ಆರೋಪಿಯ ಪರವಾಗಿ ರಾಜೇಶ್ ಕುಮಾರ್ ಅಮ್ಟಾಡಿ ವಾದಿಸಿದ್ದರು
ಮಂಗಳೂರಿನ ನಾನಾ ಕಡೆಗಳಲ್ಲಿ ದಾಖಲಾಗಿದ್ದ ಶೂಟೌಟ್ ಪ್ರಕರಣಗಳಲ್ಲಿ ಬನ್ನಂಜೆರಾಜನನ್ನು ದೋಷಮುಕ್ತಗೊಳಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಬಂಟ್ಸ್ ಹಾಸ್ಟೆಲ್ ನಿವಾಸಿ ಇರವಿನ್ ಪಿಂಟೋ ಮತ್ತು ಅವರ ಪತ್ನಿ ರಾತ್ರಿ ಮದುವೆ ಸಮಾರಂಭಕ್ಕೆ ಹೋಗಿ ವಾಪಸಾಗುವ ವೇಳೆ ಹೊಯ್ಗೆ ಬಜಾರ್ ಬಳಿ ಅಪರಿಚಿತರು ಕಾರನ್ನು ಅಡ್ಡಗಟ್ಟಿ ಶೂಟೌಟ್ ಮಾಡಿ ಕೊಲೆ ಯತ್ನ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಬನ್ನಂಜೆರಾಜ ಮತ್ತು ಆತನ ಸಹಚರರ ಮೇಲೆ ಪ್ರಕರಣ ದಾಖಲಾಗಿತ್ತು. ರೋಹನ್ ಕಾರ್ಪೋ ರೇಶನ್ ಮಾಲಕ ರೋಹನ್ ಮೊಂತೇರೋ ಅವರ ಕಚೇರಿಯ ಮೇಲೆ ಗುಂಡು ಹಾರಿಸಿ,ಕೊಲೆ ಯತ್ನ ನಡೆಸಿ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಬನ್ನಂಜೆರಾಜನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.ಪೃಥ್ವಿ ಡೆವಲಪರ್ಸ್ ಮತ್ತು ಬಿಲ್ದರ್ಸ್‌ನ ಮಾಲಕ ಸುರೇಶ ಭಂಡಾರಿ ತನ್ನ ಪರಿವಾರದೊಂದಿಗೆ ಕದ್ರಿ ಪಾರ್ಕ್ ಬಳಿ ಕಾರಿನಲ್ಲಿದ್ದ ಸಮಯದಲ್ಲಿ ಅಪರಿಚಿತರು ಬೆೈಕ್‌ನಲ್ಲಿ ಬಂದು ಶೂಟೌಟ್ ಮಾಡಿ ಕೊಲೆ ಯತ್ನ ನಡೆಸಿದ್ದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶೂಟೌಟಿಗೆ ಸಂಬಂಧ ಪಟ್ಟ ಮೂರೂ ಪ್ರಕರಣಗಳಲ್ಲಿ ಪೊಲೀಸರು ತನಿಖೆ ನಡೆಸಿ ಬನ್ನಂಜೆರಾಜನ ಮತ್ತು ಆತನ ಸಹಚರರ ಮೇಲೆ ದೋಷಾರೋಪಣಾ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಘಟನೆಗಳು ನಡೆದ ಸಮಯ ಬನ್ನಂಜೆರಾಜ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. 2015ರಲ್ಲಿ ಮೊರಾಕೋ ದೇಶದ ಪೊಲೀಸರು ಆತನನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಿದ್ದರು.ನಂತರ ಆತನ ವಿರುದ್ಧ ಭಾರತದಲ್ಲಿ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಪೊಲೀಸರು
ತನಿಖೆ ನಡೆಸಿ ಹೆಚ್ಚುವರಿ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದರು.ಈ ಮೂರೂ ಶೂಟೌಟ್ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬನ್ನಂಜೆ ರಾಜನನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.
ಆರೋಪಿಯ ಪರವಾಗಿ ಪಿ.ಪಿ ಹೆಗ್ಡೆ ಅಸೋಸಿಯೇಟ್‌ನ ರಾಜೇಶ್‌ಕುಮಾರ್ ಅಮ್ಟಾಡಿ ವಾದಿಸಿದ್ದರು.ಬನ್ನಂಜೆ ರಾಜನ ವಿರುದ್ಧ ನಕಲಿ ಪಾಸ್ ಪೋರ್ಟ್ ಮತ್ತು ಒಂದು ಇ.ಡಿ ಪ್ರಕರಣದ ತನಿಖೆಗೆ ಬಾಕಿ ಇರುತ್ತದೆ. ಬನ್ನಂಜೆರಾಜನ ಮೇಲೆ ದಾಖಲಾಗಿದ್ದ ಬಾಕಿ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದ್ದು,ಹೈಕೋರ್ಟ್‌ನಲ್ಲಿ ರಾಜನ ಪರವಾಗಿ ಮಂಗಳೂರಿನ ಖ್ಯಾತ ನ್ಯಾಯವಾದಿ ಪದ್ಮಪ್ರಸಾದ್ ಹೆಗ್ಡೆ ವಾದಿಸಿದ್ದರು.