ದೂರು ನೀಡಲು ಬಂದ ಯುವತಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಪೊಲೀಸ್ ನಿರೀಕ್ಷಕರು.!

ರಾಜ್ಯ

ಇನ್‌ಸ್ಪೆಕ್ಟರ್‌ ಎನ್‌.ರಾಜಣ್ಣ ಎಂಬವರು ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ತನಿಖೆ ನಡೆಸಿದ ಈಶಾನ್ಯ ವಿಭಾಗದ ಡಿಸಿಪಿ ಬಿ.ಎಂ.ಲಕ್ಷ್ಮೀ ಪ್ರಸಾದ್‌ ನಗರ ಪೊಲೀಸ್‌ ಕಮಿಷನರ್‌ ಪ್ರತಾಪ್‌ ರೆಡ್ಡಿಗೆ ವರದಿ ಸಲ್ಲಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವೀರೇಂದ್ರ ಬಾಬು ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ಯುವತಿಯಿಂದ 15 ಲಕ್ಷ ರೂ. ಸಾಲ ಪಡೆದಿದ್ದ. ಹೀಗಾಗಿ ಸಂತ್ರಸ್ತೆ ಕೊಡಿಗೇಹಳ್ಳಿ ಠಾಣೆಗೆ ದೂರು ನೀಡಿದ್ದರು. ಆಗ ಯುವತಿಯ ಮೊಬೈಲ್‌ ನಂಬರ್‌ ಪಡೆದು ಕೊಂಡಿದ್ದ ಪಿಐ ರಾಜಣ್ಣ, ಸಂದೇಶ ಕಳುಹಿಸಲಾರಂಭಿಸಿದ್ದ. ಭೇಟಿಯಾಗೋಣ ಬಾ ಎಂದೆಲ್ಲ ಸಂದೇಶ ಕಳುಹಿಸುತ್ತಿದ್ದ. ಮಾರ್ಚ್‌ 24ರಂದು ಠಾಣೆಗೆ ಹೋಗಿದ್ದ ಸಂತ್ರಸ್ತೆಗೆ, ಠಾಣಾಧಿಕಾರಿ ಡ್ರೈ ಫ್ರೂಟ್ಸ್ ಬಾಕ್ಸ್‌ ನೀಡಿ, ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ, ಕೋಣೆಯ ಕೀ ಕೊಟ್ಟು ಒಳಗೆ ನಡೆಯುವಂತೆ ಪರೋಕ್ಷವಾಗಿ ಲೈಂಗಿಕ ಕ್ರಿಯೆಗೆ ಸಹಕಾರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಪಿಐನಿಂದ ತಪ್ಪಿಸಿಕೊಂಡಿದ್ದ ಯುವತಿ, ಕೊಠಡಿಯಿಂದ ಹೊರಬಂದು ಠಾಣೆಯಲ್ಲಿದ್ದ ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ಗೆ ವಿಷಯ ತಿಳಿಸಿದ್ದರು.

ಆದರೆ, ಪಿಐ ರಾಜಣ್ಣ ಈ ವಿಚಾರ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದು, ಅದರಿಂದ ತಮ್ಮ ಮರ್ಯಾದೆ ಹಾಳಾಗುತ್ತದೆ ಎಂದು ಹೇಳಿದ್ದರು. ಆದರೆ, ಘಟನೆಯಿಂದ ವಿಚಲಿತ ಗೊಂಡಿದ್ದ ಸಂತ್ರಸ್ತೆ ಪಿಐ ರಾಜಣ್ಣ ವಿರುದ್ಧ ಡಿಸಿಪಿಗೆ ದೂರು ನೀಡಿದ್ದರು. ಡಿಸಿಪಿ ಯಲಹಂಕ ಉಪವಿಭಾಗ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಸೂಚಿಸಿದ್ದು. ಇದೀಗ ಎಸಿಪಿ ವರದಿ ನೀಡಿದ್ದು, ಮೇಲ್ನೋಟಕ್ಕೆ ಪಿಐ ರಾಜಣ್ಣ ಯುವತಿಗೆ ಲೈಂಗಿಕ ಕಿರುಕುಳ ಹಾಗೂ ಲೈಂಗಿಕ ಕ್ರಿಯೆಗೆ ಪರೋಕ್ಷವಾಗಿ ಒತ್ತಾಯ ಮಾಡಿರುವುದು ಕಂಡು ಬಂದಿದ್ದು, ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.