ರಘುಪತಿ ಭಟ್’ರ ಹೃದಯ ಹೀನ ನಡವಳಿಕೆಯೇ ಇಂದಿನ ಕಣ್ಣೀರಿಗೆ ಕಾರಣ:ನವೀನ್ ಸೂರಿಂಜೆ

ರಾಜ್ಯ

ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎಂದು ರಘುಪತಿ ಭಟ್ಟರು ಕಣ್ಣೀರು ಹಾಕಿದ್ದಾರೆ. ನಿಜವಾಗಿಯೂ ಕಣ್ಣೀರು ಹಾಕಬೇಕಿದ್ದ ಸಮಯದಲ್ಲಿ ಭಟ್ಟರು ಹೃದಯ ಹೀನರಂತೆ ವರ್ತಿಸಿದ ಪರಿಣಾಮ ಇಂದಿನ ಸ್ಥಿತಿ.

ಅವತ್ತು ಹಾಜಬ್ಬ ಮತ್ತು ಹಸನಬ್ಬ ಎಂಬ ತಂದೆ-ಮಗನನ್ನು ಆದಿ ಉಡುಪಿಯ ನಡು ರಸ್ತೆಯಲ್ಲಿ ಬೆತ್ತಲು ಮಾಡಲಾಯಿತು. ಈ ರೀತಿ ಬೆತ್ತಲು ಮಾಡಿ ಬೆತ್ತಲಾದ ಆರೋಪಿಯನ್ನು ಖುಲಾಸೆಗೂ ಮುನ್ನವೇ ಬೆಂಬಲಿಸಿ ಪುರಸಭೆಗೆ ನಾಮ ನಿರ್ದೇಶನ ಮಾಡಲಾಯಿತು. ಆಗ ಭಟ್ಟರು ಕಣ್ಣೀರು ಹಾಕಲಿಲ್ಲ. ಒಬ್ಬ ಉಗ್ರ ಹಿಂದುತ್ವವಾದಿಯನ್ನು ಭಟ್ಟರೇ ಬೆಳೆಸಿದರು‌.

ತಾನು ಬೆಳೆಸಿದ್ದು ಉಗ್ರ ಹಿಂದುತ್ವವಾದಿ ಎಂದು ಅಂದು ರಘುಪತಿ ಭಟ್ಟರು ಭೀಗಿದ್ದರು. ವಾಸ್ತವವಾಗಿ ಅದು “ಕಮರ್ಷಿಯಲ್ ಹಿಂದುತ್ವ”ವಾಗಿತ್ತು.
ಇದೇ ಹಿಂದುತ್ವವಾದಿಯು ಮೊಗವೀರರಿಗೆ ಸರ್ಕಾರ ನೀಡುವ ಸಬ್ಸಿಡಿ ಸೀಮೆಎಣ್ಣೆಯಲ್ಲಿ ಅವ್ಯವಹಾರ ಮಾಡಿದ್ದ. ಆಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. ಅದರೂ ಆಗ ಇದೇ ಹಿಂದುತ್ವವಾದಿಯು ಕಾಂಗ್ರೆಸ್ಸಿನ ಮುಸ್ಲಿಂ ಶಾಸಕರೊಬ್ಬರ ಸಹಾಯ ಪಡೆದು ಜೈಲು ಪಾಲಾಗುವುದರಿಂದ ತಪ್ಪಿಸಿಕೊಂಡಿದ್ದ. ದನ ಸಾಗಾಟ ಮಾಡಿದ್ದಕ್ಕೆ ಮುಸ್ಲಿಂ ವೃದ್ದರೊಬ್ಬರನ್ನು ಮಗನ ಸಹಿತ ಬೆತ್ತಲು ಮಾಡಿದವರು ತಾವು ಬಚಾವಾಗಲು ಮುಸ್ಲಿಂ ಶಾಸಕರ ನೆರವು ಪಡೆದುಕೊಳ್ಳಲು ತಡೆಯಾಗಲಿಲ್ಲ. ಜೊತೆಗೆ ತನ್ನದೇ ಸಮುದಾಯಕ್ಕೆ ಸೀಮೆಎಣ್ಣೆಯನ್ನು ವಂಚಿಸಿದ.

ಮುಸ್ಲಿಂ ಹುಡುಗಿಯರು ಶಿಕ್ಷಣ ಪಡೆಯಬಾರದು ಎಂಬ ಒಂದೇ ಕಾರಣಕ್ಕೆ ಬುರ್ಕಾ ವಿವಾದವನ್ನು ಉಡುಪಿಯಿಂದ ಪ್ರಾರಂಭಿಸಿದ. ಆಗಲಾದರೂ ರಘುಪತಿ ಭಟ್ಟರು ಶಾಸಕರಂತೆ ವರ್ತಿಸಿದ್ದರೆ ಇವತ್ತು ಕಣ್ಣೀರು ಹಾಕುವ ಪರಿಸ್ಥಿತಿ ಬರುತ್ತಿರಲಿಲ್ಲ.

ಉಡುಪಿ ಮಹಾಲಕ್ಷ್ಮಿ ಕೋ ಅಪರೇಟಿವ್ ಬ್ಯಾಂಕಿನ ಮ್ಯಾನೇಜರ್ ಸುಬ್ಬಣ್ಣ ಆತ್ಮಹತ್ಯೆ ಮಾಡಿಕೊಂಡರು. ದಲಿತ ಸಮುದಾಯಕ್ಕೆ ಸೇರಿದ ಸುಬ್ಬಣ್ಣ ಸಾವಿಗೆ ಬ್ಯಾಂಕಿನ ಅಧ್ಯಕ್ಷರಾಗಿರುವ ಇದೇ ಹಿಂದುತ್ವವಾದಿಯು ಕಾರಣ ಎಂದು ಸುಬ್ಬಣ್ಣನ ಸಹೋದರ ದೂರು ನೀಡಿದರು. ದಲಿತರೊಬ್ಬರ ಸಾವಿಗೆ ಕಾರಣನಾದ ಬಗ್ಗೆ ಎಫ್ಐಆರ್ ದಾಖಲಾದರೂ ಈತ ಮಾತ್ರ ಟಿಕೆಟ್ ಗಾಗಿ ಓಡಾಡುತ್ತಿದ್ದ. ಆಗಲಾದರೂ ಭಟ್ಟರು ಮೃತ ದಲಿತನ ಕುಟುಂಬದ ಜೊತೆ ನಿಂತಿದ್ದರೆ ಭಟ್ಟರಿಗೆ ಇಂದು ಕಣ್ಣೀರು ಹಾಕುವ ಸ್ಥಿತಿ ಬರುತ್ತಿರಲಿಲ್ಲ.

_ಆಗೆಲ್ಲಾ ಬಾಯ್ಮುಚ್ಚಿ ಕೂತಿದ್ದ ಭಟ್ಟರೇನೋ ಈಗ ಕಣ್ಣೀರು ಹಾಕುತ್ತಿದ್ದಾರೆ. ಮತದಾರರು ಭಟ್ಟರಂತೆ ಸುಮ್ಮನಿದ್ದರೆ ಮುಂದೆ ಅವರೂ ಕಣ್ಣೀರು ಹಾಕುವ ಪರಿಸ್ಥಿತಿ ಬರುತ್ತದೆ.