ದ.ಕ ಜಿಲ್ಲೆಯ 4 ಸ್ಥಾನಗಳಿಗೆ ಕಾಂಗ್ರೆಸ್ ನಿಂದ ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮ.!

ಕರಾವಳಿ

ಮೊದಲ ಪಟ್ಟಿಯಲ್ಲಿ ಘೋಷಣೆ ಸಾಧ್ಯತೆ| ಯಾರ್ಯಾರು ಗೊತ್ತಾ.?

ಈ ಬಾರಿ ರಾಜ್ಯದಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲು ನಾನಾ ಕಸರತ್ತಿನಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷ ಚುನಾವಣೆಗೆ ಎರಡು ತಿಂಗಳ ಮುನ್ನವೇ 100 ಕ್ಕೂ ಅಧಿಕ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾಡಲು ಎಲ್ಲಾ ಸಿದ್ಧತೆ ನಡೆಸಿದೆ. ಲಭ್ಯವಾದ ಮಾಹಿತಿ ಪ್ರಕಾರ ಮಾರ್ಚ್ 20 ರೊಳಗೆ ನೂರಕ್ಕೂ ಅಧಿಕ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾಡಲಿದ್ದು, ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಪಟ್ಟಿಯನ್ನು ಹೈಕಮಾಂಡ್ ಗೆ ರವಾನಿಸಲಾಗಿದೆ ಅನ್ನುವ ಮಾಹಿತಿ ಇದೆ.

ರಾಜ್ಯದಲ್ಲಿ ನೂರಕ್ಕೂ ಅಧಿಕ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದು ಚುನಾವಣಾ ತಯಾರಿಗೆ ಮುನ್ನುಡಿ ಬರೆಯಲು ಮುಂದಾಗಿದೆ. ಕಾಂಗ್ರೆಸ್ ಗೆ ಗೆಲುವಿನ ಸಾಧ್ಯವಿರುವ, ಪಕ್ಷದಲ್ಲಿ ಬಂಡಾಯಕ್ಕೆ ಅವಕಾಶವಿಲ್ಲದ ಕ್ಷೇತ್ರಗಳನ್ನು ಮೊದಲ ಪಟ್ಟಿಯಲ್ಲಿ ಸೇರಿಸಿ ಘೋಷಿಸುವ ತೀರ್ಮಾನಕ್ಕೆ ಬರಲಾಗಿದೆ ಅನ್ನುವ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಮೂರು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಮೊದಲ ಪಟ್ಟಿ ಘೋಷಣೆ ಸದ್ಯದಲ್ಲೇ ನಡೆಯಲಿದೆ.

ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನ ಮೊದಲ ಪಟ್ಟಿಯಲ್ಲಿ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಪಕ್ಕಾ ಆಗಿರುವುದು ತಿಳಿದುಬಂದಿದೆ.

ಸುಳ್ಯ ಮೀಸಲು ಕ್ಷೇತ್ರದಿಂದ ಕಳೆದ ಎರಡು ವರ್ಷಗಳಿಂದ ಕ್ಷೇತ್ರಾದ್ಯಂತ ಪ್ರಚಾರಗಳಲ್ಲಿ ತೊಡಗಿರುವ ಉದ್ಯಮಿ ನಂದಕುಮಾರ್ ಅವರ ಹೆಸರು ಅಂತಿಮವಾಗಿದೆ ಅನ್ನುವುದು ತಿಳಿದುಬಂದಿದೆ. ಇನ್ನೂ ಪುತ್ತೂರಿನಲ್ಲಿ ಒಡೆದ ಮನೆಯಂತಾದ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಸದ್ಯಕ್ಕೆ ತಹಬಂದಿಗೆ ಬಂದಿದ್ದು ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿರುವ ಅಶೋಕ್ ಕುಮಾರ್ ರೈ ಹೆಸರು ಅಂತಿಮಗೊಂಡಿದೆ. ಮಂಗಳೂರು (ಉಳ್ಳಾಲ) ಕ್ಷೇತ್ರದಿಂದ ಹಾಲಿ ಶಾಸಕ ಯು.ಟಿ ಖಾದರ್, ಬಂಟ್ವಾಳದಿಂದ ರಮಾನಾಥ ರೈ ಹೆಸರು ಅಂತಿಮಗೊಳಿಸಲಾಗಿದೆ. ಈ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡುವುದು ಬಹುತೇಕ ಪಕ್ಕಾ ಆಗಿದೆ.

ಉಳಿದಂತೆ ಬೆಳ್ತಂಗಡಿ, ಮೂಡುಬಿದಿರೆ, ಮಂಗಳೂರು ನಗರ ಉತ್ತರ, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ಎರಡು- ಮೂರನೇ ಪಟ್ಟಿಯಲ್ಲಿ ಘೋಷಣೆಯಾಗಲಿದೆ.