ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲು ತಿಣುಕಾಟ; ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್.!

ರಾಜ್ಯ

ರಾಷ್ಟ್ರ ರಾಜದಾನಿಯಲ್ಲಿ ಸತತವಾಗಿ ಮೂರು ದಿನಗಳ ಕಾಲ ಸಭೆಯ ಮೇಲೆ ಸಭೆಗಳನ್ನು ನಡೆಸಿದರೂ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಬಿಜೆಪಿ ಹೈಕಮಾಂಡಿಗೆ ಸಾಧ್ಯವಾಗಿಲ್ಲ. ಸೋಮವಾರ ಬಿಡುಗಡೆಯಾಗಬೇಕಿತ್ತು, ಅಂದು ಬಿಡುಗಡೆ ಭಾಗ್ಯ ಕಂಡಿಲ್ಲ. ಮಂಗಳವಾರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದರು, ಬುಧವಾರದಂದು ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗುವ ಸಾಧ್ಯತೆಯಿದೆ ಎಂದು ಬೊಮ್ಮಾಯಿ ತಿಳಿಸಿದ್ದರು ಆದರೆ ಇಬ್ಬರ ಮಾತಿಗೂ ಅಂತ್ಯ ಕಾಣಲಿಲ್ಲ.

ಇದೀಗ ಪಟ್ಟಿಯು ಅಂತಿಮ ಹಂತದಲ್ಲಿದೆ. ನಾವು ಸಭೆಗಳನ್ನು ನಡೆಸುತ್ತಾ ಇದ್ದೇವೆ ಮತ್ತು ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಬಗ್ಗೆ ಚರ್ಚೆ ನಡೆಸಿದ್ದೇವೆ. ಗೃಹ ಮಂತ್ರಿ ಅಮಿತ್ ಶಾ ರವರು ರಾಜಧಾನಿಯಲ್ಲಿಲ್ಲ, ಅವರು ಮಂಗಳವಾರ ಸಂಜೆ ದೆಹಲಿಗೆ ಮರಳುವ ನಿರೀಕ್ಷೆಯಿದೆ. ಶಾ ಮತ್ತು ನರೇಂದ್ರಮೋದಿ ಮತ್ತೊಮ್ಮೆ ಸಭೆ ನಡೆಸಿದ ನಂತರ ಪಟ್ಟಿಯನ್ನು ನಾವು ಪ್ರಕಟಿಸುತ್ತೇವೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಮಂಗಳವಾರ ತಡರಾತ್ರಿ ಅಥವಾ ಬುಧವಾರ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಬಿಜೆಪಿ ಪಕ್ಷವು ಚುನಾವಣೆಯ ಕೆಲವು ಮಾರ್ಗಸೂಚಿಗಳನ್ನು ಹೊಂದಿದ್ದು, ಅದರ ಆಧಾರದ ಮೇಲೆ ಟಿಕೆಟ್ ಎಂದು ತಿಳಿಸಿದ್ದಾರೆ. ಸದ್ಯ ಚೆಂಡು ಈಗ ಬಿಜೆಪಿ ಹೈಕಮಾಂಡ್ ಅಂಗಳದಲ್ಲಿದೆ. ಬೇರೆ ಪಕ್ಷಗಳ ಅಭ್ಯರ್ಥಿಗಳು ಇದೀಗಲೇ ಪ್ರಚಾರ ಆರಂಭಿಸಿದ್ದಾರೆ, ಆಡಳಿತಾರೂಢ ಬಿಜೆಪಿ ಇನ್ನೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ.

ಕೇಂದ್ರ ಚುನಾವಣಾ ಸಮಿತಿಯ ಭಾಗವಾಗಿರುವ ಬಿಎಸ್ ಯಡಿಯೂರಪ್ಪ, ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿ, ಸೋಮವಾರ ಬೆಂಗಳೂರಿಗೆ ಬಂದಿಳಿದ ಬಿಎಸ್ವೈ ಮಂಗಳವಾರ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದರು. ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಯಡಿಯೂರಪ್ಪ ಹೇಳಿದ್ದಾರೆ. ಹಲವು ಸಮೀಕ್ಷೆಯ ವರದಿಗಳ ಪ್ರಕಾರ ಬಿಜೆಪಿಗೆ ಬಹುಮತದ ಕೊರತೆ ಇದ್ದು ಹೀಗಾಗಿ, ಪಕ್ಷವು ಮತ್ತೆ ಅಧಿಕಾರ ಪಡೆಯಲು ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ, ಮಾತ್ರವಲ್ಲದೆ ಸೋಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಪಾಯವನ್ನು ತಂದೊಡ್ಡಲು ಸಿದ್ಧರಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.