ವಿಶೇಷಚೇತನ ಮಹಿಳೆಯ ಅತ್ಯಾಚಾರಗೈದ ಸೂರಿಂಜೆ ನಿವಾಸಿ ರಾಜಾ ಭಟ್,ಪ್ರಕರಣ ದಾಖಲು,ಆರೋಪಿ ಪರಾರಿ.

ಕರಾವಳಿ

ಮನೆಯಲ್ಲಿ ಒಂಟಿಯಾಗಿದ್ದ ವಿಶೇಷ ಚೇತನ ಮಹಿಳೆ ಮೇಲೆ ವೃದ್ಧನೋರ್ವ ಅತ್ಯಾಚಾರವೆಸಗಿರುವ ಆತಂಕಕಾರಿ ಘಟನೆಯೊಂದು ನಡೆದಿದೆ. ಈ ಬಗ್ಗೆ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೂರಿಂಜೆ ನಿವಾಸಿ ರಾಜಾ ಭಟ್(65) ಆರೋಪಿ. ವಿಶೇಷ ಚೇತನ ಮಹಿಳೆಯು ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದರು. ಇತ್ತೀಚೆಗೆ ಮಹಿಳೆಯ ಸಹೋದರ ಹಾಗೂ ಅವರ ಪತ್ನಿ ಕೆಲಸಕ್ಕೆ ತೆರಳಿದ್ದ ವೇಳೆ ಮಹಿಳೆ ಮನೆಯಲ್ಲಿ ಒಂಟಿಯಾಗಿ ಇದ್ದರು. ಈ ಸಂದರ್ಭ ರಾಜಾ ಭಟ್ ಮನೆಗೆ ಬಂದಿದ್ದು, ಪುಸಲಾಯಿಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.ಬಳಿಕ ನೆರೆಮನೆಯವರಿಂದ ವಿಚಾರ ತಿಳಿದು ಮಹಿಳೆಯ ಸಹೋದರ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ಬಳಿಕ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ರಾಜಾ ಭಟ್ ಮನೆಮಂದಿಯನ್ನು ತೊರೆದು ಬಾಡಿಗೆ ಮನೆಯಲ್ಲಿ ಒಬ್ಬರೇ ನೆಲೆಸಿದ್ದರು.ಹಗಲಿನ ಹೊತ್ತು ವಿಶೇಷ ಚೇತನ ಮಹಿಳೆ ಮಾತ್ರ ಮನೆಯಲ್ಲಿ ಇದ್ದರು.ಈ ಬಗ್ಗೆ ಮಾಹಿತಿಯಿದ್ದ ರಾಜಾ ಭಟ್ ಮಹಿಳೆ ಒಬ್ಬಂಟಿಯಾಗಿದ್ದ ವೇಳೆ ಬಂದು ಅತ್ಯಾಚಾರ ನಡೆಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರಾಜಾ ಭಟ್ ತಲೆ ಮರೆಸಿಕೊಂಡಿದ್ದಾರೆ. ಸದ್ಯ ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.