ಅಣಬೆ ಫ್ಯಾಕ್ಟರಿಯನ್ನು ಬಂದ್‌ ಮಾಡಲು ಸ್ಥಳೀಯರ ಪಟ್ಟು

ಕರಾವಳಿ

ಮಾಜಿ ಶಾಸಕ ಜೆ.ಆರ್.ಲೋಬೊ ಪಾಲುದಾರಿಕೆಯ ಒಡೆತನಕ್ಕೆ ಸೇರಿದ ಫ್ಯಾಕ್ಟರಿ.

ಅಣಬೆ ಫ್ಯಾಕ್ಟರಿಯ ದುರ್ನಾತದಿಂದ ನಮಗೆ ಬದುಕಲು ಸಾಧ್ಯವಿಲ್ಲ.ಉಬ್ಬಸ, ಕೆಮ್ಮು ರೋಗಗಳಿಗೆ ತುತ್ತಾಗುತ್ತಿದ್ದೇವೆ.ಈ ಫ್ಯಾಕ್ಟರಿಯನ್ನು ಇಲ್ಲಿಂದ ಎತ್ತಂಗಡಿ ಮಾಡಿಸಿ ಎಂದು ಮಂಗಳೂರಿನ ತಿರುವೈಲ್ ವಾರ್ಡ್‌ನ ನಾಗರಿಕರು ವೈಟ್ ಗ್ರೂವ್ ಅಗ್ರಿ ಎಲ್‌ಎಲ್‌ಪಿ ಮಶ್ರೂಮ್ ಫ್ಯಾಕ್ಟರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

ಇದು ಮಾಜಿ ಶಾಸಕ ಜೆ.ಆರ್.ಲೋಬೊ ಅವರ ಪಾಲುದಾರಿಕೆಯ ಒಡೆತನಕ್ಕೆ ಸೇರಿದ ಫ್ಯಾಕ್ಟರಿ. ಕೊರೊನಾ ಸಂದರ್ಭ ಚಾಕಲೇಟ್ ತಯಾರಕ ಸಂಸ್ಥೆ ಎಂದು ಈ ಫ್ಯಾಕ್ಟರಿಯನ್ನು ಸ್ಥಾಪಿಸಲಾಗಿತ್ತು. ಆ ಬಳಿಕ ಇಲ್ಲಿ ಅಣಬೆ ಬೆಳೆಸಲಾಗುತ್ತಿದೆ ಎಂದು ನಾಗರಿಕರಿಗೆ ತಿಳಿದು ಬಂದಿದೆ. ಈ ಫ್ಯಾಕ್ಟರಿಯಿಂದ ನಿತ್ಯವೂ ಸಂಜೆಯಾಗುತ್ತಿದ್ದಂತೆ ತಿರುವೈಲು ಸೇರಿದಂತೆ ವಾಮಂಜೂರು ವ್ಯಾಪ್ತಿಯಲ್ಲಿ ಗಬ್ಬು ವಾಸನೆ ಬರಲು ಆರಂಭವಾಗುತ್ತದೆ. ಆದ್ದರಿಂದ ಕಳೆದ ಒಂದು ವರ್ಷಗಳಿಂದ ನಾಗರಿಕರು ಹೋರಾಟ ಮಾಡುತ್ತಲೇ ಬಂದಿದ್ದಾರೆ.ಆದರೆ ಈ ಹೋರಾಟಕ್ಕೆ ಕಬೆಲೆಯೇ ಸಿಕ್ಕಿಲ್ಲ.

ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದರು.ಆದರೆ ಫ್ಯಾಕ್ಟರಿಗೆ ಬೀಗ ಜಡಿಯದೇ ನಾವು ಇಲ್ಲಿಂದ ತೆರಳೋದಿಲ್ಲ ಎಂಬ ಪ್ರತಿಭಟನಾಕಾರರ ಆಕ್ರೊಶಕ್ಕೆ ತಲೆ ಬಾಗಿದ ಅಧಿಕಾರಿಗಳು ಗೇಟ್‌ಗೆ ಬೀಗ ಜಡಿದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಫ್ಯಾಕ್ಟರಿಯ ಒಳಗಡೆ ಪರಿಶೀಲನೆ ನಡೆಸಿ, ಸಂಪೂರ್ಣ ಫ್ಯಾಕ್ಟರಿಯನ್ನು ಮುಚ್ಚಿ ದುರ್ನಾತ ಹೊರಗಡೆ ಬೀರದಂತೆ ವ್ಯವಸ್ಥೆ ಮಾಡಬೇಕು. ಅಲ್ಲಿಯವರೆಗೆ ಫ್ಯಾಕ್ಟರಿ ಸ್ಥಗಿತಗೊಳಿಸಬೇಕು ಎಂದು ಫ್ಯಾಕ್ಟರಿ ಉಸ್ತುವಾರಿಗೆ ಸೂಚನೆ ನೀಡಿದ್ದಾರೆ.ಇಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮತ್ತೆ ವಾಸನೆ ಬೀರಿದ್ದಲ್ಲಿ ಫ್ಯಾಕ್ಟರಿ ಒಳಗಡೆ ನುಗ್ಗುವುದಾಗಿ ನಾಗರಿಕರು ಎಚ್ಚರಿಕೆ ನೀಡಿದ್ದಾರೆ.