ಸುರತ್ಕಲ್: ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ಇಂದು ಕಾನ ಜಂಕ್ಷನ್ ಬಳಿ ಡಿವೈಎಫ್ಐ ಮತ್ತು ಆಟೋರಿಕ್ಷಾ ಚಾಲಕರ ಸಂಘ ಜಂಟಿಯಾಗಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿತು.
ಜನರ ಹೋರಾಟದಿಂದ ಮೇಲ್ದರ್ಜೆಗೇರಿದ್ದ ಸುರತ್ಕಲ್-ಕಾನ-ಬಾಳ ರಸ್ತೆಯ ಅಭಿವೃದ್ಧಿ ಕಾರ್ಯವು ಕಾನ ಜಂಕ್ಷನ್ ವರೆಗೆ ಮಾತ್ರ ಕಾಂಕ್ರಿಟಿಕರಣ ಆಗಿದ್ದು ಕಾನ ದಿಂದ ಬಾಳ, MRPL ಮುಖ್ಯ ದ್ವಾರದ ವರೆಗಿನ 1.75ಕಿಮೀ ರಸ್ತೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ ಇದರಿಂದಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ, ರಸ್ತೆಯ ಅಪೂರ್ಣ ಕಾಮಗಾರಿಯಿಂದ ಪರಿಸರದಲ್ಲಿ ಧೂಳು ಹರಡಿ ಜನರ ಆರೋಗ್ಯಕ್ಕೆ ತೊಂದರೆ ಆಗುತ್ತಿದೆ. ಅಂಗನವಾಡಿಯ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿ ಅಂಗನವಾಡಿ ಕೇಂದ್ರ ಮುಚ್ಚುವ ಸ್ಥಿತಿಗೆ ತಲುಪಿದೆ. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಂಡು ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಒಂದು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಎಚ್ಚರಿಸಿದರು.
ಡಿವೈಎಫ್ಐ ನಗರ ಉಪಾಧ್ಯಕ್ಷ ಶ್ರೀನಾಥ್ ಕುಲಾಲ್, ಆಟೋ ರಿಕ್ಷಾ ಚಾಲಕರ ಸಂಘದ ಮುಖಂಡ ಗಣೇಶ್ ಪ್ರೇಮ್ ನಗರ ಪ್ರತಿಭಟನೆಯಲ್ಲಿ ಮಾತನಾಡಿದರು.
ಡಿವೈಎಫ್ಐ ಮುಖಂಡರಾದ ಸಾದಿಕ್ ಕಿಲ್ಪಾಡಿ,ಮುಸ್ತಫಾ ಅಂಗರಗುಂಡಿ, ನವಾಜ್ ಕುಳಾಯಿ, ಮಕ್ಸೂದ್ ಬಿಕೆ, ಐ ಮೊಹಮ್ಮದ್, ರಫೀಕ್ ಸ್ಟಾರ್, ಹುಸೈನ್ ಬಾಳ, ಸೈಫರ್ ಆಲಿ ಚೊಕ್ಕಬೆಟ್ಟು, ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಮೊಹಮ್ಮದ್ ಶರೀಫ್ ಕಾನ, ಸಾಮಾಜಿಕ ಮುಂದಾಳುಗಳಾದ ಜಗದೀಶ್ ಕಾನ, ಫ್ರಾನ್ಸಿಸ್, ಮೆಹಬೂಬ್ ಖಾನ್, ಆಟೋ ರಿಕ್ಷಾ ಚಾಲಕರ ಸಂಘದ ಹಂಝ ಮೈಂದಗುರಿ ಮುಂತಾದವರು ಉಪಸ್ಥಿತರಿದ್ದರು.