ತಿಂಗಳ ಕಾಲ ಬಂಟ್ವಾಳದಲ್ಲೇ ಬೀಡು ಬಿಟ್ಟು ಶಂಕಿತರನ್ನು ಬಂಧಿಸಿದ ಎನ್‌ಐಎ

ಕರಾವಳಿ

ಬರೋಬ್ಬರಿ 25 ಕೋಟಿ ವರ್ಗಾವಣೆ.ಇನ್ನೂ ಹಲವರ ಬಂಧನ ಸಾಧ್ಯತೆ.

ಪಟ್ನಾದ ಪುಲ್ವಾರಿ ಶರೀಫ್ ನಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗೆ ಬಹುರಾಜ್ಯ ಹವಾಲಾ ಜಾಲದ ಮೂಲಕ ಹಣಕಾಸು ನೆರವು ಒದಗಿಸಿದ್ದ ಆರೋಪಿಗಳನ್ನು ಸೆರೆಹಿಡಿಯುವುದಕ್ಕಿಂತ 20 ದಿನ ಮೊದಲೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶಂಕಿತರ ಮೇಲೆ ತೀವ್ರ ನಿಗಾ ಇರಿಸಿ ಎಲ್ಲ ರೀತಿಯ ಸಾಕ್ಷ್ಯಗಳನ್ನು ಸಂಗ್ರಹಿಸಿಕೊಂಡೇ ಕಾರ್ಯಾಚರಣೆಗೆ ಇಳಿದಿದ್ದರು ಎಂಬುದು ಈಗ ಬಹಿರಂಗವಾಗಿದೆ. ಎನ್‌ಐಎದ ಅಧಿಕಾರಿಗಳು ಬಂಟ್ವಾಳ ನಂದಾವರದ ಮೂವರನ್ನು ಈಗಾಗಲೇ ಬಂಧಿಸಿ ಪಟ್ನಾಕ್ಕೆ ಕರೆದೊಯ್ದಿದ್ದಾರೆ. ಪುಲ್ವಾರಿ ಶರೀಫ್ ಭಯೋತ್ಪಾದಕ ಚಟುವಟಿಕೆಯ ಆರೋಪಿಯ ಖಾತೆಗೆ ಬಂಟ್ವಾಳ ಭಾಗದಿಂದ ಹಣ ಸಂದಾಯವಾಗುತ್ತಿರುವ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳಕ್ಕೆ ಬಂದಿದ್ದ ಎನ್‌ಐಎ ತಂಡ ಇಲ್ಲೇ ಬೀಡು ಬಿಟ್ಟು ಹಲವು ತಂತ್ರಗಾರಿಕೆಯ ಮೂಲಕ ಶಂಕಿತರನ್ನು ಮಟ್ಟ ಹಾಕಿದೆ. ಎನ್‌ಐಎ ಅಧಿಕಾರಿಗಳು ಬಂಟ್ವಾಳದಲ್ಲಿ ತಂಗಿದ್ದು ಸ್ಥಳೀಯ ಪೊಲೀಸರಿಗೂ ಗೊತ್ತಿರಲಿಲ್ಲ.

ಶಂಕಿತರು ಬಹಳ ಎಚ್ಚರಿಕೆಯಿಂದ ಹಣ ವರ್ಗಾವಣೆ ಮಾಡುತ್ತಿದ್ದ ಕಾರಣ ಪ್ರಾರಂಭದಲ್ಲಿ ಇವರೇ ಆರೋಪಿಗಳು ಎಂಬ ನಿಖರ ಮಾಹಿತಿ ಇರಲಿಲ್ಲ. ಹಲವು ದಿನಗಳ ಕಾಲ ಅವರ ಚಲನ ವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ ಎನ್‌ಐಎ ಅಧಿಕಾರಿಗಳ ತಂಡ ಅಗತ್ಯವಾದ ಎಲ್ಲ ರೀತಿಯ ಸಾಕ್ಷ್ಯಗಳನ್ನು ಕಲೆ ಹಾಕಿದ ಬಳಿಕವೇ ಅವರನ್ನು ಬಂಧಿಸಿ ಕರೆದೆೊಯ್ದಿದ್ದಾರೆ.ಮಾ. 5ರಂದು ಅಧಿಕೃತ ದಾಳಿ ನಡೆಸಿದ್ದರೂ ಎನ್‌ಐಎ ತಂಡ ಮಾಹಿತಿ ಕಲೆ ಹಾಕುವ ದೃಷ್ಟಿಯಿಂದ ಹಲವು ದಿನಗಳ ಹಿಂದೆಯೇ ಬಂಟ್ವಾಳ ನಂದಾವರಕ್ಕೆ ಆಗಮಿಸಿತ್ತು. ಪ್ರಮುಖ ಶಂಕಿತರ ಚಲನವಲನದ ಮೇಲೆ ಕೂಲಂಕಷ ನಿಗಾ ಇರಿಸುವ ಜತೆಗೆ ಅವರಿಗೆ ನೆರವು ನೀಡುತ್ತಿರುವವರ ಕುರಿತು ಕೂಡ ಪೂರ್ಣ ವಿವರ ಸಂಗ್ರಹಿಸಿತ್ತು.ಕೈಕಂಬದ ಸುತ್ತ ಮುತ್ತಲಿನ ಪರಿಸರಕ್ಕೂ ಅಧಿಕಾರಿಗಳು ತನಿಖೆಗೆ ಬಂದಿದ್ದರು ಎಂಬ ಗುಮಾನಿ ಇದೆ.ಈ ಪ್ರಕರಣದಲ್ಲಿ ಬಂಧಿತರು ಮಾತ್ರ ಆರೋಪಿಗಳೇ ಅಥವಾ ಇನ್ನೂ ಹಲವರು ಇದ್ದಾರೆಯೇ ಎಂಬ ಮಾಹಿತಿಯನ್ನು ಅಧಿಕಾರಿಗಳು ಗೌಪ್ಯವಾಗಿರಿಸಿದ್ದಾರೆ.

ಎನ್‌ಐಎ ತಂಡ ಹಲವು ದಿನಗಳ ಮುಂಚಿತವಾಗಿಯೇ ಬಂದು ಮೆಲ್ಕಾರ್‌, ನಂದಾವರ ಭಾಗದಲ್ಲಿ ಠಿಕಾಣಿ ಹೂಡಿದ ಪರಿಣಾಮ ಪ್ರಕರಣದ ಶಂಕಿತರ ಪೂರ್ಣ ವಿವರ ಸಂಗ್ರಹಿಸಲು ಸಾಧ್ಯವಾಗಿದ್ದು, ತಮ್ಮ ಅಕ್ರಮ ಚಟುವಟಿಕೆಗಳನ್ನು ಎನ್‌ಐಎ ಗಮನಿಸುತ್ತಿದೆ ಎಂಬ ಸಣ್ಣ ಸುಳಿವು ಕೂಡ ಶಂಕಿತರಿಗೆ ಲಭಿಸದಂತೆ ಕಾರ್ಯಾಚರಣೆ ನಡೆಸಲಾಗಿದೆ.ಬಿಹಾರದ ಪಟ್ನಾದ ಫುಲ್ವಾರಿ ಶರೀಫ್ ನಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗೆ ಸಂಬಂಧಿಸಿ ಬಂಟ್ವಾಳದ ನಂದಾವರ, ಪುತ್ತೂರು ಮತ್ತು ಮಂಜೇಶ್ವರದಿಂದ ರಾಷ್ಟ್ರೀಯ ತನಿಖಾ ದಳ ಮಾ. 5ರಂದು ಬಂಧಿಸಿರುವ ಶಂಕಿತರ ಖಾತೆಯಿಂದ ಭಯೋತ್ಪಾದಕರಿಗೆ ಬರೋಬ್ಬರಿ 25 ಕೋ.ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದ್ದು ಈ ಜಾಲದಲ್ಲಿ ಇನ್ನೂ ಅನೇಕರ ಹೆಸರು ಕೇಳಿ ಬರುತ್ತಿದ್ದು ಎನ್ಐಎಯಿಂದ ಬಂಧನ ಸಾಧ್ಯತೆ ಇದೆ.