ್ಲಿಸಿ ಪವರ್ ಫುಲ್ ಮಂತ್ರಿ ಸ್ಥಾನ ಪಡೆಯಲಿ ಅನ್ನುವ ವಾತಾವರಣ ಕ್ಷೇತ್ರದಲ್ಲಿದೆ.

ಬಿಜೆಪಿ ಗೆಲ್ಲಲು ಸಾಧ್ಯವಿರುವ ಕ್ಷೇತ್ರಗಳು

ಮಂಗಳೂರು ಉತ್ತರದಲ್ಲಿ ಬಹುತೇಕ ಬಿಜೆಪಿ ಅಭ್ಯರ್ಥಿ ಗೆಲುವಿನ ನಗೆ ಬೀರುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ಬಣ ರಾಜಕಾರಣದ ಲಾಭ ಬಿಜೆಪಿ ಪಡೆಯಲಿದೆ. ಕಾಂಗ್ರೆಸ್ ನಲ್ಲಿ ಬಣ ರಾಜಕಾರಣ ಬದಿಗಿಟ್ಟು, ಸಮಾನ ಮನಸ್ಕ ವ್ಯಕ್ತಿಯೊಬ್ಬರಿಗೆ ಟಿಕೇಟ್ ನೀಡಿದರೆ ಚಿತ್ರಣ ಬದಲಾಗುವ ಸಾಧ್ಯತೆ ಹೆಚ್ಚಿದೆ.

ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ಮತ್ತೆ ದಿಗ್ವಿಜಯ ಸಾಧಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

ಮಂಗಳೂರು ದಕ್ಷಿಣದಲ್ಲಿ ಮತ್ತೆ ವೇದವ್ಯಾಸ ಕಾಮತ್ ಗೆಲುವಿನ ನಗೆ ಬೀರಲಿದ್ದು, ಐವನ್- ಲೋಬೊ ಹೊರತುಪಡಿಸಿ ಇತರ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಚಿತ್ರಣ ಬದಲಾಗಲಿದೆ.

ಸುಳ್ಯದಲ್ಲಿ ಈ ಬಾರಿ ಜಿದ್ದಾಜಿದ್ದಿಯ ಸ್ಪರ್ಧೆ ನಡೆಯಲಿದ್ದು, ಯಾವ ಪಕ್ಷ ಗೆಲುವು ಸಾಧಿಸಲಿದೆ ಅನ್ನುವ ತೀರ್ಮಾನಕ್ಕೆ ಈಗಾಗಲೇ ಬರುವುದು ಅಸಾಧ್ಯವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವರ್ಚಸ್ಸು ಕುಂದುತ್ತಿದ್ದು, ರಾಜ್ಯ ರಾಜಕಾರಣಕ್ಕೆ ಎಂಟ್ರಿ ಆಗುವ ಎಲ್ಲಾ ಸಾಧ್ಯತೆಗಳು ಇವೆ. ಭರತ್ ಶೆಟ್ಟಿಯವರನ್ನು ಬಿಜೆಪಿ ಎಂ.ಪಿ ಸ್ಥಾನದ ಅಭ್ಯರ್ಥಿ ಮಾಡುವ ಸಾಧ್ಯತೆಯೂ ಇದೆ. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಿಂದ ಕಟೀಲು ವರ್ಚಸ್ಸು ಡ್ಯಾಮೇಜ್ ಗೊಳಗಾಗಿದ್ದು ಕಟೀಲುರನ್ನು ಬದಿಗೆ ಸರಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಅನ್ನುವ ಸ್ಪೋಟಕ ಮಾಹಿತಿ ಹೊರಬಿದ್ದಿದೆ.