ಚೀನಾದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ‘ಫಾಲ್‌ ಇನ್‌ ಲವ್‌’ ವೀಕ್‌ ಆಫ್:‌ ಪ್ರೀತಿಸಲು ವಾರಪೂರ್ತಿ ಕಡ್ಡಾಯ ರಜೆ.!

ಅಂತಾರಾಷ್ಟ್ರೀಯ

ಜನಸಂಖ್ಯೆ ನಿಯಂತ್ರಣದಿಂದ ಕಂಗಾಲದ ಚೀನಾ.

ಚೀನಾದಲ್ಲಿ ಜನಸಂಖ್ಯಾ ಕಾಳಜಿ ತನ್ನ ಹಂತವನ್ನು ತಲುಪಿದ್ದು, ಜನನ ಪ್ರಮಾಣವನ್ನು ಹೆಚ್ಚಿಸಲು ಅನೇಕ ತಜ್ಞರು ಸರ್ಕಾರಕ್ಕೆ ಹಲವಾರು ಶಿಫಾರಸುಗಳನ್ನು ಮಾಡಿದ್ದಾರೆ. ಇದೀಗ ಚೀನಾದ ಕೆಲವು ಕಾಲೇಜುಗಳು ಕೂಡ ಕೂಡ,ಈ ರಾಷ್ಟ್ರೀಯ ಕಾಳಜಿಯನ್ನು ಬೆಂಬಲಿಸಲು ವಿಶಿಷ್ಟವಾದ ಯೋಜನೆಯನ್ನು ಜಾರಿಗೊಳಿಸಿವೆ. ಚೀನಾದ ಒಂಬತ್ತು ಕಾಲೇಜುಗಳು ಏಪ್ರಿಲ್‌ನಲ್ಲಿ ವಿದ್ಯಾರ್ಥಿಗಳಿಗೆ “ಫಾಲ್‌ ಇನ್‌ ಲವ್” ಹೆಸರಿನ ಒಂದು ವಾರದ ರಜೆಯನ್ನು ಘೋಷಿಸಿವೆ.

ಎನ್‌ಬಿಸಿ ನ್ಯೂಸ್ ಪ್ರಕಾರ, ಫ್ಯಾನ್ ಮೇ ಎಜುಕೇಶನ್ ಗ್ರೂಪ್ ನಡೆಸುತ್ತಿರುವ ಒಂಬತ್ತು ಕಾಲೇಜುಗಳಲ್ಲಿ ಒಂದಾದ ಮಿಯಾನ್ಯಾಂಗ್ ಫ್ಲೈಯಿಂಗ್ ವೊಕೇಶನಲ್ ಕಾಲೇಜ್, ಮಾರ್ಚ್ 21 ರಂದು ವಸಂತ ವಿರಾಮವನ್ನು ಮೊದಲು ಘೋಷಿಸಿತು. ಈ ಯೋಜನೆಯನ್ವಯ ಏಪ್ರಿಲ್ 1ರಿಂದ ಏಪ್ರಿಲ್ 7ರವರೆಗೆ ಪ್ರಕೃತಿಯನ್ನು ಪ್ರೀತಿಸಲು, ಜೀವನವನ್ನು ಪ್ರೀತಿಸಲು ಮತ್ತು ಪ್ರೀತಿಯನ್ನು ಆನಂದಿಸಲು ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.ಈ ಪ್ರಯತ್ನವು ಜನನ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಉದ್ದೇಶವನ್ನು ಪೂರೈಸುವ ಪ್ರಯತ್ನವಾಗಿದೆ..” ಎಂದು ಯಾಂಗ್ ಗುವೊಹುಯಿ ತಿಳಿಸಿದ್ದಾರೆ.ಜನನ ದರವನ್ನು ಹೆಚ್ಚಿಸಲು ಚೀನಾ ಸರ್ಕಾರವು 20ಕ್ಕೂ ಹೆಚ್ಚು ಶಿಫಾರಸ್ಸುಗಳನ್ನು ಬಿಡುಗಡೆ ಮಾಡಿದೆ. ಅದರೂ ಈ ಶಿಫಾರಸ್ಸುಗಳು ಕುಸಿತ ಕಂಡಿರುವ ಜನನ ಪ್ರಮಾಣವನ್ನು ಹೆಚ್ಚಿಸಲು ಸಾಕಾಗುವುದಿಲ್ಲ ಎಂಬುದು ತಜ್ಞರ ಅಳಲಾಗಿದೆ.ಈ ಹಿನ್ನೆಲೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾದ ಯೋಜನೆಗಳನ್ನು ಜಾರಿಗೊಳಿಸಲು ಚೀನಿ ಸರ್ಕಾರ ಮುಂದಡಿ ಇಟ್ಟಿದೆ.

1980 ಮತ್ತು 2015ರ ನಡುವೆ ಹೇರಲಾದ ತನ್ನ ಒಂದು ಮಗುವಿನ ನೀತಿಯ ಮೂಲಕ, ಚೀನಾ ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಬಹುವಾಗಿ ಸಫಲವಾಗಿತ್ತು. ಆದರೆ ಜನನ ಪ್ರಮಾಣ ಕಡಿಮೆಯಾಗಿರುವುದು ಚೀನಾ ಸರ್ಕಾರವನ್ನು ಆತಂಕಕ್ಕೆ ದೂಡಿದ್ದು, 2021ರಲ್ಲಿ ಈ ನೀತಿಯನ್ನು ಪರಿಷ್ಕರಿಸಲಾಯಿತು. ಚೀನಾದ ಪೋಷಕರು ಈಗ ಮೂವರು ಮಕ್ಕಳನ್ನು ಪಡೆಯುವ ಅವಕಾಶ ಹೊಂದಿದ್ದಾರೆ. ಆದರೆ ಕೋವಿಡ್‌ ಸಮಯದಲ್ಲಿ ಹೆಚ್ಚು ಮಕ್ಕಳನ್ನು ಪಡೆಯಲು, ಚೀನಿ ಪೋಷಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಶಿಶುಪಾಲನಾ ಮತ್ತು ಶಿಕ್ಷಣ ವೆಚ್ಚಗಳು, ಕಡಿಮೆ ಆದಾಯ, ದುರ್ಬಲ ಸಾಮಾಜಿಕ ಸುರಕ್ಷತೆ ಮತ್ತು ಲಿಂಗ ಅಸಮಾನತೆಗಳು, ಚೀನಿ ಯುವ ಸಮುದಾಯವನ್ನು ಹೆಚ್ಚು ಮಕ್ಕಳನ್ನು ಪಡೆಯುವಂತೆ ಪ್ರೋತ್ಸಾಹಿಸುತ್ತಿಲ್ಲ ಎನ್ನಲಾಗಿದೆ. ಯುವ ಸಮುದಾಯದ ಈ ನಿರುತ್ಸಾಹ ಕಂಡು ಚೀನಾ ಸರ್ಕಾರ ಮತ್ತಷ್ಟು ಚಿಂತೆಗೀಡಾಗಿದೆ.
ಈ ತಿಂಗಳ ಚೀನಾದ ಪೀಪಲ್ಸ್ ಪೊಲಿಟಿಕಲ್ ಕನ್ಸಲ್ಟೇಟಿವ್ ಕಾನ್ಫರೆನ್ಸ್ (CPPCC) ವಾರ್ಷಿಕ ಸಭೆಯಲ್ಲಿ, ಜನನ ದರವನ್ನು ಹೆಚ್ಚಿಸುವ ಕುರಿತು ಹಲವು ಪ್ರಸ್ತಾವನೆಗಳನ್ನು ಮಂಡಿಸಲಾಗಿದೆ. ಚೀನಾದಲ್ಲಿ ಕಳೆದ ವರ್ಷ ಆರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಜನಸಂಖ್ಯೆಯು ಕುಗ್ಗುತ್ತಿದೆ ಎಂಬುದರತ್ತ ದತ್ತಾಂಶವು ಬೊಟ್ಟು ಮಾಡಿ ತೋರಿಸಿದೆ. ಚೀನಾ ತನ್ನ ವಯಸ್ಸಾದ ಮತ್ತು ಕ್ಷೀಣಿಸುತ್ತಿರುವ ಜನಸಂಖ್ಯೆಯ ಬಗ್ಗೆ ಅತೀವ ಕಾಳಜಿ ಹೊಂದಿದ್ದು, ಯುವಕರ ಸಂಖ್ಯೆಯನ್ನು ಹೆಚ್ಚಿಸಲು ಯೋಚಿಸುತ್ತಿದೆ.