ಬಿಜೆಪಿ ಹಿಂದೂಗಳ ಧಾರ್ಮಿಕ ನಂಬಿಕೆಯಾದ ದೈವಗಳನ್ನು ಓಟು ಬ್ಯಾಂಕಾಗಿ ಪರಿವರ್ತಿಸಿದೆ.

ರಾಜ್ಯ

ಬಿಜೆಪಿಗರ ಧರ್ಮದ ಬಣ್ಣ ಕಳಚುತ್ತಿದೆ.ನಿರಾಣಿಯ ದೈವ ಅಪಹಾಸ್ಯ,ಗೃಹಮಂತ್ರಿಯ ಗುಳಿಗನ ಪರಿಹಾಸ್ಯ.!

ತುಳುನಾಡಿನಲ್ಲಿ ದೈವಗಳ ಬಗ್ಗೆ ಅಪಾರ ಗೌರವ, ನಂಬಿಕೆಯುಳ್ಳ ಜನರಿದ್ದಾರೆ. ಬಹುತೇಕ ಹಿಂದೂಗಳು ತುಳುನಾಡಿನಲ್ಲಿ ದೈವಗಳನ್ನು ಆರಾಧಿಸುತ್ತಾರೆ,ಗೌರವಿಸುತ್ತಾರೆ. ಇದು ತಲೆ ತಲಾಂತರಗಳಿಂದ ಬಂದ ನಂಬಿಕೆ.

ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಹಿಂದೂ ರಕ್ಷಕರು ಎಂದು ಪೋಸು ಕೊಡುವ ಸಂಘಟನೆಗಳು,ಬಿಜೆಪಿ ಪಕ್ಷ ,ಹಿಂದೂಗಳ ಧಾರ್ಮಿಕ ನಂಬಿಕೆಯಾದ ದೈವಗಳನ್ನು ಓಟು ಬ್ಯಾಂಕಾಗಿ ಪರಿವರ್ತಿಸಿದೆ. ದೈವದ ಬಗ್ಗೆ ಅನ್ಯಧರ್ಮೀಯ ಕೆಲ ಕಿಡಿಗೇಡಿಗಳು ಅಗೌರವ ತೋರಿಸಿದಾಗ ಅದನ್ನೆ ದೊಡ್ಡ ಇಶ್ಯೂ ಮಾಡಿ ಚುನಾವಣಾ ರಾಜಕೀಯ ಮಾಡುತ್ತದೆ. ಆದರೆ ಇದೆಲ್ಲ ತೋರಿಕೆಗಾಗಿ ಮಾತ್ರ ಕಾಣುತ್ತಿದೆ. ಯಾಕೆಂದರೆ ಸದನದಲ್ಲಿ ಅವಳಿ ಜಿಲ್ಲೆಯ ಡಜನ್ ಗಟ್ಟಲೆ ಬಿಜೆಪಿ ಶಾಸಕರಿದ್ದರೂ, ಬಿಜೆಪಿಯ ಕೆಲವು ಶಾಸಕರು ಕರಾವಳಿ ಹಿಂದೂಗಳ ಧಾರ್ಮಿಕ ನಂಬಿಕೆಯಾಗಿರುವ ದೈವಗಳನ್ನು ಹಾಸ್ಯದ ರೂಪದಲ್ಲಿ ಚಿತ್ರಿಸುತ್ತಿದ್ದರೂ,ಅಪಹಾಸ್ಯ ಮಾಡಿದರೂ ಆ ಬಗ್ಗೆ ಇಲ್ಲಿನ ಸಂಘಿಗಳು,ಬಿಜೆಪಿಗರು,ತುಟಿಬಿಚ್ಚುತ್ತಿಲ್ಲ. ‘ಹಿಂದೂ ನಾವೆಲ್ಲ ಒಂದು’ ಅನ್ನುವ ಬಿಜೆಪಿ, ಪರಿವಾರದ ಸಂಘಟನೆಗಳು ಬಿಜೆಪಿ ಶಾಸಕರೇ ತುಳುನಾಡಿನ ದೈವಗಳನ್ನು ಅವಹೇಳನಗೊಳಿಸುತ್ತಿದ್ದರೂ ಕನಿಷ್ಠ ಪಕ್ಷ ಧ್ವನಿ ಎತ್ತಲು ಸಾಧ್ಯವಾಗುತ್ತಿಲ್ಲ ಅಂದಾದರೆ ಇವರದ್ದು ದೈವದ ಮೇಲೆ ಬೂಟಾಟಿಕೆಯ ಪ್ರೇಮವಲ್ಲವೇ..? ಜಾತ್ರೆಗಳಲ್ಲಿ ಅನ್ಯಧರ್ಮೀಯರು ಹೊಟ್ಟೆ ಪಾಡಿಗಾಗಿ ಸ್ಟಾಲ್ ಇಟ್ಟರೆ ಮುಗಿದುಬೀಳುವ ಮತೀಯವಾದಿಗಳು ತಮ್ಮವರೇ ದೈವದ ಬಗ್ಗೆ ಹಾಸ್ಯದ ವಸ್ತುವನ್ನಾಗಿಸಿದಾಗ ಇವರ ಧರ್ಮ ಏಕೆ ಜಾಗೃತಗೊಳ್ಳುತ್ತಿಲ್ಲ.? ಖಂಡಿತ ಕರಾವಳಿಯ ತುಳುವರು ಇಂತಹ ಇಬ್ಬಂದಿತನಕ್ಕೆ ಸೂಕ್ತ ಉತ್ತರ ಕೊಡುವ ಕಾಲ ಕೂಡಿಬಂದಿದೆ.

ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಮುರುಗೇಶ್ ನಿರಾಣಿಯವರು ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯಲ್ಲಿ, ತಾವು ಪ್ರತಿನಿಧಿಸುತ್ತಿರುವ ಬೀಳಗಿ ಕ್ಷೇತ್ರದ ಜನರ ಮನೋರಂಜನೆಗಾಗಿ ಕರಾವಳಿಯ ಭೂತಾರಾದನೆಯನ್ನು ಅಪಹಾಸ್ಯ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಕೆಲವು ವರ್ಷಗಳ ಹಿಂದೆ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ವಾಟ್ಸಪ್ ಸಂದೇಶ ಕಳುಹಿಸಿದ್ದ ಮುರುಗೇಶ್ ನಿರಾಣಿಯವರ ವಿರುದ್ದ ಎಫ್‌ಐಆರ್ ದಾಖಲಾಗಿತ್ತು. ಇದೀಗ ಅದೇ ರೀತಿಯಲ್ಲಿ ತಮ್ಮ ಕ್ಷೇತ್ರದ ಜನರ ಮನೋರಂಜನೆಗಾಗಿ ಭೂತ ಕೋಲ, ದೈವ ನರ್ತನದ ಹಾಸ್ಯ ಕಾರ್ಯಕ್ರಮ ಕೈಗೊಂಡಿರುವುದು ಖಂಡನಾರ್ಹ.ನಿರಾಣಿಯವರ ಬೆಂಬಲಿಗರನ್ನು ರಂಜಿಸುವ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಂದಾಯ ಸಚಿವ ಆರ್.ಅಶೋಕ್ ಕೂಡಾ ನಿರಾಣಿಯವರಿಗೆ ಸಾಥ್ ನೀಡಿರುವುದು ಕೋಟ್ಯಾಂತರ ಹಿಂದೂಗಳ ಪಾಲಿಗೆ ನೋವುಂಟು ಮಾಡಿದೆ.

ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅಸಹನೆಯಿಂದ ಸಭೆಯಲ್ಲಿ ತುಳುನಾಡಿನ ಜನರ ಆರಾಧ್ಯ ದೈವ ಗುಳಿಗನ ಬಗ್ಗೆ ಅಪಹಾಸ್ಯ ಮಾಡಿ ಮಾತನಾಡಿದ್ದು,ದೈವಾರಾಧಕರು ಮತ್ತು ನಾಟಕ ಪ್ರಿಯರು ಆಕ್ರೋಶಗೊಳ್ಳುವಂತೆ ಮಾಡಿದೆ. ಯಾವುದೋ ಗುಳಿಗೆ ಕೊಡ್ತಾರಂತೆ, ‘ಜಪಾನ್ ಗುಳಿಗೆ’ಕೊಟ್ರು ಕೊಡಬಹುದು, ಹೊಸ ಹೊಸ ನಾಟಕ ಶುರು ಮಾಡಿದ್ದಾರೆ, ಎಂದು ನಿಂದಿಸಿರುವುದು ತುಳು ನಾಡಿನ ಜನರನ್ನು ಕೆರಳಿಸಿದೆ. ಗುಳಿಗ ದೈವ ತುಳುವರ (ತೌಳವರು)ಆರಾಧ್ಯ ದೈವ. ತುಳು ಜನ ಶೃದ್ದಾ ಭಕ್ತಿಯಿಂದ ನಂಬಿಕೊಂಡಿದ್ದಾರೆ ಅ ದೈವಗಳನ್ನು.ಆ ದೈವದ ಬಗ್ಗೆ ವ್ಯಂಗ್ಯವಾಗಿ, ಅಸಹನೆಯಿಂದ, ಅಪಹಾಸ್ಯ ಮಾಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿರುವುದು ಸರಿಯಲ್ಲ. ಇತ್ತೀಚೆಗೆ ಸುರತ್ಕಲ್ ರಸ್ತೆ ಅಭಿವೃದ್ದಿ ನೆಪದಲ್ಲಿ ಸುರತ್ಕಲ್ ಬಳಿ ಮಹಮ್ಮಾಯಿ ದೇವರನ್ನು ಕೂರಿಸುವ ಮರವನ್ನು ಕಡಿದು ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಗೊಳಿಸುತ್ತಿದ್ದಾರೆ ಭರತ್ ಶೆಟ್ರರು.ಅವರು ಒಂದು ಕಡೆ ಮಸೀದಿಯನ್ನು ದೈವಗುಡಿ ಎಂದರೆ ಇನ್ನೊಂದು ಕಡೆ ಹಿಂದೂಗಳ ಧಾರ್ಮಿಕ ಕ್ಷೇತ್ರದ ಮಹಮ್ಮಾಯಿ ದೇವರನ್ನು ಕೂರಿಸುವ ಅ ಮರವನ್ನೆ ಅಭಿವೃದ್ದಿಯ ನೆಪದಲ್ಲಿ ನಾಶಪಡಿಸಿದ್ದಾರೆ.ಈ ಬಿಜೆಪಿಗರ ಹಿಂದೂ ಧರ್ಮ ಪ್ರೇಮದ ನಕಲಿ ಬಣ್ಣ ಕಳಚುತ್ತಿದೆ.ಇವರು ಧರ್ಮದ ಹೆಸರಲ್ಲಿ ರಾಜಕೀಯ ಮಾಡಿ,ಹಿಂದೂ ಧರ್ಮದ ದೈವ,ದೇವರುಗಳನ್ನು ಅಪಹಾಸ್ಯ,ನಿಂದನೆ ಮಾಡುವಂತ ಧರ್ಮ ವಿರೋದಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು,ಹಿಂದೂ ಧರ್ಮದ ಮುಗ್ದ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ.ಇದು ಬಿಜೆಪಿಗರ ಧರ್ಮ-ದಂಗಲ್ ರಾಜಕೀಯ.!

ನೀವುಗಳು ನಿಜವಾಗಿಯೂ ಆರೆಸ್ಸೆಸ್ ಸಿದ್ದಾಂತ ಒಪ್ಪುವುದೇ ಆದರೆ, ಹಿಂದೂ ಸಂಘಟನೆಗಳ ನಿಲುವುಗಳನ್ನು ಒಪ್ಪಿಕೊಳ್ಳುವುದೇ ಆದರೆ,ಬೀಳಗಿಯಲ್ಲಿ ನಿರಾಣಿಯವರು ದೈವಗಳಿಗೆ ಮಾಡಿರುವ ಅಪಹಾಸ್ಯ,ಇತ್ತೀಚೆಗೆ ಗೃಹ ಮಂತ್ರಿ ಆರಗ ಜ್ಞಾನೇಂದ್ರರವರು ಗುಳಿಗ ದೈವವನ್ನು ಮಾಡಿರುವ ಪರಿಹಾಸ್ಯ,ಈ ತಪ್ಪನ್ನು ಒಪ್ಪಿಕೊಂಡು, ಈ ಇಬ್ಬರು ಸಚಿವರುಗಳು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಕಾರಣ ಮುಖ್ಯಮಂತ್ರಿಗಳೇ ಇವರನ್ನು ವಜಾ ಮಾಡಲಿ. ಬಿಜೆಪಿಯು ನಿಜವಾಗಿಯೂ ಹಿಂದೂಗಳ ಹಿತ ಕಾಯುವ ಪಕ್ಷವೇ ಆಗಿದ್ದಲ್ಲಿ, ಹಿಂದೂ ದೇವರ ಬಗ್ಗೆ ಪದೇ ಪದೇ ಅವಹೇಳನ ಮಾಡುತ್ತಿರುವ ನಾಯಕರನ್ನು ಪಕ್ಷದಿಂದಲೇ ವಜಾ ಮಾಡಲಿ,ಎಂದು ಬಿಜೆಪಿ ಕಾರ್ಯಕರ್ತರೇ ಒತ್ತಾಯಿಸುತ್ತಿದ್ದಾರೆ‌.