‘ಬಲಿ ಕಾ ಬಕ್ರಾ’ ‘ಸಂತೋಷ’ ಆಟದಲ್ಲಿ ಗೆಲ್ಲುವರಾರು..?

ರಾಜ್ಯ

ಒಂದು ಕಡೆ ಡಿಕೆಶಿ, ಸಿದ್ರಾಮಣ್ಣನನ್ನು ಕಟ್ಟಿಹಾಕಿ..ಇನ್ನೊಂದು ಕಡೆ ಸೋಮಣ್ಣ ಕಥೆ ಖತಂ.!

ಭಾರತೀಯ ಜನತಾ ಪಕ್ಷ ಬಹುತೇಕ ಹುರಿಯಾಳುಗಳ ಪಟ್ಟಿ ಅಂತಿಮಗೊಳಿಸಿ ಬಿಡುಗಡೆ ಮಾಡಿದೆ. ಹಳೆಯ, ಹಿರಿಯ ನಾಯಕರಿಗೆ ನಿವೃತ್ತಿ ಹೆಸರಿನಲ್ಲಿ ರಾಜಕೀಯದಿಂದಲೇ ದೂರ ಮಾಡಲಾಗಿದೆ. ಕೆಲವೊಂದು ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಪರಿಚಯಿಸಲಾಗಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಯ ಈ ಬಾರಿಯ ಪಟ್ಟಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು ಎರಡು ಹೆಸರುಗಳು ಮಾತ್ರ. ಅವು ಯಾರದೆಂದರೆ ಒಬ್ಬರು ಪದ್ಮನಾಭನಗರ ಶಾಸಕರಾದ ಆರ್ ಅಶೋಕ್, ಮತ್ತೊಬ್ಬರು ಗೋವಿಂದರಾಜ ನಗರ ಶಾಸಕರಾದ ವಿ.ಸೋಮಣ್ಣ ಅವರು.

ಇತ್ತೀಚಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ರಾಜ್ಯದಲ್ಲಿ ಬ್ರಾಹ್ಮಣ ವ್ಯಕ್ತಿಯೊಬ್ಬರು ಹೈಜಾಕ್ ಮಾಡಿ ಆಟ ಆಡುತ್ತಿರುವುದು ಸುಳ್ಳೇನಲ್ಲ. ಕೇಂದ್ರ ಹೈಕಮಾಂಡ್ ಇವರಿಗೆ ಬೆಂಬಲ ಕೂಡ ನೀಡುತ್ತಿದೆ. ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ರಂತವರು ಮೂಲೆಗುಂಪಾಗುತ್ತಿದ್ದಾರೆ. ಅದೇ ರೀತಿ ಅಸಲಿ ರಾಜಕಾರಣದಲ್ಲಿರುವ ಕೆಲವರನ್ನು ಕೂಡ ರಾಜಕೀಯ ಚದುರಂಗದಾಟ ಹೆಸರಿನಲ್ಲಿ ಮಣ್ಣು ಮುಕ್ಕಿಸುವ ಕೆಲಸ ಕೂಡ ಸದ್ದಿಲ್ಲದೆ ನಡೆಯುತ್ತಿದೆ.

ಪದ್ಮನಾಭ ನಗರ ಶಾಸಕರಾದ ಆರ್. ಅಶೋಕ್ ರವರಿಗೆ ಪದ್ಮನಾಭ ನಗರ ಜೊತೆಗೆ ಕನಕಪುರ ಕ್ಷೇತ್ರವನ್ನು ನೀಡಲಾಗಿದೆ. ಕನಕಪುರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ಇರುವುದು ಜೆಡಿಎಸ್ ಮಾತ್ರ. ಬಿಜೆಪಿಗೆ ಏನಿದ್ದರೂ ಇಲ್ಲಿ 3 ಇಲ್ಲವೇ ನಾಲ್ಕನೇ ಸ್ಥಾನ. ಮತ್ತೇಕೆ ಸಾಮ್ರಾಟ ಅಶೋಕ ರನ್ನು ಇಲ್ಲಿ ಕಣಕ್ಕಿಳಿಸಿತು ಅನ್ನುವುದೇ ರೋಚಕ.

ಇನ್ನೊಂದು ರೋಚಕ ಇರುವುದು ವರುಣಾ ಕ್ಷೇತ್ರ. ಇಲ್ಲಿ ಸಿದ್ಧರಾಮಯ್ಯರ ಎದುರಾಳಿಯಾಗಿ ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ. ಮತ್ತೊಂದು ಅಚ್ಚರಿ ಏನೆಂದರೆ ಇಲ್ಲಿ ಲಿಂಗಾಯತ ಮತಗಳು ಹೆಚ್ಚಿರುವುದರಿಂದ ಕದನ ರೋಚಕತೆ ಪಡೆದುಕೊಳ್ಳಲಿದೆ. ಸೋಮಣ್ಣ ಲಿಂಗಾಯತ ರಾಗಿರುವುದರಿಂದ ಸಿದ್ದರಾಮಯ್ಯ ವಿರುದ್ಧ ಲಿಂಗಾಯತ ಮತಗಳು ಚಲಾವಣೆಯಾದರೆ ಫಲಿತಾಂಶವೇ ವಿಭಿನ್ನ ಆಗುವ ಸಾಧ್ಯತೆ ಇದೆ. ಆದರೆ ಇದು ಎಷ್ಟರಮಟ್ಟಿಗೆ ಸಫಲ ಆಗುತ್ತದೆ ಅನ್ನುವುದೇ ಯಕ್ಷಪ್ರಶ್ನೆ.

ಬಲು ಅಚ್ಚರಿ ಇರುವುದು ಇಲ್ಲಿಯೇ. ಸೋಮಣ್ಣ ಶಾಸಕರಾಗಿದ್ದ ಕ್ಷೇತ್ರ ಗೋವಿಂದರಾಜ ನಗರ. ಆದರೆ ತಮ್ಮ ಪ್ರಬಲ ಕ್ಷೇತ್ರ ಬಿಟ್ಟು ಸೋಮಣ್ಣ ನಿಗೆ ನೀಡಿರುವ ಮತ್ತೊಂದು ಕ್ಷೇತ್ರ ಕಾಂಗ್ರೆಸ್ ಹ್ಯಾಟ್ರಿಕ್ ಗೆಲುವು ಕಂಡ ಚಾಮರಾಜನಗರ. ಇಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷದ ಸಿ.ಪುಟ್ಟರಂಗಶೆಟ್ಟಿ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ.
ಸೋಮಣ್ಣರಿಗೆ ಮಾತ್ರ ಎರಡು ಕ್ಷೇತ್ರ ಮಾಡು ಇಲ್ಲವೇ ಮಡಿ. ಅವರಿಗೆ ಸಿಕ್ಕಿರುವುದು ಎರಡು ಕಾಂಗ್ರೆಸ್ಸಿನ ಭದ್ರಕೋಟೆಗಳು. ಅಶೋಕ್ ಕನಕಪುರದಲ್ಲಿ ಸೋತರೂ ಪದ್ಮನಾಭನಗರ ದಲ್ಲಿ ಅನಾಯಾಸವಾಗಿ ಗೆಲ್ಲುತ್ತಾರೆ. ಆದರೆ ಸೋಮಣ್ಣರಿಗೆ ಒಂದಾ ವರುಣಾದಲ್ಲಿ ಸಿದ್ದರಾಮಯ್ಯರನ್ನು ಸೋಲಿಸಬೇಕು. ಇಲ್ಲದಿದ್ದರೆ ಚಾಮರಾಜನಗರದಲ್ಲಿ ಪುಟ್ಟರಂಗಶೆಟ್ಟಿ ಯನ್ನಾದರೂ ಸೋಲಿಸಬೇಕು. ಇಲ್ಲವಾದರೆ ಅವರ ರಾಜಕೀಯ ಖತಂ.

ರಾಜಕಾರಣದಲ್ಲಿ ಒಂದು ಮಾತಿದೆ. ಇಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ. ರಾಜಕೀಯ ಪಡಸಾಲೆಯಲ್ಲಿ ಒಂದು ಮಾತು ಕೇಳಿ ಬರುತ್ತಿದೆ. ಈ ಬಾರಿ ರಾಜ್ಯ ಬಿಜೆಪಿಯಲ್ಲಿ ಕೈ ಮೇಲಾಗಿದ್ದು ‘ಸಂತೋಷ’ ಬಣದವರದ್ದು. ಯಡಿಯೂರಪ್ಪ, ಈಶ್ವರಪ್ಪ, ಶೆಟ್ಟರ್ ಯುಗಾಂತ್ಯ ಕಂಡಿದೆ. ‘ಸಂತೋಷ’ ಬಣಕ್ಕೆ ದೊಡ್ಡ ತೊಡಕಾಗಿರುವುದು ಸೋಮಣ್ಣ, ಅಶೋಕ್ ಮಾತ್ರ. ಅವರನ್ನು ಹರಕೆಯ ಕುರಿ ಮಾಡಲಾಗುತ್ತಿದೆ ಅನ್ನುವುದು ಜೋರಾಗಿ ಕೇಳಿ ಬರುತ್ತಿದೆ.

ಮತ್ತೊಂದು ಮೂಲದ ಪ್ರಕಾರ ಕನಕಪುರ, ವರುಣಾ ಕ್ಷೇತ್ರದಲ್ಲಿ ಡಿಕೆಶಿ, ಸಿದ್ದರಾಮಯ್ಯ ರಿಗೆ ಪ್ರಬಲ ಪೈಪೋಟಿ ಅಭ್ಯರ್ಥಿಗಳನ್ನು ನೀಡಿ ಅವರು ಕ್ಷೇತ್ರ ಬಿಟ್ಟು ಹೊರಬರದೇ ಕಟ್ಟಿಹಾಕುವ ಪ್ಲ್ಯಾನ್ ಎನ್ನಲಾಗುತ್ತಿದೆ. ಇವರಿಬ್ಬರೂ ಕ್ಷೇತ್ರ ಬಿಟ್ಟು ಹೊರಗೆ ಪ್ರಚಾರಕ್ಕೆ ಬರದಂತಹ ವಾತಾವರಣ ಸೃಷ್ಟಿಯಾದರೆ ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಠ 20-25 ಸೀಟು ನಷ್ಟವಾಗುವ ಸಾಧ್ಯತೆಯೂ ಇದೆ. ‘ಸಂತೋಷ’ ದ ಆಟದಲ್ಲಿ ಸೋಮಣ್ಣ ಬಲಿಯಾಗುತ್ತಾರೋ ಅಥವಾ ಡಿಕೆಶಿ-ಸಿದ್ಧರಾಮಯ್ಯ ಕಟ್ಟಿಹಾಕಲ್ಪಡುತ್ತಾರೋ ಅನ್ನುವುದೇ ಇದೀಗ ಉಳಿದಿರುವ ಕುತೂಹಲ.