ದಕ್ಷಿಣ ಕನ್ನಡದಲ್ಲಿ ಯುವಕರನ್ನು ಕಣಕ್ಕಿಳಿಸಿದ ಕಾಂಗ್ರೆಸ್.!ಇನಾಯತ್ ಅಲಿ,ಪದ್ಮರಾಜ್, ಅಶೋಕ್ ರೈಗೆ ಟಿಕೇಟ್ ಬಹುತೇಕ ಖಚಿತ.

ಕರಾವಳಿ

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ದಕ್ಷಿಣ ಕನ್ನಡದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಹಿರಿಯ ನಾಯಕರ ಬದಲಿಗೆ ಯುವಕರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಕಾಂಗ್ರೆಸ್‌ ಪಕ್ಷವು ಶನಿವಾರ ಬಿಡುಗಡೆ ಮಾಡಿದೆ.ಮೊದಲ ಪಟ್ಟಿಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಯು.ಟಿ.ಖಾದರ್‌,ಬಂಟ್ವಾಳ ಕ್ಷೇತ್ರದಲ್ಲಿ ಹಿರಿಯ ನಾಯಕ ಬಿ.ರಮಾನಾಥ ರೈ,ಮೂಲ್ಕಿ–ಮೂಡುಬಿದಿರೆ ಕ್ಷೇತ್ರಕ್ಕೆ ಮಿಥುನ್ ರೈಗೆ ಟಿಕೆಟ್‌ ಹಂಚಿಕೆ ಮಾಡಲಾಗಿದೆ.ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಕೃಷ್ಣಪ್ಪ ಬಿ. ಹಾಗೂ ತೀವ್ರ ಕುತೂಹಲ ಕೆರಳಿಸಿದ್ದ ಬೆಳ್ತಂಗಡಿ ಕ್ಷೇತ್ರದಲ್ಲಿ ರಕ್ಷಿತ್‌ ಶಿವರಾಂ ಅವರಿಗೆ ಮೊದಲ ಪಟ್ಟಿಯಲ್ಲೇ ಟಿಕೆಟ್‌ ನೀಡಲಾಗಿದೆ.

ಮಿಥುನ್ ರೈ ಹಾಗೂ ರಕ್ಷಿತ್ ಶಿವರಾಮ್ ಇಬ್ಬರು ಯುವಕರಾಗಿದ್ದು ಮೂಡುಬಿದಿರೆ ಮತ್ತು ಬೆಳ್ತಂಗಡಿಯಿಂದ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅಭಯಚಂದ್ರ ಜೈನ್ ಮತ್ತು ವಸಂತ ಬಂಗೇರರಂತಹ ಅನುಭವಿ ನಾಯಕರ ಬದಲಿಗೆ ಯುವನಾಯಕರಿಗೆ ಕಾಂಗ್ರೆಸ್ ಮಣೆ ಹಾಕಿದೆ.ಆರಂಭದಲ್ಲಿ ರಮಾನಾಥ್ ರೈ ಅವರಿಗೆ ಟಿಕೆಟ್ ನೀಡದಿರುವ ಕುರಿತು ಚಿಂತನೆ ನಡೆಸಿದ್ದು, ಆದರೆ, ಇದು ನನ್ನ ಕೊನೆಯ ಚುನಾವಣೆ ಎಂದು ರಮಾನಾಥ ರೈ ಅವರು ಘೋಷಿಸಿದ ಹಿನ್ನೆಲೆಯಲ್ಲಿ ಕೊನೆಯ ಸಮಯದಲ್ಲಿ ಈ ನಿರ್ಧಾರವನ್ನು ಬದಲಿಸಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿದುಬಂದಿದೆ.

2ನೇ ಸುತ್ತಿನಲ್ಲಿ ಪದ್ಮರಾಜ್ ಆರ್ (ಮಂಗಳೂರು ದಕ್ಷಿಣ), ಇನಾಯತ್ ಅಲಿ (ಉತ್ತರ) ಮತ್ತು ಅಶೋಕ್ ರೈ (ಪುತ್ತೂರು) ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.