ಜಿಲ್ಲಾಧಿಕಾರಿಗಳ ಆದೇಶಕ್ಕೂ ಕಿಮ್ಮತ್ತು ನೀಡದ ಪಂಚಾಯತ್ ಅಧಿಕಾರಿಗಳು.!
ಆಯಾ ಸ್ಥಳೀಯ ಸಂಸ್ಥೆಗಳ ಪರವಾನಿಗೆ ಪಡೆಯದೇ ಯಾವುದೇ ರೀತಿಯ ಬ್ಯಾನರ್, ಪೋಸ್ಟರ್ ಗಳನ್ನು ಅಂಟಿಸುವಂತಿಲ್ಲ.ಪರವಾನಿಗೆ ಪಡೆಯದೇ ಬ್ಯಾನರ್ ಮತ್ತು ಪೋಸ್ಟರ್ ಗಳು ಕಂಡುಬಂದರೆ ಅವುಗಳನ್ನು ಅಂಟಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಚುನಾವಣಾಧಿಕಾರಿಗಳ ಜತೆ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದ್ದರು.
ಸದ್ಯಕ್ಕೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿಲ್ಲ,ಆದರೆ ಚಾಲ್ತಿಯಲ್ಲಿರುವ ಕಾಯ್ದೆ-ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳಿಂದ ಸೂಕ್ತ ಪರವಾನಿಗೆ ಪಡಯದೇ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್, ಬ್ಯಾನರ್ ಗಳನ್ನು ಅಳವಡಿಸುವಂತಿಲ್ಲ. ಈ ರೀತಿಯ ಅನಾಧಿಕೃತ ಪ್ರಚಾರ ಸಾಮಗ್ರಿಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ತಿಳಿಸಿದ್ದಾರೆ.ಅಲ್ಲದೆ ಮತದಾರರಿಗೆ ಆಸೆ-ಆಮಿಷವೊಡ್ಡುವಂತಹ ಉಡುಗೊರೆ, ಕೊಡುಗೆ ನೀಡುವುದು ಮತ್ತು ಸಾಮೂಹಿಕವಾಗಿ ಊಟದ ವ್ಯವಸ್ಥೆ ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು.
ಈ ರೀತಿಯ ಪ್ರಕರಗಳು ಕಂಡುಬಂದರೆ ಯಾವುದೇ ರೀತಿಯ ಮುಲಾಜಿಲ್ಲದೇ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದ್ದಾರೆ.
ಯಾವುದೇ ನಿರ್ದಿಷ್ಟ ವ್ಯಕ್ತಿಯ ಭಾವಚಿತ್ರ ಅಥವಾ ಪಕ್ಷದ ಚಿಹ್ನೆ ಹೊಂದಿರುವಂತಹ ಉಡುಗೊರೆ, ಸೀರೆ, ಕುಕರ್, ವಾಚ್ ಮತ್ತಿತರ ವಸ್ತುಗಳ ವಿತರಣೆ, ಸಾಗಾಣಿಕೆ ಹಾಗೂ ದಾಸ್ತಾನು ಕಂಡುಬಂದರೆ ಅವುಗಳನ್ನು ಕೂಡ ಚಾಲ್ತಿಯಲ್ಲಿರುವ ನಿಯಮಾವಳಿ ಅನುಸಾರ ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಬೇಕು ಎಂದು ಚುನಾವಣಾ ಆಯುಕ್ತರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಹಿನ್ನಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಅನಾಧಿಕೃತವಾಗಿ ಅಳವಡಿಸಿರುವ ಬ್ಯಾನರ್,ಫ್ಲೆಕ್ಸ್ ,ಜಾಹೀರಾತು ಮತ್ತು ಫಲಕಗಳನ್ನು ತೆರವುಗೊಳಿಸಬೇಕು. ರಾಜಕೀಯ ಪಕ್ಷಗಳ ಸಾರ್ವಜನಿಕ ಸಭೆ ಸಮಾರಂಭಗಳ ಮೇಲೆ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯದೆಯೇ ಫ್ಲೆಕ್ಸ್,ಬ್ಯಾನರ್ ಬಂಟಿಂಗ್‌ಗಳನ್ನು ಅಳವಡಿಸಿರುವುದು ಕಂಡಿಬಂದಿದೆ. ಇದು 1981ರ ಕರ್ನಾಟಕ ತೆರೆದ ಪ್ರದೇಶಗಳ (ವಿರೂಪಗೊಳಿಸುವಿಕೆ ತಡೆ) ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಸ್ಥಳೀಯ ಸಂಸ್ಥೆಗಳು ಇವುಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಡಳಿತದ ವಿರುದ್ಧ ಗಂಭೀರ ಪರಿಣಾಮಬೀರುತ್ತದೆ ಎಂದು ಅವರು ತಿಳಿಸಿದ್ದಾರೆ. ಸಂಬಂಧ ಪಟ್ಟ ಇಲಾಖೆಯ ಅನುಮತಿ ಪಡೆಯದೆಯೇ ಸಾರ್ವಜನಿಕ ಸಭೆ , ಸಮಾರಂಭಗಳು, ಸಾರ್ವಜನಿಕ ಔತಣ ಕೂಟದಂತಹ ಕಾರ್ಯಕ್ರಮ ಆಯೋಜಿಸುವುದರಿಂದ ಸಾಮಾಜಿಕ ಸ್ವಾಸ್ಥ್ಯ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಮತ್ತು ಕಾನೂನು ಸುವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ’ ಎಂದು ಅವರು ಎಚ್ಚರಿಸಿದ್ದಾರೆ.ಆದರೂ ಗಂಜಿಮಠ,ಕೈಕಂಬ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಇದೆಲ್ಲವೂ ಯಾರ ಮುಲಾಜಿಲ್ಲದೆ ರಾಜಾರೋಷವಾಗಿ ವಿರಾಜಿಸುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.