ಕರ್ನಾಟಕದಲ್ಲಿ ಧರ್ಮ ಆಧಾರಿತ ಮೀಸಲಾತಿಯನ್ನು ಸಮಾಪ್ತಿ ಮಾಡಲಾಗಿದೆ” ಎಂದು ಅತ್ಯಂತ ಅಹಂಕಾರ ಮತ್ತು ಗರ್ವದಿಂದ ಅಮಿತ್ ಶಾ ಇಂದು ಮಾತನಾಡಿದ್ದಾರೆ. ಶಾ ನಂತವರು ಇಂತಹ ವಿಷಯಗಳನ್ನು ಮಾತನಾಡುವಾಗ ಕನಿಷ್ಟ ಅರಿವಿರುವವರ ಸಲಹೆ ಪಡೆದು ತನಗಲ್ಲದಿದ್ದರೂ ತನಗಿರುವ ಹುದ್ದೆಗೆ ಘನತೆ, ಗೌರವ ತರುವುದನ್ನು, ಮಾನ ಮರ್ಯಾದೆ ಉಳಿಸಿಕೊಳ್ಳುವುದನ್ನಾದರೂ ರೂಢಿಸಿಕೊಳ್ಳಬೇಕು –ಸಿ.ಎಸ್.ದ್ವಾರಕಾನಾಥ್, ಹಿರಿಯ ವಕೀಲರು
“ಕರ್ನಾಟಕದಲ್ಲಿ ಧರ್ಮ ಆಧಾರಿತ ಮೀಸಲಾತಿಯನ್ನು ಸಮಾಪ್ತಿ ಮಾಡಲಾಗಿದೆ” ಎಂದು ಅತ್ಯಂತ ಅಹಂಕಾರ ಮತ್ತು ಗರ್ವದಿಂದ ಅಮಿತ್ ಶಾ ಎಂಬ ಅಲ್ಪ ಇಂದು ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಧರ್ಮ ಆಧಾರಿತ ಮೀಸಲಾತಿ ಎಂದೂ ಇರಲಿಲ್ಲ, ಇಂದೂ ಇಲ್ಲ ಅಂದಮೇಲೆ ಇಲ್ಲದ್ದನ್ನು ಈತ ಹೇಗೆ ಸಮಾಪ್ತಿ ಮಾಡುತ್ತಾನೆ!? ಈ ಮೂರ್ಖನಿಗೆ ಈ ವಿಷಯದ ಬಗ್ಗೆ ಕನಿಷ್ಟ ಅರಿವಾದರೂ ಇರಬೇಕಿತ್ತು. ಈತನೊಬ್ಬ ಕೇಂದ್ರದ ಪ್ರಮುಖ ಮಂತ್ರಿ, ಈ ಸರ್ಕಾರಕ್ಕೆ ಕಾನೂನು ಸಲಹೆ ನೀಡುವ ದೊಡ್ಡ ಪ್ರಮಾಣದ ಹಿರಿಯ ವಕೀಲರು ಈತನ ಹಿಂದಿದ್ದಾರೆ. ಇಡೀ ಕಾನೂನು ಮಂತ್ರಾಲಯವೇ ಈತನೊಂದಿಗೆ ಇದೆ. ಆದರೂ ಈ ಸರ್ಕಾರದ ಮಂತ್ರಿ ಬೀದಿಬದಿ ‘ಭಾಜಪ ಭಕ್ತ’ ನಂತೆ ಬಾಯಿಗೆ ಬಂದಂತೆ ಬಡಬಡಿಸುತ್ತಿದ್ದಾರೆ! ದುರಂತವೆಂದರೆ ಇಂತಹ ಮೆದುಳೇ ಇಲ್ಲದ ನಾಯಕರು ನಮ್ಮನ್ನು ಆಳುತ್ತಿದ್ದಾರೆ!
ಕರ್ನಾಟಕದಲ್ಲಿ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯವನ್ನು ಎಂದೂ ಧಾರ್ಮಿಕ ಅಲ್ಪಸಂಖ್ಯಾತರು ಎಂದು ಪರಿಗಣಿಸಲಿಲ್ಲ. 1918 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಜಸ್ಟಿಸ್ ಲೆಸ್ಲಿ ಮಿಲ್ಲರ್ ಸಮಿತಿ ರಚಿಸಿದರು. ಜಸ್ಟಿಸ್ ಮಿಲ್ಲರ್ ಅವರು ತಮ್ಮ ವರದಿ ಕೊಟ್ಟಾಗ ಕರ್ನಾಟಕದ ಜನತೆಯನ್ನು ಬ್ರಾಹ್ಮಣರು ಮತ್ತು ಅಬ್ರಾಹ್ಮಣರು ಎಂದು ವಿಭಾಗಿಸಿದರು. ಹೀಗೆ ವಿಭಾಗಿಸಿದಾಗಲೂ ಮುಸ್ಲಿಂ ಸಮುದಾಯವನ್ನು ಅಬ್ರಾಹ್ಮಣರ ಪಟ್ಟಿಯಲ್ಲಿ ಪರಿಗಣಿಸಿದರು. ಅಂದರೆ ಅಂದಿಗೆ ಇವರನ್ನು ಹಿಂದುಳಿದ ವರ್ಗಗಳು ಎಂದೇ ಕರೆಯಲಾಯಿತು.
ಆನಂತರ ಬಂದ ನಾಗನಗೌಡ ವರದಿ, ಹಾವನೂರು ವರದಿ, ವೆಂಕಟಸ್ವಾಮಿ ವರದಿ, ಜಸ್ಟಿಸ್ ಚಿನ್ನಪ್ಪರೆಡ್ಡಿ ವರದಿಗಳಲ್ಲೂ ಮುಸ್ಲಿಂ ಸಮುದಾಯವನ್ನು ‘ಹಿಂದುಳಿದ ವರ್ಗಗಳು’ ಎಂದೇ ಪರಿಗಣಿಸಲಾಯಿತು. ಅಂತೆಯೇ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ 2(b) ಯಲ್ಲಿ ಮುಂದುವರೆಸಲಾಯಿತು.
1979 ರಲ್ಲಿ ಮುಸ್ಲಿಂ ಸಮುದಾಯವನ್ನು ಧಾರ್ಮಿಕ ಅಲ್ಪಸಂಖ್ಯಾತರು ಎಂದು ಪರಿಗಣಿಸಿ ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆಯಬೇಕೆಂದು ಸೋಮಶೇಖರಪ್ಪ ಎನ್ನುವವರು ಕರ್ನಾಟಕದ ಹೈಕೋರ್ಟಿಗೆ ಹೋದರು. ಈ ಪ್ರಕರಣವನ್ನು ವಜಾ ಮಾಡಿದ ಹೈಕೋರ್ಟ್ “The fact that the Muslims are religious minority is no ground to exclude them from the list of backward classes” ಅಂತ ಅಭಿಪ್ರಾಯ ಪಡುತ್ತೆ.
ಕರ್ನಾಟಕದಲ್ಲಿ ಕೇವಲ ಮುಸ್ಲಿಮರು ಮಾತ್ರ ಹಿಂದುಳಿದ ವರ್ಗಗಳ ಪಟ್ಟಿಯಲಿಲ್ಲ, ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರವಾದ ದಲಿತ ಕ್ರೈಸ್ತರೂ ಕೂಡ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದಾರೆ.
ಮುಸ್ಲಿಂ ಮತ್ತಿತರ ಧಾರ್ಮಿಕ ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಪ್ರಮುಖ ಕಾರಣವೇನೆಂದರೆ ಅವರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂಬ ಕಾರಣಕ್ಕೇ ಹೊರತು ಆರ್ಥಿಕ ಹಿಂದುಳಿದಿರುವಿಕೆಯ ಕಾರಣಕ್ಕೆ ಅಲ್ಲ. ಆದ್ದರಿಂದಲೇ ಸಂವಿಧಾನದ ಪರಿಚ್ಚೇದ 15(4) ಮತ್ತು 16(4) ಪರಿಧಿಯಲ್ಲಿ ಮುಸ್ಲಿಂ ಮತ್ತು ಇತರೆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳು ಪರಿಗಣಿಸಲ್ಪಡುತ್ತವೆ. ಆದ್ದರಿಂದಲೇ ಹಿಂದುಳಿದ ವರ್ಗಗಳ ಆಯೋಗದ ವ್ಯಾಪ್ತಿಯಲ್ಲಿ ಈ ಸಮುದಾಯಗಳು ಬರುತ್ತವೆ. ಇದೇ ಕಾರಣಕ್ಕೆ ಸದರಿ ಆಯೋಗವನ್ನು “ಹಿಂದುಳಿದ ವರ್ಗಗಳ ಆಯೋಗ” ಎನ್ನುತ್ತಾರೆಯೇ ಹೊರತು “ಹಿಂದುಳಿದ ‘ಜಾತಿಗಳ’ ಆಯೋಗ” ಅಥವಾ “ಹಿಂದುಳಿದ ‘ಮತಗಳ’ ಆಯೋಗ” ಎನ್ನುವುದಿಲ್ಲ. ಇಂತಹ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಆರ್ಥಿಕವಾಗಿ ಹಿಂದುಳಿದವರು ಎಂದು ಹಣೆಪಟ್ಟಿ ಕಟ್ಟಿಕೊಂಡ EWS ನಲ್ಲಿ ಸೇರಿಸುವ ಮಾತನಾಡುತ್ತಿದ್ದಾರೆ. ಇದಂತೂ ಅಪ್ಪಟ ನಯವಂಚನೆಯೇ ಸರಿ.
ಅಮಿಶ್ ಶಾ ಎನ್ನುವ ಗುಜರಾತಿ ವ್ಯಾಪಾರ, ವ್ಯವಹಾರಸ್ಥರಿಗೆ ಜಾತಿಮೂಲದ ಬಡತನಕ್ಕೂ ಆರ್ಥಿಕ ಮೂಲದ ಬಡತನಕ್ಕೂ ಇರುವ ವ್ಯತ್ಯಾಸ ತಿಳಿಯಲು ಹೇಗೆ ಸಾಧ್ಯ..?
ಅಮಿತ್ ಶಾ ಅಂತವರು ಇಂತಹ ವಿಷಯಗಳನ್ನು ಮಾತನಾಡುವಾಗ ಕನಿಷ್ಟ ಅರಿವಿರುವವರ ಸಲಹೆ ಪಡೆದು ತನಗಲ್ಲದಿದ್ದರೂ ತನಗಿರುವ ಹುದ್ದೆಗೆ ಘನತೆ, ಗೌರವ ತರುವುದನ್ನು, ಮಾನ ಮರ್ಯಾದೆ ಉಳಿಸಿಕೊಳ್ಳುವುದನ್ನಾದರೂ ರೂಢಿಸಿಕೊಳ್ಳಬೇಕು.
ಸಿ.ಎಸ್.ದ್ವಾರಕಾನಾಥ್
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು.