ಗೌರಿ ಹತ್ಯೆಯ ತನಿಖೆ ಆರಂಭಿಸಿದ ಎಸ್ಐಟಿ,ತನ್ನ ಕಡತ ಓಪನ್ ಮಾಡಿದ್ದೇ ಮಂಡ್ಯದ ಮದ್ದೂರಿನಿಂದ.
✍️. ನವೀನ್ ಸೂರಿಂಜೆ
ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಬಗ್ಗೆ ಪ್ರಗತಿಪರರು, ಜಾತ್ಯಾತೀತರು, ಮಹಿಳಾವಾದಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಅವರ ಭಾಷಣ, ಭಾಷಣದಲ್ಲಿನ ಭಾವನಾತ್ಮಕತೆ, ತಾಳ್ಮೆ ಬಗ್ಗೆ ಉಲ್ಲೇಖಿಸುತ್ತಾ ಸುಮಲತಾ ಅವರು ಗೆಲ್ಲಬೇಕು ಎಂದು ಬಯಸುತ್ತಿದ್ದಾರೆ. ಆದರೆ ಸುಮಲತಾ ಸ್ಪರ್ಧೆಯ ಹಿಂದಿರುವ ಅಪಾಯಗಳನ್ನು ಅವರು ಮನಗಾಣುತ್ತಿಲ್ಲ.
ನಿಖಿಲ್ ಕುಮಾರಸ್ವಾಮಿ ಹಿಂದೆ ಕುಟುಂಬ ರಾಜಕಾರಣವಿದೆ ಎಂಬ ಕಾರಣವೂ ಕೂಡಾ ಸುಮಲತಾರನ್ನು ಬೆಂಬಲಿಸಲು ಮುಖ್ಯ ಕಾರಣ. ಕುಟುಂಬ ರಾಜಕಾರಣಕ್ಕಿಂತಲೂ ಸುಮಲತಾ ಅಂಬರೀಶ್ ಸ್ಪರ್ಧೆ ಮಂಡ್ಯಕ್ಕೆ ಮಾತ್ರವಲ್ಲದೆ ಕರ್ನಾಟಕಕ್ಕೆ ಅಪಾಯವನ್ನು ತಂದೊಡ್ಡುತ್ತದೆ.
ದೂರದಲ್ಲಿ ನಿಂತು ಮಂಡ್ಯದ ರಾಜಕಾರಣವನ್ನು ನೋಡುವಾಗ ಮಹಿಳೆ, ಕುಟುಂಬ ರಾಜಕಾರಣಕ್ಕೆ ಸಡ್ಡು, ಮಹಿಳೆಯ ದೈರ್ಯ, ತಾಳ್ಮೆ, ಉತ್ತರ ನೀಡುವ ವೈಖರಿಗಳು ಬಹಳ ಚಂದವಾಗಿ ಕಾಣಿಸುತ್ತದೆ. ಮಂಡ್ಯದ ಹಳ್ಳಿ ಹಳ್ಳಿಗಳಿಗೆ ಸುತ್ತಾಡಿದರೆ, ಅಲ್ಲಿನ ಯುವಕರ ಮಾತುಗಳನ್ನು ಕೇಳಿದರೆ ಸುಮಲತಾ ಸ್ಪರ್ಧೆಯ ಅಪಾಯ ಅರಿವಾಗುತ್ತದೆ.
ಸುಮಲತಾ ಸ್ಪರ್ಧೆಯ ಹಿಂದೆ ಕಾಂಗ್ರೆಸ್ ನ ಒಂದಷ್ಟು ನಾಯಕರು ಇದ್ದರೆ ಕೋಮುಸಂಘಟನೆಗಳ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸಂಘಪರಿವಾರದ ರಾಜಕೀಯ ಘಟಕವಾದ ಬಿಜೆಪಿಗೆ ಮಂಡ್ಯದಲ್ಲಿ ಜೆಡಿಎಸ್ ಅನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಗೊತ್ತಾಗಿಯೇ ಅದು ಸುಮಲತಾ ಹಿಂದೆ ಅಡಗಿ ಕುಳಿತು ರಾಜಕಾರಣ ಮಾಡುತ್ತಿದೆ. ಇಂಡಿಯಾಕ್ಕೆ ಮೋದಿ, ಮಂಡ್ಯಕ್ಕೆ ಸುಮಲತಾ ಅನ್ನುತ್ತಾರೆ ಕೋಮುಸಂಘಟನೆಗಳ ಕಾರ್ಯಕರ್ತರು.
ಒಮ್ಮೆ ದೇವೇಗೌಡರ ಕುಟುಂಬ ಅಥವಾ ಜೆಡಿಎಸ್ ಮುಷ್ಠಿಯಿಂದ ಮಂಡ್ಯ ಕೈ ಜಾರುವುದಕ್ಕಾಗಿ ಕೋಮು ಪರಿವಾರ ಕಾಯುತ್ತಿದೆ.
ಕರ್ನಾಟಕದ ಕರಾವಳಿ ಭಾಗದಲ್ಲಿ ಬಿಲ್ಲವರು, ಬಂಟರು ಪರಿವಾರದಿಂದ ದೂರವಾಗುತ್ತಿದ್ದಂತೆ ಮಂಡ್ಯದ ಒಕ್ಕಲಿಗ ಯುವಕರನ್ನು ಅದು ಟಾರ್ಗೆಟ್ ಮಾಡಿಕೊಂಡಿದೆ. ಹಿಂದುತ್ವಕ್ಕೆ ಕಾಲಾಳುಗಳು ಬೇಕಾಗಿದೆ. ಜೈಲಿಗೆ ಹೋಗಲು ಕಟ್ಟುಮಸ್ತಿನ ಯುವಕರು ಬೇಕಾಗಿದ್ದಾರೆ. ಅವರನ್ನು ಮಂಡ್ಯ ರಾಜಕಾರಣದ ಮೂಲಕ ಪರಿವಾರ ಅರಸುತ್ತಿದೆ ಎನ್ನುವುದು ಸ್ಪಷ್ಟ.
ಗೌರಿ ಹತ್ಯೆಯ ಹಿನ್ನಲೆಯಲ್ಲಿ ತನಿಖೆ ಆರಂಭಿಸಿದ ಎಸ್ ಐಟಿ, ತನ್ನ ಕಡತ ಓಪನ್ ಮಾಡಿದ್ದೇ ಮಂಡ್ಯದ ಮದ್ದೂರಿನಿಂದ. ಅದರರ್ಥ ನಾವ್ಯಾರೂ ಊಹಿಸದೇ ಇರುವ ಮಂಡ್ಯದಲ್ಲಿ ಹಿಂದುತ್ವ ಜಾರಿ ಮಾಡುವ ಸಂಘಟನೆಗಳು ಸಕ್ರೀಯವಾಗಿದೆ ಎಂದು !.
ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ರೈತ ಹೋರಾಟ, ಅಭಿವೃದ್ದಿ, ನೀರಾವರಿ ಹೋರಾಟದ ರಾಜಕಾರಣವೇ ಮಂಡ್ಯ ರಾಜಕಾರಣದ ನಿರ್ಣಾಯಕ ವಿಷಯಗಳಾಗಿತ್ತು. ಆದರೆ ಈ ಬಾರಿ ಮಾತ್ರ ಭಾವನಾತ್ಮಕ ವಿಷಯಗಳು ಚುನಾವಣೆಯ ವಿಷಯವಾಗಿದೆ. ಕೋಮುಶಕ್ತಿಗಳು ರಾಜಕೀಯ ನೆಲೆ ಕಂಡುಕೊಳ್ಳಲು ಸುಮಲತಾ ಅವರನ್ನು ವ್ಯವಸ್ಥಿತವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಬಿಜೆಪಿ ಇನ್ನೂ ಯಾಕೆ ಮಂಡ್ಯಕ್ಕೆ ಅಭ್ಯರ್ಥಿಯನ್ನು ಘೋಷಿಸಿಲ್ಲ. ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಕೊನೇ ಕ್ಷಣದಲ್ಲಿ ಅಸಮರ್ಥ ಅಭ್ಯರ್ಥಿಯನ್ನೇ ಬಿಜೆಪಿ ಕಣಕ್ಕಿಳಿಸಲಿದೆ. ನಮಗೆ ಜೆಡಿಎಸ್ ಸೋಲಿಸುವುದು ಮುಖ್ಯ ಎಂದು ಬಿಜೆಪಿಯ ಹಲವು ನಾಯಕರು ಈ ಬಗ್ಗೆ ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ.
ಹೌದು. ಸುಮಲತಾರವರ ಭಾಷಣ, ಅವರು ಬಳಸುವ ಭಾಷೆ ಎಲ್ಲವೂ ಚೆನ್ನಾಗಿದೆ. ಆದರೆ ಜೆಡಿಎಸ್ ಕೈಯಿಂದ ಮಂಡ್ಯವನ್ನು ಕೋಮುಶಕ್ತಿಗಳಿಗೆ ನೀಡಲು ಸುಮಲತಾರ ಸ್ಪರ್ಧೆಯನ್ನು ಸೇತುವಾಗಿ ಹಿಂದುತ್ವ ಪರಿವಾರ ತೆರೆಮರೆಯಲ್ಲಿ ಬಳಸುತ್ತಿದೆ. ಮಂಡ್ಯಕ್ಕೆ ಆವರಿಸುತ್ತಿರುವ ಕೋಮು ಶಕ್ತಿಗಳ ಬಗ್ಗೆ ಸುಮಲತಾರವರು ಒಂದೇ ಒಂದು ವಾಕ್ಯದ ಹೇಳಿಕೆ ನೀಡಿದರೆ ಸುಮಲತಾ ಸುತ್ತ ಇರುವ ಗುಂಪು ಕರಗಲಾರಂಬಿಸುತ್ತದೆ. ಬೇಕಿದ್ದರೆ ಸುಮಲತಾರವರು ಒಮ್ಮೆ ಪ್ರಯೋಗ ಮಾಡಿ ನೋಡಲಿ.
ಆದ್ದರಿಂದ ಸುಮಲತಾರಿಗೆ ಬೆಂಬಲಿಸುವ ಮುನ್ನ ಮಂಡ್ಯವನ್ನು ಪ್ರಯೋಗಾಲಯ ಮಾಡಲು ಹೊರಡುತ್ತಿರುವ ಕೋಮುಶಕ್ತಿಗಳು ಅವರ ಹಿಂದಿರುವುದರ ಬಗ್ಗೆ ಅರಿವು ಹೊಂದಿರಬೇಕಾಗುತ್ತದೆ.