ನೌಷಾದ್ ಕುರ್ನಾಡುರವರಿಗೆ ನ್ಯಾಯಯುತ ಪರಿಹಾರ ನೀಡುವ ಕುರಿತು ಒಂದು ವಾರಗಳ ಸಮಯಾವಕಾಶ ಕೇಳಿದ ಕೆ ಎಸ್ ಹೆಗ್ಡೆ ಅಸ್ಪತ್ರೆ ಆಡಳಿತ ಮಂಡಳಿ

ಕರಾವಳಿ

ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕಾಲು ಕಳೆದುಕೊಂಡ ಕುರ್ನಾಡು ನೌಷಾದ್ ಗೆ ಪರಿಹಾರ ಒದಗಿಸಬೇಕು, ತಪ್ಪಿತಸ್ಥ ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಮುಂದಿಟ್ಟು ಡಿವೈಎಫ್ಐ ದ.ಕ.ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ದೇರಳಕಟ್ಟೆ ಸಿಟಿ ಮೈದಾನದಲ್ಲಿ ನಡೆದ ಸಾಮೂಹಿಕ ಧರಣಿ ವ್ಯಾಪಕ ಬೆಂಬಲ ಪಡೆಯಿತು.‌ ಉಳ್ಳಾಲ ತಾಲೂಕು ವ್ಯಾಪ್ತಿಯ ಹಲವಾರು ಸಂಘ ಸಂಸ್ಥೆಗಳ ಯುವಕರು ತಂಡಗಳಾಗಿ ಧರಣಿಯಲ್ಲಿ ಭಾಗಿಗಳಾಗಿ ನೌಷಾದ್ ಪರವಾಗಿ ಧ್ವನಿ ಎತ್ತಿದರು.
ಹನ್ನೆರಡು ಗಂಟೆಯ ಸುಮಾರಿಗೆ ಜಸ್ಟಿಸ್ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಪ್ರತಿನಿಧಿಗಳು ಧರಣಿ ಸ್ಥಳಕ್ಕೆ ಆಗಮಿಸಿ ಸಂಘಟನೆಯ ನಿಯೋಗವನ್ನು ಮಾತುಕತೆಗೆ ಆಹ್ವಾನಿಸಿದರು.

ಸಂತ್ರಸ್ತ ನೌಷಾದ್ ಜೊತೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದ ನಿಯೋಗ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ತೆರಳಿ ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಡೀನ್ ರೊಂದಿಗೆ ಬೇಡಿಕೆಯ ಕುರಿತು ಚರ್ಚಿಸಿತು. ಮಾತುಕತೆಯ ತರುವಾಯ ನೌಷಾದ್ ಕುರ್ನಾಡುಗೆ ನ್ಯಾಯಯುತ ಪರಿಹಾರ ನೀಡುವ ಕುರಿತು ತೀರ್ಮಾನಕ್ಕೆ ಬರಲು ಆಡಳಿತ ಮಂಡಳಿಗೆ ಒಂದು ವಾರದ ಸಮಯಾವಕಾಶ ನೀಡುವಂತೆ ವಿನಂತಿಸಿತು. ಅದಕ್ಕೆ ಒಪ್ಪಿಗೆ ಸೂಚಿಸಿದ ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ಒಂದು ವಾರಗಳ ಕಾಲ ಹೋರಾಟವನ್ನು ತಡೆಹಿಡಿಯುವುದಾಗಿ ಘೋಷಿಸಿ ಮಧ್ಯಾಹ್ನ 2:30 ಗಂಟೆಗೆ ಧರಣಿಯನ್ನು ಮುಕ್ತಾಯಗೊಳಿಸಿತು.

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಧರಣಿಯನ್ನು ಉದ್ಘಾಟಿಸಿ,ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ಸಿಪಿಐ ಮುಖಂಡ ವಿ ಕುಕ್ಯಾನ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ರೈತಸಂಘದ ಕೃಷ್ಣಪ್ಪ ಸ ಸಾಲ್ಯಾನ್, ದಲಿತ ಸಂಘರ್ಷ ಸಮಿತಿಯ ಎಂ ದೇವದಾಸ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್ ಧರಣಿಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಸಂತೊಷ್ ಬಜಾಲ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಝೀಝ್ ಮಲಾರ್, ಎಐವೈಎಫ್,ಡಿವೈಎಫ್ಐ ಮುಖಂಡರು,ಸಮಾನ ಮನಸ್ಕ ಸಂಘಟನೆಗಳ ಮುಖಂಡರು, ಎಸ್ಎಫ್ಐ ಜಿಲ್ಲಾ ಮುಖಂಡರುಉಪಸ್ಥಿತರಿದ್ದರು.