ಮಾರ್ಚ್ 17 ರಿಂದ ಲಾರಿ ಮುಷ್ಕರ. ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ಕರೆ.

ರಾಜ್ಯ

ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ಮಾರ್ಚ್ 17ರಿಂದ ಮುಷ್ಕರಕ್ಕೆ ಕರೆ ನೀಡಿದೆ. ಲಾರಿಗಳ ಸಂಚಾರ ನಿಲ್ಲಿಸಿ, ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ಒಕ್ಕೂಟ ಹೇಳಿದೆ. ಇದರಿಂದಾಗಿ ಹಾಲು, ತರಕಾರಿ, ದಿನಸಿ, ಪೆಟ್ರೋಲ್, ಡೀಸೆಲ್ ಸೇರಿದಂತೆ ಅನೇಕ ವಸ್ತುಗಳ ಕೊರತೆ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕುವ ನಿರೀಕ್ಷೆ ಇದೆ.

ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಜಿ. ಆರ್. ಷಣ್ಮುಗಪ್ಪ ಈ ಕುರಿತು ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರಕ್ಕೆ ಸರಕು ಸಾಗಣೆ ವಾಹನಗಳ ಪ್ರವೇಶ ರದ್ದು ಪಡಿಸಿರುವುದನ್ನು ಖಂಡಿಸಿ ಮಾರ್ಚ್ 17ರ ಮಧ್ಯರಾತ್ರಿಯಿಂದ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ವಾಣಿಜ್ಯ ವಾಹನಗಳ ಎಫ್‌ಸಿ ನವೀಕರಣಕ್ಕೆ ಕ್ಯೂ ಆರ್ ಕೋಡ್ ಇರುವ ರೆಟ್ರೋ ರಿಫ್ಲೆಕ್ಟರ್ ಟೇಪ್ ಅಳವಡಿಸಿಕೊಂಡು ಬರುವಂತೆ ಸರ್ಕಾರ ಆದೇಶ ಹೊರಡಿಸಿದೆ. ಮಾರುಕಟ್ಟೆಯಲ್ಲಿ 1 ಮೀಟರ್ ರೆಟ್ರೋ ರಿಫ್ಲೆಕ್ಟರ್ ಟೇಪುಗಳಿಗೆ 60 ರಿಂದ 70 ರೂ. ತನಕ ದರವಿದೆ. ಆದರೆ 1 ಮೀ. ಕ್ಯೂಆರ್ ಕೋಡ್‌ ಟೇಪ್‌ಗೆ 120 ರೂ. ದರ ನಿಗದಿ ಮಾಡಲಾಗಿದೆ. ಟೇಪ್ ಅಳವಡಿಕೆ ಮಾಡಲು 4 ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ಒಕ್ಕೂಟ ಆರೋಪ ಮಾಡಿದೆ.

ಸರ್ಕಾರ ವಾಹನದ ಮಾಲೀಕರನ್ನು ಸುಳಿಗೆ ಮಾಡಲು ಹೊರಟಿದೆ. ಸರ್ಕಾರ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ಒತ್ತಾಯಿಸಿದೆ. ಸರ್ಕಾರ ತನ್ನ ಆದೇಶ ವಾಪಸ್ ಪಡೆಯದಿದ್ದರೆ ಅಗತ್ಯ ವಸ್ತುಗಳ ಪೂರೈಕೆ ಬಂದ್ ಮಾಡಿ, ಲಾರಿ ನಿಲ್ಲಿಸಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ. ವಾಹನಗಳಿಗೆ ರೆಟ್ರೋ ರಿಫ್ಲೆಕ್ಟರ್ ಟೇಪ್ ಅಳವಡಿಸಿಕೊಂಡು ಬರುವಂತೆ ಮಾಡಿರುವ ಆದೇಶವನ್ನು ಪಾಲಿಸಲು ನಾವು ಸಿದ್ಧರಿದ್ದೇವೆ. ಆದರೆ ಕ್ಯೂ ಆರ್ ಕೋಡ್ ಆಧಾರಿತ ರಿಫ್ಲೆಕ್ಟರ್ ಟೇಪ್ ಅಳವಡಿಕೆಗೆ ವಿರೋಧವಿದೆ ಎಂದು ಲಾರಿ ಮಾಲೀಕರು ಹೇಳಿದ್ದಾರೆ