ಉಳ್ಳಾಲ: ಮೆಡಿಕಲ್ ಮಾಫಿಯಾದ ರಾಜಕಾರಣಕ್ಕೆ ಭಾರೀ ಹಿನ್ನಡೆ; ದಣಿವರಿಯದ ಹೋರಾಟಗಾರ ಮುನೀರ್ ಕಾಟಿಪಳ್ಳ

ಕರಾವಳಿ

ಮೆಡಿಕಲ್ ಮಾಫಿಯಾದ ಪರ ನಿಂತ ಪ್ರಭಾವಿ ರಾಜಕಾರಣಿಗಳಿಗೆ ಮುಖಭಂಗ ; ಇದು ಜನ ಹೋರಾಟಕ್ಕೆ ಸಂದ ಗೆಲುವು.

ಕಳೆದ ಕೆಲವು ದಿನಗಳಿಂದ ಭಾರಿ ಸುದ್ಧಿಯಲ್ಲಿದ್ದ ಮೆಡಿಕಲ್ ಮಾಫಿಯಾಕ್ಕೆ ತಾರ್ಕಿಕ ಅಂತ್ಯ ಕಂಡಿದೆ. ದೇರಳಕಟ್ಟೆ ಕುರ್ನಾಡಿನ ನೌಷಾದ್ ಜಸ್ಟೀಸ್ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನ ಕರ್ತವ್ಯ ಲೋಪ,ನಿರ್ಲಕ್ಷ್ಯದಿಂದಾಗಿ ತನ್ನ ಎಡಗಾಲನ್ನು ಕಳೆದುಕೊಂಡಿದ್ದ. ಪ್ರಭಾವೀ ಆಸ್ಪತ್ರೆಯ ವಿರುದ್ಧ ಸೆಟೆದು ನಿಂತ ನೌಷಾದ್ ಪರಿಹಾರಕ್ಕಾಗಿ ಕಳೆದ ಒಂದು ವರ್ಷದಿಂದ ರಾಜಕಾರಣಿಗಳ ಕಛೇರಿ,ಮನೆ ಬಾಗಿಲು ತಟ್ಟಿದ್ದರೂ ಕೇವಲ ಭರವಸೆ ನೀಡಿ ಸಾಗ ಹಾಕಿದವರ ಸಂಖ್ಯೆಯೇ ಜಾಸ್ತಿ. ಅದೇ ರೀತಿ ಆಸ್ಪತ್ರೆ ಮಂಡಳಿ ಕೂಡ ಕಳೆದ ಒಂದು ವರ್ಷಗಳಿಂದ ನೌಷಾದ್ ನನ್ನು ವಿನಾಕಾರಣ ಅಲೆದಾಡಿಸಿತೇ ವಿನಃ ಯಾವುದೇ ಪರಿಹಾರ ಧನ ನೀಡಲಿಲ್ಲ. ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಪ್ರಭಾವಿ ರಾಜಕಾರಣಿಗಳ ಮಧ್ಯೆ ಇದ್ದ ಸಖ್ಯ ಬಡಪಾಯಿ ನೌಷಾದ್ ನನ್ನು ಬೀದಿ, ಬೀದಿಗಳಲ್ಲಿ ಅಲೆದಾಡುವಂತೆ ಮಾಡಿತು. ‘ಹಾವು ಸಾಯಲೂಬಾರದು, ಕೋಲು ಮುರಿಯಲೂಬಾರದು’ ಅನ್ನುವ ರೀತಿಯಲ್ಲಿ ನೌಷಾದ್ ನನ್ನು ಕೆಲವು ರಾಜಕಾರಣಿಗಳು ಉಪಯೋಗಿಸಿದರೆ ವಿನಃ ಪ್ರಾಮಾಣಿಕವಾಗಿ ಆತನಿಗೆ ಸಲ್ಲಬೇಕಾದ ಪರಿಹಾರ ಧನ ವಿತರಿಸುವಲ್ಲಿ ಯಾವುದೇ ಕಾಳಜಿ ವಹಿಸಲಿಲ್ಲ.

ಕಳೆದ ಒಂದು ವರ್ಷಗಳಿಂದ ಮೆಡಿಕಲ್ ಮಾಫಿಯಾದ ಘೋರ ಅನ್ಯಾಯಕ್ಕೆ ತುತ್ತಾದ ನೌಷಾದ್ ನಿಗೆ ತಾನು ಈ ಯುದ್ಧದಲ್ಲಿ ಗೆಲ್ಲಬಹುದು ಅನ್ನುವ ಆಸೆ ಮೂಡಿದ್ದು ಮುನೀರ್ ಕಾಟಿಪಳ್ಳರನ್ನು ಭೇಟಿಯಾದ ನಂತರವಷ್ಟೇ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೈನಾಮಿಕ್ ಹೋರಾಟಗಾರನಾಗಿ ಗುರುತಿಸಿಕೊಂಡವರು ಮುನೀರ್. ಯಾವುದೇ ಪಟ್ಟಭದ್ರ ಹಿತಾಸಕ್ತಿಗಳಿಗಾಗಲಿ ಬೆದರದೆ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ, ಶೋಷಿತರ ಪಾಲಿನ ಆಶಾಕಿರಣವಾಗಿದ್ದಾರೆ ಕಾಮ್ರೇಡ್ ಮುನೀರ್ ಕಾಟಿಪಳ್ಳ. ನೌಷಾದ್ ನ ದಯನೀಯ ಪರಿಸ್ಥಿತಿ ಕಂಡು ಪ್ರಭಾವೀ ಆಸ್ಪತ್ರೆಯ ಮಾಫಿಯಾದ ವಿರುದ್ಧ ಸಮರಕ್ಕಿಳಿದರು. ಸಾಮೂಹಿಕ ಧರಣಿ ನಡೆಸಿದರು. ಯಾವುದೇ ಹೋರಾಟವಿರಲಿ ಕೈ ಹಾಕಿದ್ದನ್ನು ಕೊನೆಯವರೆಗೂ ಹೋರಾಡಿ ಗೆಲ್ಲುವವರೆಗೂ ವಿರಮಿಸದ ಕಾಮ್ರೇಡ್ ಹೋರಾಟ ತಿಳಿದು ಸಾಮೂಹಿಕ ಧರಣಿ ಮಂಟಪಕ್ಕೆ ಆಸ್ಪತ್ರೆಗೆ ಸಂಬಂಧಪಟ್ಟವರು ಆಗಮಿಸಿ ಪರಿಹಾರ ನೀಡುವ ಭರವಸೆ ಕೊಟ್ಟರು. ಇದೀಗ ಆಸ್ಪತ್ರೆ ಮಂಡಳಿ ಬೃಹತ್ ಮೊತ್ತದ ಪರಿಹಾರ ಧನವನ್ನು ನೌಷಾದ್ ನಿಗೆ ಹಸ್ತಾಂತರಿಸಿದೆ.ಆ ಮೂಲಕ ದೈತ್ಯ ಮೆಡಿಕಲ್ ಮಾಫಿಯಾದ ವಿರುದ್ಧ ಹೋರಾಡಿ ಗೆಲುವು ದಕ್ಕಿಸಿಕೊಂಡಿದ್ದಾರೆ. ಇದು ಬಡಪಾಯಿಗಳ ಮೇಲೆ ದರ್ಪ ತೋರುವ ಖಾಸಗಿ ಮೆಡಿಕಲ್ ಮಾಫಿಯಾದವರಿಗೆ ಒಂದು ಪಾಠವಾಗಬೇಕಿದೆ.

ಕಾಮ್ರೇಡ್ ಮುನೀರ್ ಕಾಟಿಪಳ್ಳ ದಣಿವರಿಯದ ಯಶಸ್ವಿ ಹೋರಾಟದ ಪಟ್ಟಿಗೆ ದೇರಳಕಟ್ಟೆ ಮೆಡಿಕಲ್ ಕಾಲೇಜಿನ ವಿರುದ್ಧದ ಹೋರಾಟ ಸೇರ್ಪಡೆಯಾಗಿದೆ.ಜಿಲ್ಲೆಯ ಅಕ್ರಮ ಟೋಲ್ ಗೇಟ್ ವಿರುದ್ಧ ನಿರಂತರ ಹೋರಾಟ ನಡೆಸಿ,ಶಾಸ್ವತವಾಗಿ ಟೋಲ್ ಗೇಟನ್ನು ಮುಚ್ಚಿಸಿದ ಖ್ಯಾತಿ ಮುನೀರ್ ರಿಗೆ ಸಲ್ಲುತ್ತದೆ. ಅಲ್ಪಸಂಖ್ಯಾತರು, ಶೋಷಿತ, ದಮನಿತರ ವಿರುದ್ಧ ನಿರಂತರ ದೌರ್ಜನ್ಯ ನಡೆದಾಗ ಕೇವಲ ಪತ್ರಿಕಾಗೋಷ್ಠಿಗೆ ಮಾತ್ರ ಸೀಮಿತವಾಗದೆ ಕಡೆಯವರಿಗೂ ಅವರ ಪರ ನಿಂತು ನ್ಯಾಯ ಒದಗಿಸಿಕೊಡುವುದರಲ್ಲಿ ಮುಂಚೂಣಿ ನಾಯಕರಾಗಿದ್ದಾರೆ ಕಾಮ್ರೇಡ್ ಮನೀರ್ ಕಾಟಿಪಳ್ಳ. ದೈತ್ಯ ಎಂ ಆರ್ ಪಿ ಎಲ್,ONGC ವಿರುದ್ಧ ನಿರಂತರ ಸಮರ ಸಾರುತ್ತಾ ಧ್ವನಿ ಇಲ್ಲದವರ ಪಾಲಿಗೆ ಧ್ವನಿ ಯಾಗಿದ್ದಾರೆ. ಇಂದು ಯಾವ ರಾಜಕಾರಣಿಗಳು, ಯಾವುದೇ ಸಂಘಟನೆಗಳಿಂದ ನ್ಯಾಯ ದೊರಕದಿದ್ದರೆ ಮುನೀರ್ ಕಾಟಿಪಳ್ಳ ರ ನೇತೃತ್ವದ ಡಿವೈಎಫ್ಐ ನ್ಯಾಯ ಒದಗಿಸಿಕೊಡುತ್ತದೆ ಅನ್ನುವಲ್ಲಿಗೆ ಸ್ಥಿತಿ ತಲುಪಿದಂತೂ ಸತ್ಯ.

ಆದರೆ ಜನತೆ ಕೇವಲ ಮುನೀರ್ ಹಾಗೂ ಡಿವೈಎಫ್ಐ ಸಂಘಟನೆಯಿಂದ ಲಾಭ ಪಡೆದುಕೊಳ್ಳುತ್ತದೆ ವಿನಃ ಚುನಾವಣಾ ರಾಜಕೀಯ ವಿಷಯ ಬಂದಾಗ ನಿಜವಾದ ಜನನಾಯಕರನ್ನು ಮರೆತು ಡೋಂಗಿ,ದಗಲ್ಬಾಜಿ ರಾಜಕಾರಣಿಗಳ ಕೈ ಹಿಡಿಯುತ್ತಾರೆ ಅನ್ನುವುದೇ ದು:ಖಕರ ಸಂಗತಿ.

ಉಳ್ಳಾಲದಲ್ಲಿ ದೈತ್ಯ ಆಸ್ಪತ್ರೆಯ ಮಾಫಿಯಾದ ವಿರುದ್ಧ ಯಶಸ್ವಿ ಹೋರಾಟದ ಮುಂಚೂಣಿ ನಾಯಕರಾದ ಮುನೀರ್ ಕಾಟಿಪಳ್ಳ ರವರನ್ನು ಈ ಬಾರಿ ಉಳ್ಳಾಲ(ಮಂಗಳೂರು ಕ್ಷೇತ್ರ) ಅಥವಾ ಮಂಗಳೂರು ಉತ್ತರದಲ್ಲಿ ಕಣಕ್ಕಿಳಿಸುವ ಬಗ್ಗೆ ಸಿಪಿಎಂ ರಾಜ್ಯಮಟ್ಟದ ಸಭೆಯಲ್ಲಿ ಚರ್ಚೆ ಯಾಗುತ್ತಿದೆ.ಸ್ಥಳೀಯ ಪ್ರಭಾವಿ ರಾಜಕಾರಣಿ ಹಾಗೂ ಸಹೋದರ ಮೆಡಿಕಲ್ ಮಾಫಿಯಾದ ಪರ ನಿಂತದ್ದು ದೌರ್ಜನ್ಯಕ್ಕೊಳಗಾದ ನೌಷಾದ್ ನಿಗೆ ನ್ಯಾಯ ನಿರಾಕರಣೆ, ಅಲೆದಾಟಕ್ಕೆ ಪ್ರಮುಖ ಕಾರಣವಾಗಿತ್ತು. ಆದರೆ ಈ ಕೇಸಿನಲ್ಲಿ ಕಾಮ್ರೇಡ್ ಮುನೀರ್ ಎಂಟ್ರಿಯಿಂದ ತಬ್ಬಿಬ್ಬಾದ ಮೆಡಿಕಲ್ ಮಾಫಿಯಾ ಸ್ಥಳಿಯ ರಾಜಕಾರಣಿಯ ಮಾತನ್ನು ನಂಬದೆ ನೇರವಾಗಿ ಮುನೀರ್ ಮತ್ತವರ ತಂಡದೊಂದಿಗೆ ಮಾತುಕತೆ ನಡೆಸಿದ ಪರಿಣಾಮ ದೌರ್ಜನ್ಯ ಕ್ಕೊಳಗಾದ ವ್ಯಕ್ತಿಗೆ ಪರಿಹಾರ ಧನ ಸಿಗುವಂತಾಗಿದೆ. ಇದು ಮೆಡಿಕಲ್ ಮಾಫಿಯಾದ ಪರ ನಿಂತ ಪ್ರಭಾವೀ ರಾಜಕಾರಣಿಗಳಿಗೆ ಮುಜುಗರ ತಂದಿಟ್ಟದ್ದಂತು ಸುಳ್ಳಲ್ಲ.

ದೇರಳಕಟ್ಟೆಯಲ್ಲಿ ನಡೆದ ಸಾಮೂಹಿಕ ಧರಣಿಯ ಸಂದರ್ಭ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ ನೀಡಿದ ಭರವಸೆಯಂತೆ ನೌಷಾದ್ ಗೆ ಹೊಸ ಬದುಕು ಕಟ್ಟಲು ಸಾಧ್ಯ ಆಗಬಲ್ಲಷ್ಟು ಪರಿಹಾರ ನೀಡಿದೆ. ಸಂತ್ರಸ್ತ ನೌಷಾದ್ ಕುಟುಂಬಕ್ಕೆ ನೀಡಿರುವ ಪರಿಹಾರ ಮೊತ್ತಕ್ಕೆ ಒಪ್ಪಿಗೆ ಸೂಚಿಸಿ,ಸಮಾಧಾನ ವ್ಯಕ್ತಪಡಿಸಿದೆ.ಇದು ಜನ ಪರ ಹೋರಾಟಕ್ಕೆ ಸಂದ ಗೆಲುವು.